
ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಟ ಫಹಾದ್ ಫಾಸಿಲ್ ಸದ್ಯ ತಮ್ಮ ಹೊಸ ಸಿನಿಮಾ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಅಕ್ಟೋಬರ್ 2ರಂದು ತೆರೆಗೆ ಬರಲು ಸಜ್ಜಾಗಿದ್ದು, ಪ್ರಮೋಷನ್ ವೇಳೆ ಫಹಾದ್ ಆಡಿರುವ ಮಾತುಗಳು ಇದೀಗ ಗಮನ ಸೆಳೆಯುತ್ತಿವೆ. ಅದರಲ್ಲೂ ತಮ್ಮ ಪತ್ನಿ ಹಾಗೂ ನಟಿ ನಜ್ರಿಯಾ ನಜೀಮ್ ಬಗ್ಗೆ ಅವರು ಮಾಡಿದ ತಮಾಷೆಯ ಕಾಮೆಂಟ್ ಅಭಿಮಾನಿಗಳ ಗಮನ ಸೆಳೆದಿದೆ.
ಫಹಾದ್-ನಜ್ರಿಯಾ ಜೋಡಿ ಬಗ್ಗೆ ಗೊತ್ತೇ ಇದೆ!
ಚಿತ್ರರಂಗದ ಮುದ್ದಾದ ಜೋಡಿಗಳಲ್ಲಿ ಫಹಾದ್ ಫಾಸಿಲ್ ಮತ್ತು ನಜ್ರಿಯಾ ನಜೀಮ್ ಕೂಡ ಒಬ್ಬರು. ಇಬ್ಬರೂ 2014ರಲ್ಲಿ ವಿವಾಹವಾಗಿದ್ದು, ಇಂದಿಗೂ ತಮ್ಮ ವೈಯಕ್ತಿಕ ಬದುಕನ್ನು ಬಹುತೇಕ ಖಾಸಗಿಯಾಗಿಯೇ ಇಟ್ಟುಕೊಂಡಿದ್ದಾರೆ. ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿದ್ದು ‘ಬೆಂಗಳೂರು ಡೇಸ್’ ಸಿನಿಮಾದ ಸಂದರ್ಭದಲ್ಲಿ. ಈ ಚಿತ್ರದಲ್ಲಿ ಫಹಾದ್ ಮತ್ತು ನಜ್ರಿಯಾ ದಂಪತಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಆರಂಭವಾದ ಸ್ನೇಹ, ಪ್ರೀತಿಗೆ ತಿರುಗಿ, ಬಳಿಕ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ 2014ರಲ್ಲಿ ಮದುವೆಯಾಗಿ ಜೀವನ ಸಂಗಾತಿಗಳಾದರು.
ಮಧ್ಯೆ ಇವರಿಬ್ಬರ ವಿಚ್ಛೇದನದ ಬಗ್ಗೆ ಕೆಲವೊಂದು ವದಂತಿಗಳು ಹರಿದಾಡಿದ್ದರೂ, ಅವು ಕೇವಲ ಗಾಸಿಪ್ ಆಗಿಯೇ ಉಳಿದವು. ಸಾಮಾನ್ಯವಾಗಿ ತಮ್ಮ ದಾಂಪತ್ಯ ಜೀವನದ ವಿಚಾರಗಳನ್ನು ಹೆಚ್ಚು ಹಂಚಿಕೊಳ್ಳದ ಈ ಜೋಡಿ, ಕೆಲವೊಮ್ಮೆ ಸಂದರ್ಶನಗಳಲ್ಲಿ ಪರಸ್ಪರರ ಬಗ್ಗೆ ಮಾಡುವ ತಮಾಷೆಯ ಮಾತುಗಳಿಂದ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.
‘ನಾನು ಕೂಡ ಚಿಕ್ಕ ಹುಡುಗಿಯನ್ನೇ ಮದುವೆಯಾಗಿದ್ದೇನೆ..’
