ಸಿನಿಮಾ ಟಿಕೆಟ್'ಗೆ ಇನ್ನು 200 ರು. ಗರಿಷ್ಠ ದರ

Published : Apr 27, 2017, 06:18 AM ISTUpdated : Apr 11, 2018, 01:00 PM IST
ಸಿನಿಮಾ ಟಿಕೆಟ್'ಗೆ ಇನ್ನು 200 ರು. ಗರಿಷ್ಠ ದರ

ಸಾರಾಂಶ

ಪರಭಾಷೆಯ ಚಿತ್ರಕ್ಕೆ ಅದರ ಬಿಡುಗಡೆಯ ಮುನ್ನವೇ ಹೆಚ್ಚಿನ ದರ ನೀಡಿ ಟಿಕೆಟ್‌ ಖರೀದಿಸುವ ಜನರು, ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳ ಬೇಕಿದೆ. ಚಿತ್ರ ನೋಡಿ ಮನರಂಜನೆ ತೆಗೆದುಕೊಳ್ಳಿ, ಆದರೆ ನೀವೇ ಕೊಟ್ಟಹೆಚ್ಚಿನ ಹಣವನ್ನು ವಾಪಸ್‌ ಪಡೆದುಕೊಳ್ಳಿ. ಹಾಗೊಂದು ವೇಳೆ ಚಿತ್ರಮಂದಿರದ ಮಾಲೀಕರು ಹಣ ಕೊಡದಿದ್ದರೆ ವಾಣಿಜ್ಯ ಮಂಡಳಿಗೆ ಕರೆ ಮಾಡಿ. ಅವರಿಗೆ ಬುದ್ಧಿ ಕಲಿಸುವುದು ನಮಗೂ ಗೊತ್ತಿದೆ ಎಂದು ಸಾ.ರಾ.ಗೋವಿಂದು ಗುಡುಗಿದರು.

ಬೆಂಗಳೂರು: ಮಲ್ಟಿಪ್ಲೆಕ್ಸ್‌ ಸೇರಿದಂತೆ ಎಲ್ಲ ಚಿತ್ರಮಂದಿರಗಳ ಪ್ರವೇಶ ಶುಲ್ಕಕ್ಕೆ ಸಂಬಂಧಿಸಿದ ಸರ್ಕಾರದ ರು.200 ಏಕರೂಪದ ದರ ನಿಗದಿ ಆದೇಶ ಏ.27ರ ಗುರುವಾರದಿಂದಲೇ ಜಾರಿಯಾಗಲಿದ್ದು ಇದರ ನೇರ ಪರಿಣಾಮ ಬಾಹುಬಲಿ-2 ಸಿನಿಮಾ ಮೇಲೆ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ‘ಬಾಹುಬಲಿ-2' ಚಿತ್ರಕ್ಕೆ ಮುಗಂಡ ಟಿಕೆಟ್‌ ಖರೀದಿಸಿದವರು, ತಾವೇ ಮುಂದೆ ನಿಂತು ಹೆಚ್ಚಿನ ಹಣ ವಾಪಸ್‌ ಪಡೆಯಬೇಕು. ಚಿತ್ರಮಂದಿರದ ಮಾಲೀಕರು ಇದಕ್ಕೆ ಸಹಕರಿಸಬೇಕು ಎಂದು ಸೂಚಿಸಿದ್ದಾರೆ. 

