ಚಿತ್ರರಂಗದಲ್ಲೊಂದು ವಿಶಿಷ್ಟ ಪ್ರಯತ್ನ ’ಅಮ್ಮಚ್ಚಿಯೆಂಬ ನೆನಪು’

By Web DeskFirst Published Nov 2, 2018, 11:26 AM IST
Highlights

‘ಅಕ್ಕು’,‘ಅಮ್ಮಚ್ಚಿಯೆಂಬ ನೆನಪು’ ಮತ್ತು ‘ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು’ ಪ್ರಸಿದ್ಧ ಕಥೆಗಾರ್ತಿ ವೈದೇಹಿಯವರ ಈ ಮೂರು ಅಪರೂಪದ ಕಥೆಗಳೇ ಈಗ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರವಾಗಿದೆ. ಕನ್ನಡ ರಾಜ್ಯೋತ್ಸವದಂದು ಈ ಚಿತ್ರ ಬಿಡುಗಡೆಯಾಗಿದೆ. 

ಬೆಂಗಳೂರು (ನ. 02): ‘ಅಕ್ಕು’,‘ಅಮ್ಮಚ್ಚಿಯೆಂಬ ನೆನಪು’ ಮತ್ತು ‘ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು’ ಪ್ರಸಿದ್ಧ ಕಥೆಗಾರ್ತಿ ವೈದೇಹಿಯವರ ಈ ಮೂರು ಅಪರೂಪದ ಕಥೆಗಳೇ ಈಗ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರವಾಗಿದೆ. ನಿರ್ದೇಶನ ಮಾಡಿದ್ದು ರಂಗಕರ್ಮಿ ಚಂಪಾ ಶೆಟ್ಟಿ. ಇದರಲ್ಲಿ ರಾಜ್ ಬಿ ಶೆಟ್ಟಿ ಮತ್ತು ವೈಜಯಂತಿ ಪ್ರಮುಖ ಪಾತ್ರಧಾರಿಗಳು. ಕನ್ನಡ ಚಿತ್ರರಂಗದಲ್ಲಿ ಇದೊಂದು ವಿಶಿಷ್ಟ ಪ್ರಯತ್ನ. ರಾಜ್ಯೋತ್ಸವದಂದು ಚಿತ್ರ ಬಿಡುಗಡೆಯಾಗಿದೆ.  ಈ ಕುರಿತು ಚಿತ್ರದ ಪ್ರಮುಖರು ಹೇಳಿದ್ದು ಇಲ್ಲಿದೆ.

ಈ ಪ್ರಯತ್ನ ಯಶಸ್ವಿಯಾಗುತ್ತದೆ ಎಂಬ ಭರವಸೆ ನನಗೆ

ಕೂಡಿಟ್ಟುಕೊಂಡ ಹಣದಿಂದ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದು ನನಗೆ ಬಹಳ ಸಂತೋಷ ಕೊಟ್ಟ ವಿಷಯ. ಎಲ್ಲಿ ಶ್ರದ್ಧೆ ಮತ್ತು ಪ್ರೀತಿಯಿಂದ ಕೆಲಸ ಮಾಡುತ್ತೇವೋ ಆ ಕೆಲಸ ಯಶಸ್ವಿಯಾಗುತ್ತೆ. ಶ್ರದ್ಧೆ, ಪ್ರೀತಿ ಮತ್ತು ಒಳ್ಳೆಯ ಉದ್ದೇಶ ಇಟ್ಟುಕೊಂಡು ಚಂಪಾ ಶೆಟ್ಟಿ ಈ ಸಿನಿಮಾ ಮಾಡ್ತಿದ್ದಾರೆ. ಹಣಕ್ಕೋಸ್ಕರ ಬೇರೆ ನಿರ್ಮಾಪಕರ ಮೊರೆ ಹೋಗದೇ ಅವರೇ ಕೆಲವು ಮಂದಿ ಸೇರಿಕೊಂಡು ಚಿತ್ರ ನಿರ್ಮಿಸಿದ್ದಾರೆ. ಅವರ ಧೈರ್ಯ ಕಂಡು ನಾನು ಬೆರಗಾಗಿದ್ದೇನೆ. ಈ ಪ್ರಯತ್ನ ಯಶಸ್ವಿಯಾಗುತ್ತದೆ ಎಂಬ ಭರವಸೆ ನನಗಿದೆ.

