ಕಾಫಿ ವಿತ್‌ ಕರಣ್‌ ಶೋನಲ್ಲಿ ರಶ್ಮಿಕಾ ಮಂದಣ್ಣಗೆ ಆನ್‌ ಸ್ಕ್ರೀನ್‌ನಲ್ಲೇ ಅವಮಾನ ಮಾಡಿದ್ರಾ ವಿಜಯ್‌ ದೇವರಕೊಂಡ?

Published : Oct 24, 2026, 10:49 PM IST
Koffee With Karan Vijay Deverakonda  Rashmika Mandanna

ಸಾರಾಂಶ

ಕಾಫಿ ವಿತ್ ಕರಣ್ ಶೋನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ದಂಪತಿಯಾಗಿ ಭಾಗವಹಿಸಿ ತಮ್ಮ ಪ್ರೀತಿಯ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ಮದುವೆಗೆ ಕ್ಯಾಮೆರಾ ನಿಷೇಧ, ಪ್ರಪೋಸ್ ಮಾಡಿದ ರೀತಿ ಹಾಗೂ ರಶ್ಮಿಕಾ ಅವರ ಹಾರ್ಟ್ ಸಿಂಬಲ್ ಹಿಂದಿನ ಕಥೆಯನ್ನು ಈ ಜೋಡಿ ಬಿಚ್ಚಿಟ್ಟಿದೆ.

ಮುಂಬೈ (ಅ.24): ನಿರ್ಮಾಪಕ, ನಿರ್ದೇಶಕ ಕರಣ್‌ ಜೋಹರ್ ನಿರೂಪಣೆಯ ಅತ್ಯಂತ ಜನಪ್ರಿಯ ಚಾಟ್ ಶೋ 'ಕಾಫಿ ವಿತ್ ಕರಣ್' (Koffee With Karan) ನೂತನ ಆವೃತ್ತಿಯ ಎರಡನೇ ಸಂಚಿಕೆಯಲ್ಲಿ ತೆಲುಗು ಮತ್ತು ಬಾಲಿವುಡ್‌ನ ಹಾಟ್‌ ಫೇವರಿಟ್‌ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದರು. ಹಿಂದೆ 'ಲೈಗರ್' ಚಿತ್ರದ ಸಹನಟಿ ಅನನ್ಯಾ ಪಾಂಡೆ ಜೊತೆ ಬಂದಾಗ ತಮ್ಮ ಸಂಬಂಧದ ಬಗ್ಗೆ ಕುತೂಹಲ ಕಾಯ್ದುಕೊಂಡಿದ್ದ ವಿಜಯ್, ಈ ಬಾರಿ ರಶ್ಮಿಕಾ ಜೊತೆ ದಂಪತಿಯಾಗಿ ಪ್ರಥಮ ಬಾರಿಗೆ ಕೌಚ್‌ನಲ್ಲಿ ಕಾಣಿಸಿಕೊಂಡು ತಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಶೋನಲ್ಲಿ ಕರನ್ ಜೋಹರ್ ಕೇಳಿದ ಪ್ರಶ್ನೆಗಳಿಗೆ ವಿಜಯ್ ಹಾಗೂ ರಶ್ಮಿಕಾ ನೀಡಿದ ಉತ್ತರಗಳು ಹಾಗೂ ಶೋನಲ್ಲಿ ನಡೆದ ಮುಖ್ಯ ಚರ್ಚೆಗಳ ವಿವರ ಇಲ್ಲಿದೆ.

ಸಂಗೀತ್ ಆಚರಣೆಯ ದಿನದವರೆಗೆ ವಿಜಯ್ ಪ್ರಪೋಸ್ ಮಾಡಿರಲಿಲ್ಲ!

ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಅವರ ಬೆರಳಿನಲ್ಲಿದ್ದ ಉಂಗುರವನ್ನು ನೋಡಿ ಹಬ್ಬಿದ್ದ ನಿಶ್ಚಿತಾರ್ಥದ ವದಂತಿಗಳನ್ನು ವಿಜಯ್ ತಳ್ಳಿಹಾಕಿದರು. ತಾವು ಮದುವೆಯ ಪ್ರಪೋಸಲ್ ಅನ್ನು ಸಂಗೀತ್ ಆಚರಣೆಯ ದಿನದವರೆಗೂ ಮಾಡಿರಲಿಲ್ಲ ಎಂದು ವಿಜಯ್ ಒಪ್ಪಿಕೊಂಡರು. 'ಆಕೆಗೆ ಉಂಗುರ ಹಾಕಬೇಕು ಎನಿಸಿತು, ತಕ್ಷಣ ಸ್ನೇಹಿತರನ್ನು ಕರೆದು ಮಂಡಿಯೂರಿ ಪ್ರಪೋಸ್ ಮಾಡಿದೆ' ಎಂದ ವಿಜಯ್, ಪಾಪರಾಜಿಗಳು ಯಾವುದೋ ನಿಶ್ಚಿತಾರ್ಥದ ಉಂಗುರ ಎಂದು ಫೋಟೋ ಹಾಕಿದಾಗ ಕೋಪ ಬಂದಿತ್ತು ಎಂದರು. ಬಳಿಕ ಕ್ಯಾಮೆರಾ ಮುಂದೆ ರಶ್ಮಿಕಾ ಅವರ ಬೆರಳಿನಲ್ಲಿದ್ದ ನಿಜವಾದ ನಿಶ್ಚಿತಾರ್ಥದ ಉಂಗುರಗಳನ್ನು ತೋರಿಸಿದರು.

ಮದುವೆಗೆ ಕ್ಯಾಮೆರಾ, ಫೋನ್‌ಗಳಿಗೆ ಸಂಪೂರ್ಣ ನಿಷೇಧ

ತಮ್ಮ ಮದುವೆಯ ಆಚರಣೆಯ ಬಗ್ಗೆ ಮಾತನಾಡಿದ ವಿಜಯ್, ಮದುವೆಯ ಸ್ಥಳದಲ್ಲಿ ಯಾವುದೇ ಕ್ಯಾಮೆರಾಗಳಿಗೆ ಜಾಗವಿರಲಿಲ್ಲ ಎಂದಿದ್ದಾರೆ. 'ಶೂಟಿಂಗ್ ತಂಡ ಸೇರಿದಂತೆ ಯಾರಿಗೂ ಫೋನ್ ಇರಲಿಲ್ಲ. 'ಸರ್ ಈ ಕಡೆ ನೋಡಿ' ಎಂದು ಯಾರೂ ನನ್ನ ಬಳಿ ಬರಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದ್ದೆ. ವೇದಿಕೆಯಲ್ಲಿ ನನ್ನ ಕುಟುಂಬ ಮತ್ತು ಆಪ್ತ ಸ್ನೇಹಿತರನ್ನು ಹೊರತುಪಡಿಸಿ ಬೇರೆ ಯಾರೂ ಇರುವುದು ನನಗೆ ಇಷ್ಟವಿರಲಿಲ್ಲ" ಎಂದು ವಿಜಯ್ ಹೇಳಿದರು. ಜನರು ತಮ್ಮನ್ನು ಸದಾ ನೋಡುತ್ತಿದ್ದಾರೆ ಅಥವಾ ಕ್ಯಾಮೆರಾಗಳಿವೆ ಎನ್ನುವ ಅರಿವಿಲ್ಲದೆ ಕ್ಷಣಗಳನ್ನು ಆನಂದಿಸಲು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದರು.

