ಲಿಫ್ಟ್'ಮೆನ್: ಶ್ರೀಸಾಮಾನ್ಯನೊಬ್ಬನ ಸಾಕ್ಷಚಿತ್ರ

Published : May 13, 2017, 02:19 PM ISTUpdated : Apr 11, 2018, 01:05 PM IST
ಲಿಫ್ಟ್'ಮೆನ್: ಶ್ರೀಸಾಮಾನ್ಯನೊಬ್ಬನ ಸಾಕ್ಷಚಿತ್ರ

ಸಾರಾಂಶ

ಚೇರ್‌ ಇದ್ದರೂ ಸ್ಥಿತಪ್ರಜ್ಞನಂತೆ ನಿಂತೇ ಇರುವ, ಬಂದವರ ಮಾತುಗಳಿಗೆ ಕಿವಿ​ಯಾಗುವ, ಕೆಲವೊಮ್ಮೆ ಅವರ ಮಾತುಗಳಿಗೆ ಬಾಯಾ​ಗುವ, ಬಾಯ್ಬಿಟ್ಟು ಬೈಸಿಕೊಳ್ಳುವ, ತನ್ನ ವೃತ್ತಿಯನ್ನು ಅಪಾರವಾಗಿ ಪ್ರೀತಿಸುವ, ತನ್ನನ್ನು ಪ್ರೀತಿಸುವ ಅಧಿಕಾರಿಯನ್ನು ಅಪಾರವಾಗಿ ಗೌರವಿಸುವ ಸಂಭಾ​ವಿತ ಆತ. ಅಂಥವನ ಹೃದಯದಲ್ಲೂ ಯಾವುದೋ ಸಮುದ್ರ ಓಡುತ್ತಿರುತ್ತದೆ, ಅಲೆಗಳು ಏಳುತ್ತಿ​ರುತ್ತವೆ, ಉಪ್ಪುಉಪ್ಪು ಗಾಳಿ ಅವನೊಳಗೆ ಸುಳಿದಾಡುತ್ತಿರುತ್ತದೆ.

ಚಿತ್ರ:ಲಿಫ್ಟ್‌ಮ್ಯಾನ್‌
ತಾರಾಗಣ: ಸುಂದರ್‌ರಾಜ್‌, ಸುರೇಶ್‌ ಹೆಬ್ಳೀಕರ್‌, ಶೀತಲ್‌ ಶೆಟ್ಟಿ, ಅರುಣಾ ಬಾಲರಾಜ್‌ ಮತ್ತಿತರರು.
ನಿರ್ದೇಶನ: ಕಾರಂಜಿ ಶ್ರೀಧರ್‌,ನಿರ್ಮಾಣ: ರಾಮ್‌

 ಛಾಯಾಗ್ರಹಣ: ಲಕ್ಷ್ಮೇನಾರಾಯಣ

 ಸಂಗೀತ: ಪ್ರವೀಣ್‌ ಗೋಡ್ಖಿಂಡಿ
ರೇಟಿಂಗ್‌: ***

ಅವನು ಸೈನಿಕನಲ್ಲ, ಅವನದ್ದು ದೇಶಸೇವೆಯಲ್ಲ, ದೇವರ ಕೆಲಸ ಮಾಡುತ್ತಿದ್ದಾನೆ ಅಂತನ್ನಲು ಅವನಿಗೆ ಸರ್ಕಾರಿ ಕೆಲಸ ಇಲ್ಲ. ಆತ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯ. ಭೂಮಿಗಿಂತ ಅತ್ಯಂತ ಎತ್ತರದ ಮಹಡಿಗಳಿಗೆ ತನ್ನ ಲಿಫ್ಟ್‌ ಎಂಬ ಪುಷ್ಪಕ ವಿಮಾನದಲ್ಲಿ ಕೊಂಡೊಯ್ದು ಬಿಡುವ ಸತತೋದ್ಯೋಗಿ. ಲಿಫ್ಟ್‌ ಎಂಬ ದೋಣಿಗೆ ಮಂಜಪ್ಪ ಎಂಬೋನೊಬ್ಬ ಅಂಬಿಗ. ಮಹಡಿ ಮಹಡಿಗಳನ್ನು ದಾಟಿ ಹೋದವರಿಗೆ ಈ ಅಂಬಿಗನ ಹಂಗಿಲ್ಲ.