ಸರ್ಕಾರದ ಆದೇಶ ಜಾರಿಯ ಮುನ್ಸೂಚನೆಯಿದ್ದರೂ ಬೆಂಗಳೂರಿನ ಲಾಲ್‌'ಬಾಗ್‌ ರಸ್ತೆಯ ಊರ್ವಶಿ, ತಾವರೆಕೆರೆಯ ಬಾಲಾಜಿ ಸೇರಿದಂತೆ ನಗರದ ಕೆಲವು ಚಿತ್ರಮಂದಿರಗಳಲ್ಲಿ ‘ಬಾಹುಬಲಿ-2' ಚಿತ್ರದ ಪ್ರವೇಶಕ್ಕೆ ಹೆಚ್ಚಿನ ದರದಲ್ಲಿ ಮುಂಗಡ ಟಿಕೆಟ್‌ ಮಾರಾಟವಾಗಿವೆ. ಇದು ವಾಣಿಜ್ಯ ಮಂಡಳಿ ಗಮನಕ್ಕೂ ಬಂದಿದೆ. ನೂರಾರು ಜನರು ಫೋನ್‌ ಮಾಡಿ ತಮ್ಮ ದೂರು ಹೇಳಿಕೊಂಡಿದ್ದಾರೆ. ವಾಣಿಜ್ಯ ಮಂಡಳಿ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಯಾರು ಕೂಡ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಗುರುವಾರವೇ ಸರ್ಕಾರದ ಆದೇಶ ಹೊರಬೀಳುತ್ತಿದೆ. ಸಾರ್ವಜನಿಕರೇ ಮುಂದೆ ನಿಂತು ತಾವು ನೀಡಿದ ಹೆಚ್ಚಿನ ಹಣ ವಾಪಸ್‌ ಪಡೆದುಕೊಳ್ಳಬೇಕು. ಚಿತ್ರಮಂದಿರಗಳ ಮಾಲೀಕರು ಇದಕ್ಕೆ ಸ್ಪಂದಿಸಬೇಕು. ಹಾಗೊಂದು ವೇಳೆ, ನಿರ್ಲಕ್ಷ್ಯ ವಹಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಪರಭಾಷೆಯ ಚಿತ್ರಕ್ಕೆ ಅದರ ಬಿಡುಗಡೆಯ ಮುನ್ನವೇ ಹೆಚ್ಚಿನ ದರ ನೀಡಿ ಟಿಕೆಟ್‌ ಖರೀದಿಸುವ ಜನರು, ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳ ಬೇಕಿದೆ. ಚಿತ್ರ ನೋಡಿ ಮನರಂಜನೆ ತೆಗೆದುಕೊಳ್ಳಿ, ಆದರೆ ನೀವೇ ಕೊಟ್ಟಹೆಚ್ಚಿನ ಹಣವನ್ನು ವಾಪಸ್‌ ಪಡೆದುಕೊಳ್ಳಿ. ಹಾಗೊಂದು ವೇಳೆ ಚಿತ್ರಮಂದಿರದ ಮಾಲೀಕರು ಹಣ ಕೊಡದಿದ್ದರೆ ವಾಣಿಜ್ಯ ಮಂಡಳಿಗೆ ಕರೆ ಮಾಡಿ. ಅವರಿಗೆ ಬುದ್ಧಿ ಕಲಿಸುವುದು ನಮಗೂ ಗೊತ್ತಿದೆ ಎಂದು ಸಾ.ರಾ.ಗೋವಿಂದು ಗುಡುಗಿದರು. ಬಜೆಟ್‌ ಮೂಲಕವೇ ಸರ್ಕಾರ ನಿಗದಿ ಮಾಡಿದ ಏಕರೂಪದ ದರದ ಆದೇಶ ಬುಧವಾರವೇ ಅಧಿಕೃತವಾಗಿ ಹೊರಬೀಳಬೇ ಕಿತ್ತು. ಮಂಗಳವಾರ ರಾತ್ರಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಕ್ಕೆ ಸಹಿ ಹಾಕಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಆದೇಶ ತಡವಾಗಿದೆ. ಹೀಗಾಗಿ ಗುರುವಾರ ಬೆಳಗ್ಗೆ 11 ಗಂಟೆಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಇಲಾಖೆ ಪ್ರಧಾನ ಕಾರ್ಯ ದರ್ಶಿ ಭರವಸೆ ನೀಡಿದ್ದಾರೆ. ಅವರ ಮಾತಿನ ಮೇಲೆ ವಿಶ್ವಾಸವಿದೆ. ನಾಳೆಯೇ ಆದೇಶ ಜಾರಿಯಾಗುವುದು ನೂರರಷ್ಟುಗ್ಯಾರಂಟಿ ಎಂದು ಹೇಳಿದರು. 