ಕುಂದಾಪ್ರ ಭಾಷೆಯನ್ನು ದುಡಿಸಿಕೊಳ್ಳುವುದರಿಂದ ಹಿಡಿದು ಕಥೆಯ ಸೂಕ್ಷ್ಮ ವಿವರಗಳನ್ನು ಕಲೆ ಹಾಕುವುದು, ಅತ್ಯುತ್ತಮ ಸಿನಿಮಾಟೋಗ್ರಫಿ ಇದಕ್ಕೆ ಪೂರಕವಾಗಿ ಬಂದಿದೆ. ಎಲ್ಲರೂ ಸಂತೋಷದಿಂದ ಕೆಲಸ ಮಾಡಿದ್ದಾರೆ. ‘ಅಮ್ಮಚ್ಚಿ’ ಅವತ್ತಿನ ಕಥೆ ಮಾತ್ರ ಅಲ್ಲ, ಇವತ್ತಿನ ಕಥೆ ಕೂಡ. ಇವತ್ತು ನಾವು ಕಾಣುವುದು ಅವತ್ತಿನ ಹೆಣ್ಣಿನ ಸಂಕಷ್ಟಗಳ ರೂಪಾಂತರ ಅಷ್ಟೇ. ಯಥಾಸ್ಥಿತಿ ಹಾಗೇ ಇದೆ.

ಈ ಸಿನಿಮಾ ಸಮಾಜದ ಜೊತೆಗೆ ಒಂದು ಸಂವಾದ. ಜೊತೆಗೆ ಕಥೆಯ ಆಶಯಕ್ಕೆ ಎಲ್ಲೂ ಧಕ್ಕೆಯಾಗದ ಹಾಗೆ ಈ ಸಿನಿಮಾ ಮಾಡಿದ್ದಾರೆ ಅನ್ನೋದು ನನ್ನ ನಂಬಿಕೆ. ಚಿತ್ರ ನೋಡಲು ನಾನು ಬಹಳ ಉತ್ಸುಕಳಾಗಿದ್ದೇನೆ. ನನ್ನ ಕವನ ಸಂಕಲನದ ಪದ್ಯಗಳನ್ನು ಆರಿಸಿಕೊಂಡು ಕಥಾ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಸಿದ್ದಾರೆ. ಒಳ್ಳೆಯ ರಾಗದೊಂದಿಗೆ ಪ್ರಸ್ತುತ ಪಡಿಸಿದ್ದಾರೆ ಎನ್ನುತ್ತಾರೆ ವೈದೇಹಿ. 

ಜಾಗತಿಕ ಆಶಯ ಹೊತ್ತ ಅಪ್ಪಟ ಪ್ರಾದೇಶಿಕ ಚಿತ್ರ 

ಬಹಳ ಪ್ರಾಮಾಣಿಕ ಸಿನಿಮಾ ಇದು. ಎಷ್ಟೋ ಸಲ ನಾವು ಮಾರ್ಕೆಟ್‌ಗೆ ತಕ್ಕಂಥ ಸಿನಿಮಾ ಮಾಡ್ತೀವಿ. ಇದು ಅದಕ್ಕಿಂತ ಭಿನ್ನ. ಅತ್ಯುತ್ತಮ ಗುಣಮಟ್ಟದ ಚಿತ್ರ, ಕಲಾ ಮಾಧ್ಯಮದಲ್ಲಿದೆ. ಪ್ರಾದೇಶಿಕತೆಗೆ ಬಹಳ ಒತ್ತು ಕೊಡಲಾಗಿದೆ. ಎಷ್ಟೋ ಸಲ ನಮ್ಮ ಜನ ಕನ್ನಡ ಸಿನಿಮಾ ನೋಡಲ್ಲ ಅಂತೀವಿ, ಬಳ್ಳಾರಿಯ ಮಂದಿ ತೆಲುಗು ಸಿನಿಮಾವನ್ನೇ ನೋಡ್ತಾರೆ ಅಂತ ಆರೋಪ ಮಾಡ್ತೀವಿ. ಆದರೆ ನಾವು ನೆಗೆಟಿವ್ ಅಂಶಗಳನ್ನು ಬಿಟ್ಟು ನೈಜ ಬಳ್ಳಾರಿಯನ್ನು ಸಿನಿಮಾಗಳಲ್ಲಿ ಎಷ್ಟು ತೋರಿಸುತ್ತೇವೆ ಅನ್ನೋದನ್ನು ಗಮನಿಸಲ್ಲ.