ಚೇರ್‌ ಇದ್ದರೂ ಸ್ಥಿತಪ್ರಜ್ಞನಂತೆ ನಿಂತೇ ಇರುವ, ಬಂದವರ ಮಾತುಗಳಿಗೆ ಕಿವಿ​ಯಾಗುವ, ಕೆಲವೊಮ್ಮೆ ಅವರ ಮಾತುಗಳಿಗೆ ಬಾಯಾ​ಗುವ, ಬಾಯ್ಬಿಟ್ಟು ಬೈಸಿಕೊಳ್ಳುವ, ತನ್ನ ವೃತ್ತಿಯನ್ನು ಅಪಾರವಾಗಿ ಪ್ರೀತಿಸುವ, ತನ್ನನ್ನು ಪ್ರೀತಿಸುವ ಅಧಿಕಾರಿಯನ್ನು ಅಪಾರವಾಗಿ ಗೌರವಿಸುವ ಸಂಭಾ​ವಿತ ಆತ. ಅಂಥವನ ಹೃದಯದಲ್ಲೂ ಯಾವುದೋ ಸಮುದ್ರ ಓಡುತ್ತಿರುತ್ತದೆ, ಅಲೆಗಳು ಏಳುತ್ತಿ​ರುತ್ತವೆ, ಉಪ್ಪುಉಪ್ಪು ಗಾಳಿ ಅವನೊಳಗೆ ಸುಳಿದಾಡುತ್ತಿರುತ್ತದೆ.

ಆದರೆ ಏನು ಮಾಡುವುದು, ಯುನಿಫಾರ್ಮ್ ಒಳಗೆ ಅಡಗಿರುವ ಅವನ ಪ್ರಾಮಾಣಿಕತೆ, ಕರ್ತವ್ಯಪ್ರಜ್ಞೆ, ಅನು​ಕಂಪ, ಮಾನವೀಯತೆಗಳನ್ನು ಜನ ನೋಡು​ವುದಿಲ್ಲ, ಅವನು ಒತ್ತುವ ಲಿಫ್ಟ್‌ನ ಬೆರಳನ್ನಷ್ಟೇ ನೋಡುವ ಲಿಫ್ಟ್‌ ಪ್ರಯಾಣಿಕರಿಗೆ ಅವನು ಒಬ್ಬ ಅನಾಮಿಕ ಮಾತ್ರ.
-ಕಾಮನ್‌ಮ್ಯಾನ್‌ ಎಂಬ ಒಂದು ಪ್ರಮುಖ ಪ್ರಭೇದ, ಇವತ್ತಿನ ಸೆಲಬ್ರಿಟಿಗಳ ಕಾಲದಲ್ಲಿ ಮುಚ್ಚಿಟ್ಟಬಾವಿಯಾಗಿಹೋಗಿದೆ. ಪಾಚಿಕಟ್ಟಿ, ಒಳಗೊಳಗೇ ತಂಪು, ಸಿಹಿ ನೀರನ್ನು ಮುಚ್ಚಿಟ್ಟುಕೊಂಡ ಅಂಥವರಲ್ಲೊಬ್ಬರನ್ನು ಪರಿಚಯಿಸುವ ಕೆಲಸವನ್ನು ನಿರ್ದೇಶಕ ಕಾರಂಜಿ ಶ್ರೀಧರ್‌ ಮಾಡಿದ್ದಾರೆ. ಚಂದ್ರ ಬಾರ್ಕೂರ್‌ ಅವರ ಕಾದಂಬರಿಯನ್ನಾಧರಿಸಿದ ಈ ಸಿನಿಮಾ, ಅಂಥ ದೊಡ್ಡ ಘಟನೆಗಳನ್ನೇನೂ ಆಧರಿಸಿದ್ದಲ್ಲ, ಒಬ್ಬ ಲಿಫ್ಟ್‌ಮ್ಯಾನ್‌ನ ಬದುಕಲ್ಲಿ ಬಂದು ಹೋಗು ಕೆಲ ಸಣ್ಣ ಸಣ್ಣ ಘಟನೆಗಳ ಗುಚ್ಛ. ಒಂದು ಟಿವಿ ಸಂದರ್ಶನ. ಅದರಲ್ಲಿ ಅವನು ಹೇಳುತ್ತಾ ಹೋಗುವ ತನ್ನ ಬದುಕಿನ ಘಟನಾವಳಿಗಳನ್ನೇ ಅನುಕ್ರಮವಾಗಿ ಜೋಡಿಸಿ ಕತೆಯಾಗಿಸಿದ್ದಾರೆ.

