
ಚಿತ್ರೀಕರಣಕ್ಕೆ ಮುಹೂರ್ತವೂ ಆಯ್ತು, ಕ್ಲಾಪ್ ಮಾಡುವ ಮೂಲಕ ಚಾಲನೆಯೂ ದೊರೆಯಿತು. ಆದರೆ ‘ಒಡೆಯ’ನಿಗೆ ಒಡತಿಯೇ ದೊರಕಿಲ್ಲ. ಸಂದೇಶ್ ಪ್ರೊಡಕ್ಷನ್‌ನಲ್ಲಿ ನಿರ್ಮಿಸುತ್ತಿರುವ ಒಡೆಯ ಚಿತ್ರಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತಿಗಿಳಿದ ನಿರ್ದೇಶಕ ಎಂ.ಡಿ. ಶ್ರೀಧರ್, ಸೆ.೧೦ರಿಂದ ಸಿನಿಮಾದ ಚಿತ್ರೀಕರಣ ಮುಂದುವರೆಯಲಿದೆ. ಇನ್ನೂ ನಾಯಕಿ ಆಯ್ಕೆ ಮಾಡಿಲ್ಲ ಎಂದರು.
ರವಿಶಂಕರ್, ದೇವರಾಜು, ಚಿಕ್ಕಣ್ಣ, ಸಾಧು ಕೋಕಿಲ ಹೆಸರು ಅಂತಿಮಗೊಳಿಸಲಾಗಿದೆ. ದರ್ಶನ್ ಜೊತೆ ಕೆಲಸ ಮಾಡುವುದು ಖುಷಿ ನೀಡುತ್ತದೆ. ಅವರಿಗೆ ಎಷ್ಟೇ ಒತ್ತಡ, ನೋವು ಇದ್ದರೂ ಕ್ಯಾಮೆರಾ ಮುಂದೆ ನನ್ನ ನಿರೀಕ್ಷೆಗೂ ಮೀರಿ ನಟಿಸುತ್ತಾರೆ. ಸಂದೇಶ್ ಬ್ಯಾನರ್‌ನಲ್ಲಿ ನಿರ್ದೇಶಕನಾಗಿ ನನಗಿದು ಮೊದಲ ಸಿನಿಮಾ ಎಂದರು.
ಸಂದೇಶ್ ಬ್ಯಾನರ್‌ನಡಿ ಏಳೆಂಟು ಸಿನಿಮಾ ಮಾಡಿದ್ದೇನೆ. ದರ್ಶನ್ ಜೊತೆ ನನಗಿದು ಹನ್ನೊಂದನೇ ಸಿನಿಮಾ. ದರ್ಶನ್ ಅವರಂಥ ದೊಡ್ಡ ನಟರೊಡನೆ ಕೆಲಸ ಮಾಡುವುದು ಖುಷಿ ನೀಡುತ್ತದೆ. ಇದು ತಮಿಳಿನ ವೀರಂ ಸಿನಿಮಾದ ರಿಮೇಕ್. ಹಿಂದಿಯ ಶೋಲೆ ಸಿನಿಮಾಗಿಂತಲೂ ಉತ್ತಮವಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಛಾಯಾಗ್ರಾಹಕ ಕೃಷ್ಣಕುಮಾರ್. ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಪುತ್ರ ಸಂದೇಶ್ ಮಾತನಾಡಿ, ಸಂದೇಶ್ ಕಂಬೈನ್ಸ್‌ನಲ್ಲಿ ಸುಮಾರು ೨೭ ಸಿನಿಮಾ ಬಂದಿದೆ. ಸಂದೇಶ್ ಪ್ರೊಡಕ್ಷನ್‌ನಲ್ಲಿ ಇದು ಎರಡನೇ ಸಿನಿಮಾ. ಇದಕ್ಕೂ ಮುನ್ನ ಐರಾವತ ಸಿನಿಮಾ ನಿರ್ಮಿಸಲಾಗಿತ್ತು. ಬಜೆಟ್ ನಿರ್ಧರಿಸಿಲ್ಲ. ಐಡಿಯಾ ಬದಲಾದಂತೆ ಬಜೆಟ್ ಗಾತ್ರವೂ ಹೆಚ್ಚುತ್ತದೆ ಎಂದರು.
ದರ್ಶನ್ ಹೇಳಿದ್ದು
- ನಾವು ಸಿನಿಮಾದ ಹೆಸರು ನೋಂದಾಯಿಸುವಾಗಲೇ ಒಡೆಯ ಹೆಸರನ್ನು ನೀಡಿದ್ದೆವು. ಒಡೆಯ ಅಥವಾ ಒಡೆಯರ್ ಹೆಸರಿನಲ್ಲಿ ಸ್ವಲ್ಪ ಗೊಂದಲವಿತ್ತು. ಕೆಲವರು ಅಷ್ಟರಲ್ಲಾಗಲೇ ಒಡೆಯರ್ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಒಡೆಯರ್ ಹೆಸರಿಗೆ ಒಪ್ಪಿಗೆ ನೀಡಿದ್ದರು. ಆದರೆ ಒಡೆಯ ಎಂಬ ಹೆಸರನ್ನೇ ಅಂತಿಮಗೊಳಿಸಲಾಗಿದೆ.
- ಸೆ.10ರ ನಂತರ ಚಿತ್ರೀಕರಣ ಮೊದಲ ಹಂತದಲ್ಲಿ 45 ದಿನ ಮೈಸೂರಿನಲ್ಲಿಯೇ ನಡೆಯಲಿದೆ. ಮೈಸೂರು,ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಕುರುಕ್ಷೇತ್ರ ಸಿನಿಮಾದ ಚಿತ್ರೀಕರಣ ಮುಗಿದಿದೆ. ಗ್ರಾಫಿಕ್ ಕೆಲಸ ಹೆಚ್ಚು ಇರುವುದರಿಂದ ಸಿನಿಮಾದ ಬಿಡುಗಡೆ ತಡವಾಗಿದೆ. ನಾನು ಯಾವುದೇ ಸಿನಿಮಾದಿಂದ ಪಾಠ ಕಲಿತಿಲ್ಲ. ಒಂದೊಂದು ಸಿನಿಮಾ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಕೆಲವೊಂದು ಇಷ್ಟವಾಗುವುದಿಲ್ಲ ಎಂದು ದರ್ಶನ್ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.