ಇದೀಗ ಇದೇ ರೀತಿಯ ಒಂದು ತಮಾಷೆಯ ಹೇಳಿಕೆಯನ್ನು ಫಹಾದ್ ಫಾಸಿಲ್ ನೀಡಿದ್ದಾರೆ. ‘ಡೋಂಟ್ ಟ್ರಬಲ್ ದಿ ಟ್ರಬಲ್’ ಚಿತ್ರದ ಪ್ರಮೋಷನ್ ವೇಳೆ ನಟಿ ಸಾರಾ ಪಾಲೇಕರ್ ಅವರ ತಾಳ್ಮೆ ಮತ್ತು ಶೂಟಿಂಗ್ ವೇಳೆ ಅವರು ತೋರಿದ ಸಹನೆಯನ್ನು ಫಹಾದ್ ವಿಶೇಷವಾಗಿ ಹೊಗಳಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಪತ್ನಿ ನಜ್ರಿಯಾರನ್ನು ಉದಾಹರಣೆಯಾಗಿ ತೆಗೆದುಕೊಂಡು ಫಹಾದ್ ತಮಾಷೆ ಮಾಡಿದ್ದಾರೆ.
‘ನಾನು ಕೂಡ ಚಿಕ್ಕ ಹುಡುಗಿಯಂತಹ ಒಬ್ಬಳನ್ನು ಮದುವೆಯಾಗಿದ್ದೇನೆ. ಅದಕ್ಕೇ ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ನಿಮಗೆ ಇಷ್ಟು ತಾಳ್ಮೆ ಬಂದಿದೆ. ಕೆಲವರು ನನ್ನನ್ನು, ಇಷ್ಟೊಂದು ತಾಳ್ಮೆ ಎಲ್ಲಿಂದ ಬಂತು ಎಂದು ಕೇಳುತ್ತಾರೆ. ಮನೆಯಲ್ಲಿ ಒಬ್ಬರಿದ್ದಾರೆ. ಅವರನ್ನು ನೋಡಿಕೊಳ್ಳುತ್ತಾ ಬರುತ್ತಿದ್ದೇನೆ ಎಂದು ಹೇಳುತ್ತೇನೆ’ ಎಂದು ಫಹಾದ್ ನಗುತ್ತಲೇ ಹೇಳಿದ್ದಾರೆ. ಫಹಾದ್ ಅವರ ಈ ಮಾತು ಕೇಳಿ ಅಲ್ಲಿದ್ದವರು ನಕ್ಕಿದ್ದಾರೆ. ಜೊತೆಗೆ, ನಜ್ರಿಯಾ ಬಗ್ಗೆ ಅವರು ತಮಾಷೆಯಾಗಿ ಮಾತನಾಡಿರುವ ರೀತಿ ಅಭಿಮಾನಿಗಳ ಗಮನವನ್ನೂ ಸೆಳೆದಿದೆ.
ಸಾರಾ ಪಾಲೇಕರ್‌ಗೂ ಫಹಾದ್ ಮೆಚ್ಚುಗೆ
ಇದೇ ವೇಳೆ ನಟಿ ಸಾರಾ ಪಾಲೇಕರ್ ಅವರ ತಾಳ್ಮೆ ಮತ್ತು ನಟನೆಯ ಬಗ್ಗೆಯೂ ಫಹಾದ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಶೂಟಿಂಗ್ ವೇಳೆ ಸಾರಾ ತಮ್ಮೊಂದಿಗೆ ಅತ್ಯಂತ ತಾಳ್ಮೆಯಿಂದ ನಡೆದುಕೊಂಡಿದ್ದಾರೆ ಎಂದು ಹೇಳಿದ ಅವರು, ಇಷ್ಟು ಸಹನೆಯಿಂದ ವರ್ತಿಸಿದ ಸಹನಟಿಯನ್ನು ಇದುವರೆಗೆ ನೋಡಿಲ್ಲ ಎಂದು ಪ್ರಶಂಸಿಸಿದ್ದಾರೆ.
ಇನ್ನು ‘ಡೋಂಟ್ ಟ್ರಬಲ್ ದಿ ಟ್ರಬಲ್’ ಸಿನಿಮಾವನ್ನು ಶಶಾಂಕ್ ಯೇಲೇಟಿ ನಿರ್ದೇಶಿಸಿದ್ದಾರೆ. ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಸಾರಾ ಪಾಲೇಕರ್ ಮತ್ತು ಸೌರಭ್ ಸಚ್ದೇವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ಎಸ್. ರಾಜಮೌಳಿ ಹಾಗೂ ಕಾರ್ತಿಕೇಯ ಅವರ ನಿರ್ಮಾಣ ಸಹಭಾಗಿತ್ವದಲ್ಲಿ ಮೂಡಿಬಂದಿರುವ ಈ ಸಿನಿಮಾ ಅಕ್ಟೋಬರ್ 2ರಂದು ಕನ್ನಡ ಹೊರತುಪಡಿಸಿ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದ್ದು, ನಟ ಜೂನಿಯರ್ ಎನ್‌ಟಿಆರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.