
ಬೆಂಗಳೂರು(ನ.30): ಲೋಹಿತ್ ನಿರ್ದೇಶನದ ‘ಮಮ್ಮಿ- ಸೇವ್ ಮಿ’ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಆಗುತ್ತಿತ್ತು. ಮೊದಲ ನಿರ್ದೇಶನದಲ್ಲಿ ಲೋಹಿತ್ ವಿಭಿನ್ನ ಹಾರರ್ ಜಾನರ್ ಸಿನಿಮಾ ಕೊಟ್ಟಿದ್ದಾರೆಂಬ ಟಾಕ್ ಟ್ರೈಲರ್ ನೋಡಿದವರಿಂದಲೂ ಕೇಳಿಬರುತ್ತಿದೆ. ಈಗ ಸ್ಟಾರ್‌ಗಳೂ ‘ಮಮ್ಮಿ ಟ್ರೈಲರ್ ನೋಡಿ ಫಿದಾ ಆಗಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರ ಅಭಿನಯ ಕಂಡು ಸುದೀಪ್ ಕೂಡ ಚಿತ್ರತಂಡವನ್ನು ಶೂಟಿಂಗ್ ಸೆಟ್`ಗೆ ಕರೆಸಿ, ಶುಭ ಹಾರೈಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ‘ಮಮ್ಮಿ’ ಚಿತ್ರವನ್ನು ಯಾಕೆ ನೋಡಬೇಕು ಎಂಬುದಕ್ಕೆ ಸುದೀಪ್ ಅವರೇ ಐದು ಕಾರಣಗಳನ್ನು ಕೊಟ್ಟಿರುವ ವಿಡಿಯೋ ಈಗ ವೈರಲ್ ಆಗಿದೆ. ಅಷ್ಟಕ್ಕೂ ಕಿಚ್ಚ ಕೊಟ್ಟ ಆ ಕಾರಣಗಳು ಯಾವುವು?
೧. ಹಾರರ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ನಿರ್ದಿಷ್ಟ ಅಂಶಗಳನ್ನಿಟ್ಟುಕೊಂಡು ಪ್ರೇಕ್ಷಕರನ್ನು ಹೆದರಿಸುತ್ತಾರೆ. ಅಂಥ ಅಂಶಗಳು ಯಾವುವು ಅಂತ ಸಿನಿಮಾ ನೋಡುವ ಪ್ರೇಕ್ಷಕನಿಗೆ ಮೊದಲೇ ಗೊತ್ತಿರುತ್ತದೆ. ಆದರೆ, ‘ಮಮ್ಮಿ’ಯಲ್ಲಿ ಅಂಥ ಹಾರರ್ ಅಂಶ ಕೊನೆಯವರೆಗೂ ಗೊತ್ತಾಗುವುದಿಲ್ಲ. ಸೀಟಿನ ತುದಿಯಲ್ಲಿ ಕೂರಿಸುವ ಶಕ್ತಿ ಈ ಚಿತ್ರಕ್ಕಿದೆ.
೨. ಹಾರರ್ ಸಿನಿಮಾಗಳಲ್ಲಿ ಭಯ, ಕತ್ತಲು, ಹಿನ್ನೆಲೆ ಸಂಗೀತವೇ ಪ್ರಾಮುಖ್ಯ ಪಡೆದಿರುತ್ತದೆ. ಆದರೆ, ಹಾರರ್ ಜತೆಗೆ ಭಾವುಕತೆಯನ್ನೂ ಸೇರಿಸಬಹುದು ಅಂತ ತೋರಿಸಿಕೊಟ್ಟಿರುವ ಚಿತ್ರವಿದು.
೩. ‘ಮಮ್ಮಿ- ಸೇವ್ ಮೀ’ ಎನ್ನುವ ಹೆಸರಿನ ಜತೆಗೆ ತುಂಬು ಗರ್ಭಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕಾ ವಿಶಿಷ್ಟವಾಗಿ ಸೆಳೆದಿದ್ದಾರೆ. ಅವರ ಭಾವಾಭಿವ್ಯಕ್ತಿ ನನಗೆ ಹಿಡಿಸಿತು. ಚಿತ್ರದ ಟೈಟಲ್‌ನಲ್ಲೇ ಬೇರೊಂದು ರೀತಿಯ ಕತೆ ಇದೆ ಎನ್ನುವ ನಂಬಿಕೆ ಮೂಡಿಸುತ್ತಿದೆ.
೪. ನಾನು ಹಾರರ್ ಸಿನಿಮಾಗಳನ್ನು ಹೆಚ್ಚು ನೋಡುವುದಿಲ್ಲ. ಹಾಗೆ ತುಂಬಾ ಆಸೆಯಿಂದ ನೋಡಿದ ಮೊದಲ ಹಾರರ್ ಚಿತ್ರ ‘ಶ್..!!’. ಯಾಕೆಂದರೆ ಸುಮ್ಮ ಸುಮ್ಮನೆ ಭಯ ಬೀಳಿಸುವಂತೆ ಮೂಡಿಬರುವ ಚಿತ್ರಗಳನ್ನು ಯಾಕೆ ನೋಡಬೇಕು ಎನ್ನುವುದು ನನ್ನ ಭಾವನೆ. ಆದರೆ, ‘ಮಮ್ಮಿ’ ಕೇವಲ ಭಯ ಬೀಳಿಸೋದಿಲ್ಲ, ತಾಯಿ ಮತ್ತು ಮಗು ಇಲ್ಲಿ ಏನೋ ಒಂದು ಕತೆ ಹೇಳುತ್ತಾರೆ. ಕೆಲವೇ ಪಾತ್ರಗಳು, ದೊಡ್ಡ ಕತೆ, ಅದ್ಭುತ ಹಿನ್ನೆಲೆ ಸಂಗೀತ ಇವುಗಳೇ ‘ಮಮ್ಮಿ’ಯ ಜೀವಾಳ.
೫. ಸೌಂಡ್ ಎಫೆಕ್ಟ್, ಡಾರ್ಕ್‌ನೆಸ್ ಇದ್ದರೆ ಮಾತ್ರ ಹಾರರ್ ಸಿನಿಮಾ ಆಗುವುದಿಲ್ಲ. ಆದರೆ, ಆಚೆಗೆ ಚಿತ್ರವನ್ನು ಕಟ್ಟಿಕೊಟ್ಟಾಗ ಮಾತ್ರ ಹಾರರ್ ಸಿನಿಮಾಗಳೂ ಹೊಸ ರೀತಿಯಲ್ಲಿ ಮೂಡುವುದಕ್ಕೆ ಸಾಧ್ಯವಾಗುತ್ತದೆ. ಆ ಹೊಸತನ ಈ ಚಿತ್ರದಲ್ಲಿದ್ದು, ಪ್ರಿಯಾಂಕಾ ಇಲ್ಲಿ ರೀ ಎಂಟ್ರಿ ಪಡೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.