
ವೈಯಕ್ತಿಕ, ರಾಜಕೀಯ ಅಥವಾ ಸೆಲೆಬ್ರಿಟಿಗಳ ಜೀವನದಲ್ಲಿ ಆಗುವ ವಿವಾದಗಳಿಂದ ಹುಟ್ಟಿಕೊಳ್ಳುವ ಹೆಸರುಗಳಿಗಾಗಿಯೇ ಕಾದು ಕೂತವರಂತೆ ಇತ್ತೀಚೆಗೆ ಕನ್ನಡದಲ್ಲೂ ಕಾಣುತ್ತಿದ್ದಾರೆ. ಸಿನಿಮಾಗಳಲ್ಲಿ ಫೇಮಸ್ ಆದ ಡೈಲಾಗ್, ಹಾಡುಗಳ ಸಾಲುಗಳನ್ನೇ ಚಿತ್ರದ ಹೆಸರುಗಳನ್ನಾಗಿಸಿಕೊಂಡು ಸಿನಿಮಾ ಮಾಡುವ ಜಾಗದಲ್ಲಿ ಈಗ ವಿವಾದಗಳಿಂದ ಹುಟ್ಟಿಕೊಳ್ಳುವ ಪದಗಳನ್ನೇ ಟೈಟಲ್‌ಗಳನ್ನಾಗಿಸುವ ಟ್ರೆಂಡ್ ಶುರುವಾಗಿದೆ ಎಂಬುದಕ್ಕೆ ಸಾಕಷ್ಟುಉದಾಹರಣೆಗಳು ಸಿಗುತ್ತವೆ.
ಚಿತ್ರರಂಗದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಗಳು ನಡೆಯುತ್ತಿದೆ ಎಂದು ಆರೋಪಿಸಿ ಒಂದಿಷ್ಟುಹೋರಾಟ- ಪ್ರತಿರೋಧ ಹಾಗೂ ಪ್ರತಿಭಟನೆಗಳು ಶುರುವಾದವು. ಹೆಣ್ಣು ಮಕ್ಕಳ ಈ ಧ್ವನಿಗೆ ‘ಮೀಟೂ’ ಎನ್ನುವ ಹೆಸರು ಬ್ರಾಂಡ್ ಆಗಿ ಪ್ರಸಿದ್ಧಿ ಆಗುತ್ತಿದಂತೆಯೇ ‘ಮೀಟೂ’ ಹೆಸರನ್ನು ಸಿನಿಮಾ ಟೈಟಲ್ ಆಗಿಸಿದರು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಭಾರತದ ಎಲ್ಲ ಚಿತ್ರರಂಗದಲ್ಲೂ ‘ಮೀಟೂ’ ಎನ್ನುವನ ಹೆಸರು ಪ್ರಸಿದ್ಧಿ ಆಗುತ್ತಿದಂತೆಯೇ ಹೇಗೆ ಅದನ್ನು ಸಿನಿಮಾ ಹೆಸರಾಗಿಯೂ ಬಂಡವಾಳ ಮಾಡಿಕೊಳ್ಳಬಹುದು ಎಂದು ಯೋಚಿಸಿದರೂ ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ನಡೆದ ಕೆಲ ವಿವಾದಗಳೂ ಕೂಡ ಸಿನಿಮಾ ಹೆಸರುಗಳಿಗೆ ಸರಕಾಗಿವೆ. ಅದರಲ್ಲೂ ಮಂಡ್ಯದಲ್ಲಿ ನಡೆದ ಎಲೆಕ್ಷನ್ ಫೈಟ್ ಯಾರಿಗೆ ಲಾಭ ತಂದುಕೊಡುತ್ತದೋ ಗೊತ್ತಿಲ್ಲ, ಆದರೆ, ಚಿತ್ರರಂಗಕ್ಕೆ ಮಾತ್ರ ಏಳೆಂಟು ಟೈಟಲ್‌ಗಳು ಸಿಕ್ಕಿವೆ. ಮಂಡ್ಯ ಲೋಕಸಭಾ ಚುನಾವಣೆಯ ಒಂದರಲ್ಲೇ ನಾಲ್ಕೈದು ಟೈಟಲ್‌ಗಳು ಹುಟ್ಟಿಕೊಂಡಿವೆ ಎಂದರೆ, ನೀವೇ ಊಹಿಸಿ ಸಿನಿಮಾ ಮಂದಿ ವಿವಾದ- ವಿನೋದ ಪ್ರಿಯರು ಎಂಬುದನ್ನು.
ದರ್ಶನ್ ಮುಂದಿನ ಚಿತ್ರಕ್ಕೆ ಈ ಟೈಟಲ್ ಕೊಟ್ರಾ?