ಸರ್ಕಾರಿ ಕೆಲಸಕ್ಕೋಸ್ಕರ ಹುಡುಗಿ ತಂದೆಯ ಪಟ್ಟು, ಅದಕ್ಕೋಸ್ಕರ ವಿಧಾನಸೌಧದಲ್ಲಿ ಕೆಲಸ, ಅನಂತರ ಮದುವೆ, ಲಿಫ್ಟ್‌ನ ಕೆಲ ಘಟನೆಗಳು, ಅವನಿಗೂ ಹಿರಿಯ ಅಧಿಕಾರಿಯೊಬ್ಬರಿಗೂ ಹುಟ್ಟಿಕೊಳ್ಳುವ ಮಾನವೀಯ ಬಾಂಧವ್ಯ, ಕೆಲ ಅಪ್ರಾಮಾಣಿಕ ಅಧಿಕಾರಿಗಳ ರಾಜಕೀಯದ ಬಿಸಿ ಸಾಮಾನ್ಯನಿಗೂ ತಟ್ಟುವ ರೀತಿ- ಇವೆಲ್ಲವನ್ನೂ ಬಹಳ ಸಾಂಪ್ರದಾಯಿಕ ಚಿತ್ರಗಳ ಶೈಲಿಯಲ್ಲಿ ಜೋಡಿಸುತ್ತಾ ಹೋಗಿದ್ದಾರೆ. ತೀರಾ ವಾಚ್ಯ ಅನ್ನಿಸುವ ಶಾಟ್‌ ಟೇಕಿಂಗ್‌, ತೀರಾ ಮುಖಕ್ಕೆ ಹೊಡೆಯುವ ಕ್ಲೋಸ್‌ಅಪ್‌, ಸೂಕ್ಷ್ಮ ಭಾವವನ್ನು ಗ್ರಹಿಸದ ಕೆಮರಾ, ತೀರಾ ಪೇಲವ ಹಿನ್ನೆಲೆ ಸಂಗೀತ- ಇವುಗಳ ಪ್ಯಾಕೇಜ್‌ನಲ್ಲಿ ಅತ್ಯಂತ ಸುಸ್ತಾದ ಜರ್ನಿಯಾಗಿ ಮಾಡಿಬಿಡುತ್ತದೆ. ಧಾರಾವಾಹಿಯ ಕಂತುಗಳ ಥರ, ಫೇಡ್‌ ಇನ್‌ ಫೇಡ್‌ ಔಟ್‌ಗಳ ಸಂಕಲನ ಸಹಿತವಾಗಿ ಚಿತ್ರ ತುಂಬ ಕಡೆ ಪ್ರೇಕ್ಷಕರನ್ನು ಕಂಗೆಡಿಸುತ್ತಾ ಹೋಗುತ್ತದೆ.