ದರ ನಿಗದಿ ಸಂಬಂಧ ವಾಣಿಜ್ಯ ಮಂಡಳಿ ಸೇರಿದಂತೆ ಚಿತ್ರೋದ್ಯಮ ಎಲ್ಲ ಸಂಘ-ಸಂಸ್ಥೆಗಳು ನಡೆಸಿದ ಹೋರಾಟಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ ಸರ್ಕಾರಕ್ಕೆ ಇದೇ ವೇಳೆ ಅವರು ಅಭಿನಂದನೆ ಸಲ್ಲಿಸಿದರು. ಪದಾಧಿಕಾರಿಗಳಾದ ಎನ್‌ ಎಂ ಸುರೇಶ್‌, ರಾಮಮೂರ್ತಿ, ಉಮೇಶ್‌ ಬಣಕಾರ್‌ ಹಾಜರಿದ್ದರು.

ನೀವಿಲ್ಲಿ ಇರೋದೆ ಕಷ್ಟವಾದೀತು, ಎಚ್ಚರಿಕೆ:
ನಗರದ ಲಾಲ್‌'ಬಾಗ್‌ ರಸ್ತೆ ಊರ್ವಶಿ ಚಿತ್ರಮಂದಿರದ ಮಾಲೀಕರು ಕನ್ನಡದ ವಿರೋಧಿ. ಕನ್ನಡಿಗರ ಆಕ್ರೋಶಕ್ಕೆ ಮಣಿದು ಸತ್ಯರಾಜ್‌ರಂತಹವರೇ ತಾವು ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಿದ್ದರೂ, ‘ಊರ್ವಶಿ' ಚಿತ್ರ ಮಂದಿರದ ಮಾಲೀಕರು ಮಾತ್ರ, ಇದುವರೆಗೂ ತಮ್ಮ ಚಿತ್ರ ಮಂದಿರದಲ್ಲಿ ಕನ್ನಡ ಚಿತ್ರ ಹಾಕಿಲ್ಲ. ಇಷ್ಟಾಗಿಯೂ ಈಗ ‘ಬಾಹುಬಲಿ-2' ಚಿತ್ರದ ಪ್ರವೇಶಕ್ಕೆ ಹೆಚ್ಚಿನ ದರದಲ್ಲಿ ಮುಂಗಡ ಟಿಕೆಟ್‌ ಮಾರಾಟ ಮಾಡಿದ್ದಾರೆನ್ನುವ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಖಚಿತ ಪಡಿಸಿಕೊಳ್ಳಲು ಕರೆ ಮಾಡಿದರೆ ನಮ್ಮ ಕರೆ ಸ್ವೀಕರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಅವರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.ಕರ್ನಾಟಕದಲ್ಲಿಯೇ ಇದ್ದು ಕನ್ನಡವನ್ನು ಕಡೆಗಣಿಸುತ್ತಿರುವ ಅವರು, ಇಲ್ಲಿ ಇರುವುದೇ ಕಷ್ಟವಾಗಬೇಕಾಗುತ್ತದೆ. ಯಾಕೆಂದ್ರೆ ಅಣ್ಣಾವ್ರು ಹೇಳಿದಂತೆ ಮೊದಲು ‘ನಮ್ಮನ್ನು ಬದುಕಲು ಬಿಡಿ, ಆಮೇಲೆ ನೀವು ಬದುಕಿ' ಎನ್ನುವ ಮಾತಿನಂತೆ ಹೋರಾಟ ಶುರುಮಾಡಬೇಕಾಗುತ್ತದೆ ಎಂದು ಸಾ.ರಾ. ಗೋವಿಂದು ಕಿಡಿ ಕಾರಿದರು.

