
ತೆಲುಗಿನ ‘ಬಾಹುಬಲಿ' ಪ್ರಪಂಚದಾದ್ಯಂತ ಇನ್ನೂ ಅಬ್ಬರಿಸುತ್ತಿದೆ. ನಿರ್ದೇಶಕ ಎಸ್.ಎಸ್.ರಾಜಮೌಳಿ ಸೃಷ್ಟಿಸಿದ ಬಾಹುಬಲಿಯ ಪಾತ್ರದ ಜೊತೆಗೇ ಆ ಸಿನಿಮಾದಲ್ಲಿ ಬಲ್ಲಾಳದೇವನಾಗಿ ನಟಿಸಿದ ರಾಣಾ ದಗ್ಗುಬಾಟಿ ಕೂಡ ಪ್ರೇಕ್ಷಕರ ಕಣ್ಣಲ್ಲಿ ಅಚ್ಚಾಗಿದ್ದಾರೆ. ಇದೀಗ ರಾಣಾ ದಗ್ಗುಬಾಟಿ ಕನ್ನಡಕ್ಕೂ ಬರುವ ಸುದ್ದಿ ದಟ್ಟವಾಗಿದೆ. ಎಲ್ಲಾ ಸರಿ ಹೋದರೆ ಎ.ಎಂ.ಆರ್. ರಮೇಶ್ ನಿರ್ದೇಶನದ ಬಹುನಿರೀಕ್ಷಿತ ‘ಆಸ್ಫೋಟ' ಚಿತ್ರಕ್ಕೆ ರಾಣಾ ಬರಲಿದ್ದಾರೆ!
ಅವರನ್ನು ಕನ್ನಡಕ್ಕೆ ಕರೆತರುವ ಯತ್ನ ತೆರೆಮರೆಯಲ್ಲಿ ನಡೆದಿದ್ದು, ಬೆಂಗಳೂರಿನಲ್ಲಿ ನಿರ್ದೇಶಕ ರಮೇಶ್ ಮತ್ತು ನಟ ರಾಣಾ ಭೇಟಿಯಾಗಿ ಇನ್ನಷ್ಟುಅಚ್ಚರಿ ಮೂಡಿಸಿದ್ದಾರೆ. ವಿವಾದಿತ ಘಟನೆಗಳು ಅಥವಾ ವಿವಾದಿತ ವ್ಯಕ್ತಿಗಳನ್ನಾಧರಿಸಿ ಸಿನಿಮಾ ಮಾಡುವುದರಲ್ಲಿಯೇ ಹೆಚ್ಚು ಸುದ್ದಿ ಆದವರು ನಿರ್ದೇಶಕ ಎ.ಎಮ್.ಆರ್. ರಮೇಶ್. ಕಾಡುಗಳ್ಳ, ದಂತಚೋರ ವೀರಪ್ಪನ್ ಕುರಿತು ‘ಅಟ್ಟಹಾಸ 'ಸಿನಿಮಾ ಮಾಡಿದ್ದರು. ಅದಕ್ಕೂ ಮೊದಲು ಎಲ್‌ಟಿಟಿಇ ಉಗ್ರರ ಕುರಿತು ‘ಸೈನೈಡ್' ಚಿತ್ರ ನಿರ್ದೇಶಿಸಿದ್ದರು. ಈ ವರ್ಷದ ಆರಂಭದಲ್ಲಿಯೇ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಕುರಿತು ‘ಆಸ್ಫೋಟ' ಹೆಸರಿನ ಚಿತ್ರ ಅನೌನ್ಸ್ ಮಾಡಿದ್ದರು. ಸದ್ಯಕ್ಕೀಗ ಅದರ ಪೂರ್ವಸಿದ್ಧತೆಯಲ್ಲಿ ಬ್ಯುಸಿ ಆಗಿರುವ ಅವರು, ಶನಿವಾರ ಬೆಂಗಳೂರಿನ ಯುಬಿ ಸಿಟಿಯಲ್ಲಿ ನಟ ರಾಣಾ ದಗ್ಗುಬಾಟಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
‘ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಹಿರಿಯ ಸಿಬಿಐ ಅಧಿಕಾರಿ ಕಾರ್ತಿಕೇಯನ್. ಚಿತ್ರದಲ್ಲಿ ಅವರ ಪಾತ್ರವೂ ಇದೆ. ಆ ಪಾತ್ರಕ್ಕೆ ಸೂಕ್ತ ನಟನನ್ನು ಶೋಧಿಸುತ್ತಿದ್ದೇನೆ. ಸದ್ಯಕ್ಕೆ ನನ್ನ ತಲೆಯಲ್ಲಿ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನ ಯುಬಿ ಸಿಟಿಯಲ್ಲಿ ಅವರನ್ನು ಭೇಟಿ ಮಾಡಿದ್ದೆ. ಚಿತ್ರದ ಕತೆ ಮತ್ತು ಕಾರ್ತಿಕೇಯನ್ ಪಾತ್ರದ ಕುರಿತು ನಮ್ಮಿಬ್ಬರ ನಡುವೆ ಮೂರು ಸುತ್ತಿನ ಮಾತುಕತೆ ನಡೆದಿದೆ. ಅವರಿಗೆ ಕತೆ ಮೆಚ್ಚುಗೆ ಆಗಿದೆ. ಪಾತ್ರವೂ ಇಷ್ಟವಾಗಿದೆ. ಸದ್ಯಕ್ಕೆ ಅಭಿನಯಿಸುವ ಬಗ್ಗೆ ಯಾವುದೂ ಫೈನಲ್ ಆಗಿಲ್ಲ. ಆದರೆ ಅವರಿಗೆ ಕನ್ನಡದಲ್ಲಿ ಅಭಿನಯಿಸುವ ಆಸಕ್ತಿಯಿದೆ' ಎನ್ನುತ್ತಾರೆ ನಿರ್ದೇಶಕ ರಮೇಶ್
ವರದಿ: ಸಿನಿ ಫ್ಲ್ಯಾಷ್, ಕನ್ನಡಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.