’ಕಥೆಯೊಂದು ಶುರುವಾಗಿದೆ’ ಹೇಗಿದೆ ಚಿತ್ರ? ಇಲ್ಲಿದೆ ವಿಮರ್ಶೆ

By Web DeskFirst Published Aug 4, 2018, 12:05 PM IST
Highlights

ದಿಗಂತ್ ಅಭಿನಯದ ಕಥೆಯೊಂದು ಶುರುವಾಗಿದೆ ಚಿತ್ರ ಬಿಡುಗಡೆಯಾಗಿದೆ.  ಸಮುದ್ರ ದಂಡೆಯಲ್ಲಿರುವ ಪರಿಸರದಲ್ಲಿ ಆರು ಮಂದಿ ಇದ್ದಾರೆ. ಒಬ್ಬೊಬ್ಬರದೂ ಬೇರೆ ಬೇರೆ ಕಥೆ. ಕಥೆ ಹೇಳುತ್ತಲೇ ಒಬ್ಬರನ್ನು ಮತ್ತೊಬ್ಬರ ಕಥೆಯೊಳಗೆ ಸೇರಿಸುತ್ತಾ ಸ್ವಲ್ಪ ಹೊತ್ತಿಗೆ ದೂರ ಸರಿಸುತ್ತಾ ಬದುಕಿನ ಹುಡುಕಾಟದಲ್ಲಿರುವಂತೆ ಕಾಣಿಸುತ್ತಾರೆ ನಿರ್ದೇಶಕ. 

ಮಂಜು ಸುರಿಯುವ ಎತ್ತರದ ಬೆಟ್ಟದ ಮೇಲೆ ನಿಂತು ಜೋರಾಗಿ ಬೀಸುವ ಗಾಳಿಗೆ ಮುಖ ಒಡ್ಡಿದಾಗ ಉಂಟಾಗುವ ಮೌನ, ಸಮುದ್ರ ದಡದಲ್ಲಿ ನಿಂತಾಗ ದೂರದಲ್ಲಿ ಭೋರ್ಗರೆಯುತ್ತಾ ಬರುವ ಅಲೆ ನಿಧಾನಕ್ಕೆ ತಣ್ಣಗಾಗಿ ಕಾಲು ಮುಟ್ಟಿ ಹೋಗುವಾಗ ಉಂಟಾಗುವ ತಣ್ಣಗಿನ ಹೇಳಲಾಗದ ಖುಷಿ ಇವೆರಡನ್ನೂ ಏಕಕಾಲದಲ್ಲಿ ದಯಪಾಲಿಸುತ್ತದೆ ಕಥೆಯೊಂದು ಶುರುವಾಗಿದೆ.

ನಿರ್ದೇಶಕ ಸೆನ್ನಾ ಹೆಗ್ಡೆ ಒಂದು ಚಿತ್ರ ಕಾವ್ಯ  ಕಟ್ಟಿಕೊಟ್ಟಿದ್ದಾರೆ. ಸಮುದ್ರ ದಂಡೆಯಲ್ಲಿರುವ ಪರಿಸರದಲ್ಲಿ ಆರು ಮಂದಿ ಇದ್ದಾರೆ. ಒಬ್ಬೊಬ್ಬರದೂ ಬೇರೆ ಬೇರೆ ಕಥೆ. ಕಥೆ ಹೇಳುತ್ತಲೇ ಒಬ್ಬರನ್ನು ಮತ್ತೊಬ್ಬರ ಕಥೆಯೊಳಗೆ ಸೇರಿಸುತ್ತಾ ಸ್ವಲ್ಪ ಹೊತ್ತಿಗೆ ದೂರ ಸರಿಸುತ್ತಾ ಬದುಕಿನ ಹುಡುಕಾಟದಲ್ಲಿರುವಂತೆ ಕಾಣಿಸುತ್ತಾರೆ ನಿರ್ದೇಶಕ.

ನೋವನ್ನೂ ನಗುತ್ತಲೇ ಸ್ವೀಕರಿಸಿ ಬಾಳುವ ಕ್ಯೂಟ್ ಆದ ಒಂದು ಹಿರಿಜೀವ, ಆ ಜೀವಕ್ಕೆ ನೆಮ್ಮದಿ ಬಯಸುವ ಅವರ ಪತ್ನಿ, ಪ್ರೀತಿ ಹಂಬಲಿಸುವ ತರುಣ, ಅವನಿಗಾಗಿಯೇ ಬರುವ ತರುಣಿ, ಪ್ರೀತಿಸುವ ಹುಡುಗಿಗಾಗಿ ದುಬೈಗೆ ಹೋಗುವ ಕನಸು ಕಾಣುವ ಹಳ್ಳಿ ಹುಡುಗ, ದುಬೈಯವನನ್ನು ಮದುವೆಯಾಗಿ ಜೀವನದಲ್ಲಿ ಸೆಟ್ಲ್ ಆಗುವ ಹಂಬಲದಲ್ಲಿರುವ ಹುಡುಗಿ ಇವರೆಲ್ಲರೂ ಒಂದು ಬೇರೆಯೇ ಜಗತ್ತಿಗೆ ಕರೆದುಕೊಂಡು ಹೋಗುತ್ತಾರೆ.