ಮಲ್ಟಿಪ್ಲೆಕ್ಸ್ ಲೂಟಿಗೆ ಕಡಿವಾಣ ಹಾಕಿದೆ:
ಮಲ್ಟಿಪ್ಲೆಕ್ಸ್‌ ಮಾಲೀಕರು ಕರ್ನಾಟಕದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಅಲ್ಲಿ ಹಗಲು ದರೋಡೆ ನಡೆಯುತ್ತಿದೆ. ಒಂದೆಡೆ ಜನ ಸಾಮಾನ್ಯರ ಕೈಗೆಟುಕದ ಪ್ರವೇಶ ದರ, ಮತ್ತೊಂದೆಡೆ ತಿಂಡಿ-ತಿನಿಸಿಗೂ ದುಬಾರಿ ಬೆಲೆ. ಈ ಅಸಮಾನತೆ ತೊಲಗಬೇಕಿದೆ. ಸದ್ಯಕ್ಕೆ ಸರ್ಕಾರದ ಆದೇಶ ಅವರ ಪ್ರವೇಶ ಶುಲ್ಕಕ್ಕೆ ಕಡಿವಾಣ ಹಾಕಿದೆ. ಉಳಿದಂತೆ ತಿಂಡಿ-ತಿನಿಸುಗಳನ್ನು ಬೇಕಾದರೆ ಅವರು, ಎಂಆರ್‌ಪಿ ಬೆಲೆಗಿಂತ 1 ಅಥವಾ 2 ರೂ.ಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಟ ಮಾಡಲಿ. ಅದು ಬಿಟ್ಟು, ಮೂರರಷ್ಟುಬೆಲೆಯಲ್ಲಿ ಮಾರಾಟ ಮಾಡುವುದನ್ನು ಇನ್ನು ಸಹಿಸುವುದಿಲ್ಲ. ಇದರ ವಿರುದ್ಧ ಹೋರಾಟ ಗ್ಯಾರಂಟಿ. ಸಾರ್ವಜನಿಕರು ಕೂಡ ಇದನ್ನು ಪ್ರಶ್ನಿಸಬೇಕಿದೆ. ಅವರಿಗೆ ಮಂಡಳಿಯ ಎಲ್ಲ ಬೆಂಬಲವೂ ದೊರೆಯಲಿದೆ. ಕನ್ನಡಕ್ಕೆ ಆದ್ಯತೆ ಸಿಗಬೇಕೆನ್ನುವ ಕೂಗಿಗೆ ಸರ್ಕಾರ ಸ್ಪಂದಿಸಿದೆ. ದಿನದ ಪ್ರೈಮ್‌ ಟೈಮ್‌ನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ಆಗಬೇಕು. ಸರ್ಕಾರದ ಆದೇಶದಲ್ಲೂ ಇದನ್ನು ಸ್ಪಷ್ಟಪಡಿಸಲಾಗಿದೆ ಎಂದು ಸಾ. ರಾ. ಗೋವಿಂದು ಹೇಳಿದರು.

ಕನ್ನಡಪ್ರಭ ವಾರ್ತೆ
epaper.kannadaprabha.in

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2025 Surprising Movie Hits: ಸದ್ದಿಲ್ಲದೇ ರಿಲೀಸ್ ಆಗಿ, ಭರ್ಜರಿ ಮನರಂಜನೆ ನೀಡಿದ 2025ರ ಕನ್ನಡ ಸಿನಿಮಾಗಳು
Bigg Boss Kannada: ಹಲ್ಲುಜ್ಜಲ್ಲ, ಹೀಗೆ ಊಟಕ್ಕೆ ಕೂರೋದು ಸರಿಯಲ್ಲ; Rakshita Shetty ಬಗ್ಗೆ ದೂರು ಒಂದೇ ಎರಡೇ?