ಮಂಡ್ಯದ ಹೆಣ್ಣು ಟೈಟಲ್‌ಗೂ ಬೇಡಿಕೆ
ಮಂಡ್ಯ ರಾಜಕಾರಣದಲ್ಲಿ ಹುಟ್ಟಿಕೊಂಡು ಸದ್ಯ ಬಹು ಬೇಡಿಕೆ ಟೈಟಲ್ ಎನಿಸಿಕೊಂಡಿರುವುದು ಜೋಡೆತ್ತು, ಎಲ್ಲಿದ್ದೀಯಪ್ಪ, ನಿಖಿಲ್ ಎಲ್ಲಿದ್ದೀಯಪ್ಪ, ಮಂಡ್ಯದ ಹೆಣ್ಣು, ಮಂಡ್ಯ ಹೆಣ್ಣು ಮುಂತಾದವು. ಈ ಪೈಕಿ ಎಂಜಿ ರಾಮಮೂರ್ತಿ ಬ್ಯಾನರ್‌ನಲ್ಲಿ ‘ಜೋಡೆತ್ತು’ ಟೈಟಲ್ ರಿಸ್ಟರ್ ಆಗಿದ್ದರೆ, ‘ಎಲ್ಲಿದ್ದೀಯಪ್ಪ’ ಎನ್ನುವ ಹೆಸರು ಹೊಸಬರ ತಂಡ ರಿಜಿಸ್ಟರ್ ಮಾಡಿಕೊಂಡು ಅದನ್ನು ಅಧಿಕೃತವಾಗಿ ವಾಣಿಜ್ಯ ಮಂಡಳಿಯಲ್ಲೇ ಬಿಡುಗಡೆ ಕೂಡ ಮಾಡಿಕೊಂಡಿದೆ. ಇವುಗಳ ನಡುವೆ ಸಕತ್ ಡಿಮ್ಯಾಂಡ್ ಪಡೆದುಕೊಂಡಿರುವುದು ಮಾತ್ರ ‘ನಿಖಿಲ್ ಎಲ್ಲಿದ್ದೀಯಪ್ಪ’ ಎನ್ನುವ ಟೈಟಲ್. ಇದಕ್ಕೆ ಈಗಾಗಲೇ ನಾಲ್ಕೈದು ಮಂದಿ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ‘ನಿಖಿಲ್ ಎಲ್ಲಿದ್ದೀಯಪ್ಪ ಎನ್ನುವುದು ನನ್ನ ಟೈಟಲ್ ಅದು. ನಾನೇ ಆ ಹೆಸರಿನಲ್ಲಿ ಸಿನಿಮಾ ಮಾಡುತ್ತೇನೆ’ ಎಂದು ಸ್ವತಃ ನಿಖಿಲ್ ಕುಮಾರಸ್ವಾಮಿ ಅವರೇ ಘೋಷಿಸಿದ್ದಾರೆ. ಸಚಿವ ಪುಟ್ಟರಾಜು ಆ ಟೈಟಲ್‌ನಲ್ಲಿ ಅವರು ನಾವೇ ಸಿನಿಮಾ ಮಾಡುತ್ತೇವೆ ಎಂದಿದ್ದಾರೆ. ಆದರೆ, ವಾಣಿಜ್ಯ ಮಂಡಳಿ ಯಾರಿಗೆ ಈ ಟೈಟಲ್ ಕೊಡಲಿದೆ ಎನ್ನುವುದು ಸದ್ಯದ ಕುತೂಹಲ.
ಒಂದು ಕತೆ ಬರೆದು, ಅದಕ್ಕೊಂದು ಹೆಸರಿಟ್ಟು, ಆ ಹೆಸರಿಗೆ ಒಬ್ಬ ನಾಯಕ ನಟನನ್ನು ಹೀರೋ ಆಗಿಸುವುದು ಸಹಜ. ಆದರೆ, ಕತೆಯೇ ಇಲ್ಲ. ಕೇವಲ ವಿವಾದದಿಂದ ಸಿಕ್ಕ ಪ್ರಚಾರವನ್ನೇ ನಂಬಿಕೊಂಡು ಕತೆಗಿಂತ ಟೈಟಲ್ ಮುಖ್ಯ ಎಂದುಕೊಳ್ಳುತ್ತಿರುವವರಿಗೆ ಏನು ಹೇಳಬೇಕು? ಕೇವಲ ವಿವಾದಗಳಿಂದ ಹುಟ್ಟಿಕೊಂಡ ಮಾತುಗಳೇ ಸಿನಿಮಾ ಟೈಟಲ್ ಮಾಡಿಕೊಂಡ ಸಿನಿಮಾಗಳು ಗೆದ್ದ ಉದಾಹರಣೆಗಳು ಒಂದೇ ಒಂದು ಇಲ್ಲ. ಆದರೂ ವಿವಾದಗಳ ಬೆನ್ನೇರಿ ಹೊರಟವರ ನಡುವೆ ‘ಪ್ರೇಕ್ಷಕ ಎಲ್ಲಿದ್ದೀಯಪ್ಪಾ’ ಎಂದು ನೆನೆಯುವವರು ಯಾರು?
ಭಾರಿ ಬೇಡಿಕೆಯ ಟೈಟಲ್‌ಗಳು
- ಜೋಡೆತ್ತು
- ಎಲ್ಲಿದ್ದೀಯಪ್ಪ
- ನಿಖಿಲ್ ಎಲ್ಲಿದ್ದೀಯಪ್ಪ
- ಮಂಡ್ಯದ ಹೆಣ್ಣು
- ಮಂಡ್ಯ ಹೆಣ್ಣು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.