ಪ್ರೀತಿಯ ಬಗ್ಗೆ ಕೀಳಾಗಿ ಮಾತನಾಡಿದ್ದನ್ನು ಒಪ್ಪಿಕೊಂಡ ವಿಜಯ್‌

ಹಿಂದಿನ ಸಂದರ್ಶನಗಳಲ್ಲಿ ಪ್ರೀತಿಯ ಬಗ್ಗೆ ತೀರಾ ಗೌರವವಿಲ್ಲದೆ ಹಾಗೂ ಅಪನಂಬಿಕೆಯಿಂದ ಮಾತನಾಡುತ್ತಿದ್ದನ್ನು ವಿಜಯ್ ನೆನಪಿಸಿಕೊಂಡರು. ಹಿಂದೆ ನಾನು ಪ್ರೀತಿಯ ಮೇಲೆ ನಂಬಿಕೆಯಿಲ್ಲ ಎಂದು ಮಾತನಾಡುತ್ತಿದ್ದುದು ನನ್ನ ಬಾಲಿಶತನವಾಗಿತ್ತು. ರಶ್ಮಿಕಾ ಸಿಗುವವರೆಗೂ ನನ್ನ ಕಣ್ಣುಗಳನ್ನು ಆಕಾಂಕ್ಷೆಗಳು ಮುಚ್ಚಿದ್ದವು. ಆಕೆ ಜೊತೆಗಿದ್ದಾಗ ನನ್ನ ದಿನಗಳು ಸುಂದರವಾಗುತ್ತಿದ್ದವು ಮತ್ತು ಆಕೆಯಿದ್ದಾಗ ನನಗೆ ತಡವಿಲ್ಲದೆ ನಿದ್ದೆ ಬರುತ್ತದೆ. ಆ ಕ್ಷಣದಲ್ಲೇ ಈಕೆಯನ್ನೇ ಮದುವೆಯಾಗಬೇಕು ಎಂದು ನಿರ್ಧರಿಸಿದೆ" ಎಂದು ವಿಜಯ್ ಹೇಳಿದ್ದಾರೆ.

ರಶ್ಮಿಕಾ ಮದುವೆಗೆ ರೆಡಿಯಾಗಿದ್ದರೂ ವಿಜಯ್ ಹೇಳಿದ್ದ '100 ಬಾರಿಯ ಷರತ್ತು'!

ರಶ್ಮಿಕಾ ತಕ್ಷಣವೇ ಮದುವೆಗೆ ಸಿದ್ಧರಿದ್ದರೂ, ವಿಜಯ್ ತಕ್ಷಣ ಒಪ್ಪಿರಲಿಲ್ಲ. ವಿಮಾನ ನಿಲ್ದಾಣದಲ್ಲಿ ರಶ್ಮಿಕಾ 'ನಾವು ಮದುವೆಯಾಗೋಣ' ಎಂದಾಗ, ವಿಜಯ್ "ನನ್ನನ್ನು 100 ಬಾರಿ ಕೇಳು, ಆಮೇಲೆ ಯೋಚಿಸೋಣ" ಎಂದು ಹೇಳಿದ್ದರಂತೆ. ಇದನ್ನು ತಾವೇ ಶೋನಲ್ಲಿ ಒಪ್ಪಿಕೊಂಡ ವಿಜಯ್, ಅಷ್ಟು ಮೂರ್ಖತನದಿಂದ ಮಾತನಾಡಬಾರದಿತ್ತು ಎಂದರು. ರಶ್ಮಿಕಾ ಮಾತನಾಡಿ, ತಾವು ಪೂರ್ಣ ಒಂದು ವರ್ಷಗಳ ಕಾಲ ಮದುವೆಗೆ ವಿಜಯ್ ಅವರನ್ನು ಕೇಳಿಕೊಳ್ಳುತ್ತಲೇ ಇದ್ದೆ ಎಂದರು. ಶೋ ಟೀಸರ್ ಹೊರಬಿದ್ದಾಗ, ವಿಜಯ್ ಅವರ ಈ ಧೋರಣೆಯನ್ನು ನೆಟ್ಟಿಗರು ಕಟುವಾಗಿ ವಿಮರ್ಶಿಸಿದ್ದು, ವಿಜಯ್‌ರದ್ದು ಅಹಂಕಾರದ ವರ್ತನೆ ಎಂದಿದ್ದಾರೆ. ಇನ್ನು ಪ್ರೀತಿಯ ಬಗ್ಗೆ ರಶ್ಮಿಕಾ ಅವರು ಮಾತನಾಡಿದಾಗ, ಅವರನ್ನು ವಿಜಯ್‌ ಆನ್‌ಸ್ಕ್ರೀನ್‌ನಲ್ಲೇ ದಿಟ್ಟಿ, ಗುರಾಯಿಸಿ ನೋಡಿದ್ದು, ಆಕೆಗೆ ಮಾಡಿರುವ ಅವಮಾನ ಎಂದು ಅಭಿಮಾನಿಗಳು ಬೇಸರಿಸಿದ್ದಾರೆ.