ಅದು ಈ ಸಿನಿಮಾದ ಹೆಗ್ಗಳಿಕೆ ಮತ್ತು ಶಕ್ತಿ. ಎಲ್ಲರನ್ನೂ ಕೂರಿಸಿ ನಿಧಾನಕ್ಕೆ ಕಥೆ ಹೇಳುತ್ತಾ ಹೋಗುವ ಶೈಲಿ ನಿರ್ದೇಶಕರದು. ಕನ್ನಡಕ್ಕೆ ಹೊಸತು. ನಿರೂಪಣೆಯ ದನಿ ಸ್ವಲ್ಪ ಮೆತ್ತಗಾಯಿತು ಅಂದಾಗ ಕಥೆ ಕೇಳುವವ ಆಚೀಚೆ ನೋಡುವ ಸಂಭವ ಇರುತ್ತದೆ. ಆದರೆ ಈ ಚಿತ್ರದ ಕಥೆ ಮತ್ತು ಕಲಾವಿದರು ಎಂಥಾ ಅದ್ಭುತ ನಟರೆಂದರೆ ಎಲ್ಲರನ್ನೂ ಅವರ ಪರಿಸರಕ್ಕೆ ಮತ್ತು ಮನಸ್ಸೊಳಗೆ ಎಳೆದುಬಿಡುತ್ತಾರೆ. ಹಾಗಾಗಿ ಆಚೆ ನೋಡಬೇಕೆಂದರೂ ಸ್ವಲ್ಪ ಕಷ್ಟವೇ. ಆಗಾಗ ಪಾತ್ರಗಳು ಸ್ವಲ್ಪ ಜಾಸ್ತಿ ಮಾತನಾಡುತ್ತವೆ ಅಂತನ್ನಿಸುವುದು ಹೊರತುಪಡಿಸಿದರೆ ಇದೊಂದು ಚೆಂದದ ಸಿನಿಮಾ.

ನಗಿಸುತ್ತಲೇ ಮೌನಕ್ಕೆ ದೂಡುವ ಬಾಬು ಹಿರಣ್ಣಯ್ಯ, ತುಸು ನಗುವಲ್ಲೇ ಎಷ್ಟೊಂದು ಹೇಳುವ ಅರುಣಾ ಬಾಲರಾಜ್, ನೋಡುನೋಡುತ್ತಾ ಕಣ್ಣಿನಲ್ಲಿ ಪಸೆ ಮೂಡಿಸುವ ದಿಗಂತ್, ಮನಸ್ಸಿನೊಳಗಿನ ಕೋಲಾಹಲವನ್ನು ಮೀರಿ ಖುಷಿ ಅನ್ನಿಸುವ ಪೂಜಾ ದೇವರಿಯಾ, ಕಣ್ಣಿನಲ್ಲೇ ಮಾತನಾಡುವ ಶ್ರೇಯಾ ಅಂಚನ್, ಪೆದ್ದುತನದಲ್ಲೇ ಮನಸ್ಸು ಗೆಲ್ಲುವ ಅಶ್ವಿನ್ ರಾವ್, ನೋಡಿದ ಕೂಡಲೇ ನಗು ಹುಟ್ಟಿಸಿ ಪಾಪ ಅನ್ನಿಸುವ ಪ್ರಕಾಶ್ ತುಮಿನಾಡು ಎಲ್ಲರದೂ ಅದ್ಭುತ ನಟನೆ.

ಕ್ಯಾಮೆರಾದಲ್ಲೂ ಸಂಗೀತದಲ್ಲೂ ಕಥೆ ಹೇಳುವ ಸಚಿನ್ ಮತ್ತು ಶ್ರೀರಾಜ್ ಕೆಲಸ ಚೆಂದಾಚೆಂದ. ಚಿತ್ರದ ಸರ್ಪ್ರೈಸ್ ಅಭಿಜಿತ್ ಮಹೇಶ್ ಸಂಭಾಷಣೆ. ಪ್ಯಾಷನ್ ಇದ್ದರೆ ಸಿನಿಮಾ ಹೇಗೆ ಬರುತ್ತದೆ ಅನ್ನುವುದಕ್ಕೆ ಈ ಸಿನಿಮಾ ನೋಡಿದ ನಂತರ ಮನಸ್ಸಲ್ಲಿ ಉಳಿದ ಅನುಭವವೇ ಸಾಕ್ಷಿ. 

-ರಾಜೇಶ್ ಶೆಟ್ಟಿ  


ಚಿತ್ರ: ಕಥೆಯೊಂದು ಶುರುವಾಗಿದೆ
ನಿರ್ದೇಶನ: ಸೆನ್ನಾ ಹೆಗ್ಡೆ
ತಾರಾಗಣ: ದಿಗಂತ್, ಪೂಜಾ, ಬಾಬು ಹಿರಣ್ಣಯ್ಯ,
ಅರುಣಾ ಬಾಲರಾಜ್, ಅಶ್ವಿನ್ ರಾವ್, ಶ್ರೇಯಾ
ಅಂಚನ್, ಪ್ರಕಾಶ್ ತುಮಿನಾಡು
ನಿರ್ಮಾಣ: ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ
ಸಂಗೀತ: ಸಚಿನ್ ವಾರಿಯರ್
ಛಾಯಾಗ್ರಹಣ: ಶ್ರೀರಾಜ್ ರವೀಂದ್ರನ್
ರೇಟಿಂಗ್: ****

click me!