 ಒಬ್ಬ ಶ್ರೀಸಾಮಾನ್ಯನ ಸಾಕ್ಷ್ಯಚಿತ್ರ ಎನ್ನುವ ಭಾವನೆಯನ್ನೂ ಹುಟ್ಟಿಸುತ್ತದೆ.ಹಾಗಂತ ದ್ವಿತೀಯಾರ್ಧದಲ್ಲಿ ಒಂದು ಸುಮಧುರ ಪ್ರೇಮ ಸಂಬಂಧ ಮೂಡುವ ಘಟನೆ ಬರುತ್ತದೆ. ಅದನ್ನು ನಿರ್ದೇಶಕರು ಎಷ್ಟುಸಹಜವಾಗಿ, ಸೂಕ್ಷ್ಮವಾಗಿ, ತಟ್ಟುವಂತೆ ಚಿತ್ರಿಸುತ್ತಾರೆಂದರೆ ಅದು ನಿಮ್ಮನ್ನು ಎಳೆದು ಜಗ್ಗಿ ಹಿತವಾದ ನೋವನ್ನು ಕೊಡು​ತ್ತದೆ. ವಸುಂಧರಾ ಎಂಬುವವಳ ಜೊತೆ ಹುಟ್ಟಿದ ಹೆಸರಿಲ್ಲದ ಸಂಬಂಧ, ಅದಕ್ಕಿರುವ ಕೆಲ ಸೂಕ್ಷ್ಮ ಆಕರ್ಷಣೆಗಳು, ಪಾಪಪ್ರಜ್ಞೆ, ಇರುಸುಮುರುಸು, ಕಾತರ, ಸಡಗರಗಳು ಹಾಡಿನ ಪಲ್ಲವಿಯಲ್ಲಿ(ಸಂಗೀತ: ಪ್ರವೀಣ್‌ ಗೋಡ್ಖಿಂಡಿ), ಮೌನದಲ್ಲಿ ಹದವಾಗಿ ಅಚ್ಚರಿ ಹುಟ್ಟಿಸುವಂತೆ ಕಟ್ಟಿನಿಲ್ಲಿಸುತ್ತಾರೆ ಶ್ರೀಧರ್‌. ಜೊತೆಗೆ ಅಧಿಕಾರಿಗಳೊಬ್ಬರ ಜೊತೆಗಿನ ಮಾನವೀಯ ಸಂಬಂಧವನ್ನೂ ಅವರು ಹೇಳುವ ರೀತಿ ಸಹಜ. 
ಚಿತ್ರ ನಿಂತಿರುವುದೇ ಸುಂದರ್‌ರಾಜ್‌ ಮೇಲೆ. ಜೀವನದ ಕಣ್ಣನ್ನು ಮುಗ್ದವಾಗಿ ತೆರೆಯುತ್ತಾ, ಚಿಂತೆಗಳಿಂದ ಭಾರವಾದ ರೆಪ್ಪೆಯನ್ನು ಫಟಪಟನೆ ಬಡಿಯುತ್ತಾ, ಮೆತ್ತಗೆ ನಗುತ್ತಾ, ನಿಟ್ಟುಸಿರಿಟ್ಟು ನೋವು ನುಂಗುತ್ತಾ, ಕಣ್ಣರಳಿಸಿ ಕೆಲ ಕ್ಷಣಗಳನ್ನು ಆಸ್ವಾದಿಸುತ್ತಾ ಪಾತ್ರವೇ ಆಗಿಬಿಡುವವರು ಸುಂದರ್‌ರಾಜ್‌. ಕತೆ, ಚಿತ್ರಕತೆ, ಚಿತ್ರಣದ ಕೊರತೆಗಳೇನೇ ಇದ್ದರೂ ಅದ್ಯಾ​ವುದೂ ಸುಂದರ್‌ರಾಜ್‌ ಅವರ ಅಭಿನಯವನ್ನು ಮುಕ್ಕಾ​ಗಿಸಿಲ್ಲ. ಪ್ರಾಮಾಣಿಕ ಅಧಿಕಾರಿಯಾಗಿ ಸುರೇಶ್‌ ಹೆಬ್ಳೀಕರ್‌ ಸಹಜ, ಸುಂದರ. ಪ್ರೇಮಿಯಾಗಿ ಬರುವ ವಸುಂಧರಾ ಆಗಿ ಅರುಣಾ ಬಾಲರಾಜ್‌ ಕಣ್ಣೋಟ​​ದಲ್ಲೇ ಆವರಿಸಿಕೊಳ್ಳುತ್ತಾರೆ. ಬರುವ ಪುಟ್ಟಪುಟ್ಟಪಾತ್ರಗಳೂ ಅವಕಾಶವನ್ನು ಸದುಪಯೋಗ​ಪಡಿಸಿಕೊಂಡು ಕತೆಯ ಭಾಗವಾಗಿದ್ದಾರೆ.
ಅಪಾರ ಸೂಕ್ಷ್ಮಗಳು ಮತ್ತು ಆಡದ ಸಾಧ್ಯತೆಗಳನ್ನು ಬಚ್ಚಿಟ್ಟುಕೊಂಡ ಶ್ರೀಸಾಮಾನ್ಯನೊಬ್ಬನ ಕತೆ, ಹೀಗೆ ಸರಿಯಾಗಿ ಅನ್ವೇಷಿಸಲ್ಪಡದೇ ಕೆಲ ಸಣ್ಣಪುಟ್ಟಘಳಿಗೆಗಳಲ್ಲೇ ಅರಳಿ ವ್ಯರ್ಥವಾಗಿದೆ.

ವಿಮರ್ಶೆ: ವಿಕಾಸ ನೇಗಿಲೋಣಿ,ಕನ್ನಡಪ್ರಭ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​