ಜಾನ್ವಿ-ಸಾರಾ ವಿಚಾರ ಹಾಗೂ ನಟನೆಯ ಗ್ಲಾಮರ್ ಗಡಿಗಳು

ಜಾನ್ವಿ ಕಪೂರ್ ಹಾಗೂ ಸಾರಾ ಆಲಿ ಖಾನ್ ಅವರು ವಿಜಯ್ ಜೊತೆ ಡೇಟ್ ಮಾಡಲು ಬಯಸಿದಾಗ ನಿಮಗೇನೂ ಅನ್ನಿಸಲಿಲ್ಲವೇ ಎಂಬ ಕರಣ್‌ ಪ್ರಶ್ನೆಗೆ, "ಅದು ತಮಾಷೆಯಾಗಿತ್ತು, ನನಗೆ ಏನೂ ಅನಿಸಲಿಲ್ಲ" ಎಂದು ರಶ್ಮಿಕಾ ಹೇಳಿದರು. ಆದರೆ ಆನ್-ಸ್ಕ್ರೀನ್ ಕೆಮಿಸ್ಟ್ರಿ ವಿಚಾರದಲ್ಲಿ ವಿಜಯ್ ಬೇರೆ ನಟಿಯರ ಹೆಸರು ಹೇಳುವುದನ್ನು ರಶ್ಮಿಕಾ ಇಷ್ಟಪಡಲಿಲ್ಲ. ಇನ್ನು ಸಿನಿಮಾಗಳಲ್ಲಿ ಎಕ್ಸ್ ಪೋಸಿಂಗ್ ಹಾಗೂ ಸ್ಕಿನ್ ಶೋ ಬಗ್ಗೆ ಮಾತನಾಡಿದ ರಶ್ಮಿಕಾ, ಕೆಲವು ಕಮರ್ಷಿಯಲ್ ಸಿನಿಮಾಗಳ ಪಾತ್ರಗಳಿಗೆ ಬಿಕಿನಿ ಅಥವಾ ಗ್ಲಾಮರಸ್ ಬಟ್ಟೆಗಳು ಬೇಕಾಗಬಹುದು. ಆದರೆ ನನಗೆ ಸೀಮಿತ ಗಡಿಗಳಿವೆ. ಮೈಪ್ರದರ್ಶನ ಮಾಡಲು ನನಗೆ ಮುಜುಗರವಾಗುತ್ತದೆ. ನನ್ನ ಈ ಸೀಮಿತ ಗಡಿಗಳನ್ನು ಒಪ್ಪುವ ನಿರ್ದೇಶಕರ ಜೊತೆ ಕೆಲಸ ಮಾಡಲು ನಾನು ಆದ್ಯತೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ರಶ್ಮಿಕಾ ಅವರ 'ಹಾರ್ಟ್ ಸಿಂಬಲ್' ರಹಸ್ಯ:

ಕರಣ್ ಜೋಹರ್ ಅವರ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ಹಾರ್ಟ್ ಸಿಂಬಲ್ ಹುಟ್ಟಿಕೊಂಡ ಕಥೆಯನ್ನು ಹಂಚಿಕೊಂಡರು. ಕೋವಿಡ್ ಸಮಯದಲ್ಲಿ ಮಾಸ್ಕ್ ಧರಿಸಿ ಹೊರಬಂದಾಗ, ಕ್ಯಾಮೆರಾಗಳಿಗೆ ತಮ್ಮ ಮುಖದ ನಗು ಕಾಣಿಸುತ್ತಿರಲಿಲ್ಲ. ಹೀಗಾಗಿ ಪ್ರೀತಿ ವ್ಯಕ್ತಪಡಿಸಲು ಕೈಗಳಿಂದ 'ಹಾರ್ಟ್ ಸಿಂಬಲ್' ಮಾಡಲು ಆರಂಭಿಸಿದೆ. ಅದು ನಂತ್ರ ಟ್ರೆಂಡ್ ಆಗಿ ಫೋಟೋಗ್ರಾಫರ್‌ಗಳೇ ಅದನ್ನು ಮಾಡಲು ಕೇಳಲಾರಂಭಿಸಿದರು ಎಂದು ರಶ್ಮಿಕಾ ವಿವರಿಸಿದರು. ರಶ್ಮಿಕಾ ಹೆಗಲ ಮೇಲಿರುವ ಸಣ್ಣ ಹಾರ್ಟ್ ಹಚ್ಚೆ (Tattoo) ಕೂಡ ಗಮನ ಸೆಳೆಯಿತು.

ರಾಪಿಡ್ ಫೈರ್ ಸುತ್ತಿನಲ್ಲಿ ಗೊಂದಲಗಳು!

ಶೋನ ಕೊನೆಯ ಭಾಗದ 'ರಾಪಿಡ್ ಫೈರ್' ಸುತ್ತಿನಲ್ಲಿ ಕರಣ್‌ ಜೋಹರ್ ತಂಡದ ಎಡವಟ್ಟುಗಳು ಬಯಲಾದವು. ವಿಜಯ್ ಅವರಿಗೆ 'ಬಾಲಿವುಡ್ ಇಷ್ಟವೋ ಅಥವಾ ಸೌತ್ ಇಷ್ಟವೋ' ಎಂದು ಕರಣ್‌ ಕೇಳಿದಾಗ, ತಾವು ಇನ್ನೂ ಯಾವುದೇ ಬಾಲಿವುಡ್ ಸಿನಿಮಾದಲ್ಲಿ ನಟಿಸಿಲ್ಲ ಎಂದು ವಿಜಯ್ ಹೇಳಿದರು. ಇತ್ತ ರಶ್ಮಿಕಾ ಮಂದಣ್ಣ ಅವರಿಗೆ ಮಲಯಾಳಂ ನಟ ಮೋಹನ್‌ಲಾಲ್ ಅವರನ್ನು 'ದಿ ಕಂಪ್ಲೀಟ್ ಆಕ್ಟರ್' ಎಂದು ಕರೆಯಲಾಗುತ್ತದೆ ಎನ್ನುವ ವಿಷಯ ತಿಳಿದಿರಲಿಲ್ಲ. ಒಟ್ಟಾರೆಯಾಗಿ ರಾಪಿಡ್ ಫೈರ್‌ನಲ್ಲಿ ರಶ್ಮಿಕಾ ಉತ್ತಮವಾಗಿ ಪ್ರದರ್ಶನ ನೀಡಿದರೂ, 'ಎಐ ಬಾಟ್' (AI Bot) ಅಂತಿಮವಾಗಿ ವಿಜಯ್ ದೇವರಕೊಂಡ ಅವರಿಗೆ ಜಯದ ಗಿಫ್ಟ್ ಹ್ಯಾಂಪರ್ ಅನ್ನು ನೀಡಿತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋಯಿನ್ ಅವಕಾಶಕ್ಕಾಗಿ ಕಾಯುತ್ತಿರುವ ಬಿಗ್‌ ಬಾಸ್ ದಿವಿ: ಸೀರೆ ಲುಕ್ ಮಾತ್ರ ಸಖತ್ ವೈರಲ್!
ಕೋಟಿ ಆಸ್ತಿಯ ಒಡತಿ ಲಕ್ಸುರಿ ಕಾರು ಬಿಟ್ಟು ಆಟೋದಲ್ಲಿ ಓಡಾಟ: ಈ ಸ್ಟಾರ್ ನಟಿ ಯಾರು ಗೊತ್ತಾ?