ಅಮ್ಮಚ್ಚಿ ಜಾಗತಿಕ ಆಶಯ ಹೊತ್ತ ಅಪ್ಪಟ ಪ್ರಾದೇಶಿಕ ಚಿತ್ರ. ಇದು ಜಾಗತಿಕ ಮಟ್ಟದ ಅತ್ಯುತ್ತಮ ಸಿನಿಮಾದ ಗುಣಲಕ್ಷಣವೂ ಹೌದು. ಇದರಲ್ಲಿ ನನ್ನದು ವೆಂಕಪ್ಪಯ್ಯ ಎಂಬ ಪಾತ್ರ. ಸಿನಿಮಾ ದೃಷ್ಟಿಯಿಂದ ನೆಗೆಟಿವ್ ಶೇಡ್ ಇದೆ. ಆದರೆ ಹೆಚ್ಚು ಕಡಿಮೆ ನಮ್ಮಲ್ಲೆಲ್ಲ ಒಬ್ಬ ವೆಂಕಪ್ಪಯ್ಯ ಇದ್ದಾನೆ. ಆತ ನಮ್ಮೊಳಗಿನ ನೆಗೆಟಿವಿಟಿಗೆ ಕನ್ನಡಿಯ ಹಾಗಿದ್ದಾನೆ. ಬಹಳ ಇಷ್ಟಪಟ್ಟು ಈ ಪಾತ್ರ ಮಾಡಿದ್ದೇನೆ. ಇದು ಮುಂಬರುವ ಸಿನಿಮಾಗಳ ಬಗ್ಗೆ ನಿರ್ಣಾಯಕ ಪಾತ್ರ ನಿರ್ವಹಿಸಬಲ್ಲ ಚಿತ್ರ. ಇದು ಗೆದ್ದರೆ ಮುಂದೆ ಇಂಥಾ ಚಿತ್ರಗಳು ಬರುತ್ತವೆ. ಸೋತರೆ ಇದೇ ಕೊನೆಯ ಸಿನಿಮಾ ಆಗುತ್ತದೆ. 

- ರಾಜ್ ಬಿ ಶೆಟ್ಟಿ 

ಮುಗ್ಧ ಹುಡುಗಿ ನಾನು ಅಮ್ಮಚ್ಚಿ

ಇದು ಮುಗ್ಧ ಹಳ್ಳಿ ಹುಡುಗಿಯ ಕಥೆ. ನಾನಿಲ್ಲಿ ಅಮ್ಮಚ್ಚಿ. ಏನೂ ತಿಳಿಯದ ತನ್ನದೇ ಪ್ರಪಂಚದಲ್ಲಿರುವ ಹುಡುಗಿ ಶೋಷಣೆಗೆ ಒಳಗಾಗುತ್ತಾಳೆ. ತನಗಾಗುವ ಅನ್ಯಾಯದ ವಿರುದ್ಧ ಹೋರಾಡುತ್ತಾ, ಅವಳಾಗಿಯೇ ಉಳಿದುಕೊಳ್ಳುತ್ತಾಳೆ. ಇದನ್ನೇ ಚಿತ್ರದಲ್ಲಿ ತೋರಿಸಲಾಗಿದೆ. ಈ ಪಾತ್ರ ತುಂಬಾ ಕಾಡಿಸಿದೆ, ಮನಸ್ಸಲ್ಲಿ ತಳಮಳ ಹುಟ್ಟಿಸಿದೆ. ಸಿನಿಮಾದೊಳಗಿನ ಒಂದು ಪಾತ್ರವೇ ಅದಾಗಿದ್ದರೂ, ನನ್ನೊಳಗೆ ಸದಾ ಜತೆಗಿದೆ.

ಅದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆನ್ನುವ ಕುತೂಹಲ ಇದೆ. ಅಮ್ಮಚ್ಚಿ ಸಾಂಕೇತಿಕ ಮಾತ್ರ. ಸಮಾಜದಲ್ಲಿ ಇಂತಹ ಅದೆಷ್ಟೋ ಹುಡುಗಿಯರು ಇದ್ದಾರೆ. ಅವರ ಪ್ರತಿನಿಧಿ ಆಕೆ ಎಂದರೂ ತಪ್ಪಿಲ್ಲ. ಆ ಪಾತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದೇ ನನ್ನ ಸೌಭಾಗ್ಯ. 

-ವೈಜಯಂತಿ, ನಟಿ 

click me!