ದೀಪ ಹಚ್ಚುವಾಗ ಅಸತೋಮ ಸದ್ಗಮಯ ಅಂತೀವಿ. ಇದೇ ಹೆಸರಿನಲ್ಲಿ ಸಿನಿಮಾವೊಂದು ಬಂದಿದೆ. ಹೇಗಿದೆ ಚಿತ್ರ? ಏನೆಲ್ಲಾ ವಿಶೇಷಗಳಿವೆ? ಏನ್ ಹೇಳೋಕೆ ಹೊರಟಿದ್ದಾರೆ ನಿರ್ದೇಶಕರು? ತಿಳ್ಕೊಳೋಕೆ ಈ ವಿಮರ್ಶೆ ಓದಿ.
ದತ್ತು ಮಕ್ಕಳು ಹೆತ್ತವರನ್ನು ಹುಡುಕುತ್ತಾ ಊರು, ದೇಶ ಅಲೆಯುವ ವಸ್ತುವುಳ್ಳ ಸಿನಿಮಾಗಳು ಚಿತ್ರರಂಗಕ್ಕೆ ಹೊಸತಲ್ಲ. ಜೋನಾಥನ್, ಲಯನ್ ಮೊದಲಾದ ಸಿನಿಮಾಗಳು ಇದೇ ಕಥಾವಸ್ತುವನ್ನಿಟ್ಟುಕೊಂಡು ಬಂದಿವೆ.
ವಿದೇಶಿಯರಿಗೆ ದತ್ತು ನೀಡಿದ ಹುಡುಗಿಯೊಬ್ಬಳು ಹೆತ್ತವರನ್ನು ಹುಡುಕುತ್ತ ತಾಯ್ನಾಡಿಗೆ ಬರುವ ವಸ್ತುವನ್ನೇ ಇನ್ನಷ್ಟು ವಿಸ್ತರಿಸಿ ಬೇರೊಂದು ನೆಲೆಗೆ ಮುಟ್ಟಿಸಿದ ಸಿನಿಮಾ‘ಅಸತೋಮಾ ಸದ್ಗಮಯ’. ದೂರದ ಫಿನ್‌ಲ್ಯಾಂಡ್‌ನಿಂದ ಅಮ್ಮನನ್ನು ಹುಡುಕುತ್ತ ಭಾರತಕ್ಕೆ ಬರುವ ನಾಯಕಿ, ಇನ್ನೊಂದೆಡೆ ಹೆತ್ತವರನ್ನು ತೊರೆದು ವಿದೇಶಕ್ಕೆ ಹೊರಟು ನಿಂತ ಜೋಡಿ, ಈ ಎರಡು ವೈರುಧ್ಯ ಮನಸ್ಥಿತಿಗಳು ಒಂದು ಪಾಯಿಂಟ್‌ನಲ್ಲಿ ಸಂಧಿಸುತ್ತವೆ. ನಾಯಕಿಯ ಪೋಷಕರಿಗಾಗಿನ ಹುಡುಕಾಟದಲ್ಲಿ ಈ ಜೋಡಿಯೂ ಕೈ ಜೋಡಿಸುತ್ತದೆ.
ಆ ಅಲೆದಾಟದಲ್ಲಿ ಆಕಸ್ಮಿಕವಾಗಿ ಜರುಗುವ ಘಟನೆಗಳು ಕಥೆಗೆ ತಿರುವು ನೀಡುತ್ತವೆ. ಕಥೆಯ ಕೇಂದ್ರ ಅಮ್ಮನ ಹುಡುಕಾಟ, ಸಂಬಂಧಗಳಿಂದಾಚೆಗೆ ಎಜುಕೇಶನ್ ಮಾಫಿಯಾದೆಡೆಗೆ ತಿರುಗುತ್ತದೆ. ಖಾಸಗಿಯವರ ಲಾಬಿಯಲ್ಲಿ ಮುಚ್ಚುತ್ತಿರುವ ಸರ್ಕಾರಿ ಶಾಲೆ. ಖಾಸಗಿ ಶಾಲೆಗಳು ಮಾರ್ಕ್ಸ್, ರ‌್ಯಾಂಕ್‌ಗಳ ಲೆಕ್ಕದಲ್ಲಿ ಮಕ್ಕಳ ಸ್ವತಂತ್ರ ಮನಸ್ಥಿತಿಯನ್ನೇ ಕೊಂದು ಹಾಕುವುದನ್ನು ಚಿತ್ರ ನಿರೂಪಿಸುತ್ತದೆ. ಖಾಸಗಿ ಶಾಲೆಗಳ ಬಾಯಿಪಾಠದ ಕಲಿಕೆ ಬರೀ ಶಿಕ್ಷಣ ಅಷ್ಟೇ, ಅದು ಕಲಿಕೆ ಅಲ್ಲ ಎಂಬುದನ್ನು ಹೇಳುತ್ತಲೇ ನಿಜವಾದ ಕಲಿಕಾ ವಿಧಾನ ಯಾವುದು ಎಂಬುವುದನ್ನು ನಿರೂಪಿಸುವುದು ಸಿನಿಮಾದ ಹೆಚ್ಚುಗಾರಿಕೆ.
ಚಿತ್ರ ಎರಡು ಸಬ್ಜೆಕ್ಟ್‌ಗಳ ಮೇಲೆ ನಿಂತಿರುವುದಕ್ಕೆ ಫೋಕಸ್ ಔಟ್ ಆಗಿರುವುದು ಸ್ಪಷ್ಟ. ಮಕ್ಕಳನ್ನು ಬಳಸಿ ತೆಗೆದಿರುವ ಬಣ್ಣದ ಕನಸಿನ ಹಾಡು, ನಮ್ಮೆಲ್ಲರ ಬಾಲ್ಯವನ್ನು ನೆನಪಿಸಿ ಆರ್ದ್ರ ಭಾವ ಮೂಡಿಸುತ್ತದೆ. ಚಿತ್ರದ ಅಂತ್ಯ ನಾಟಕೀಯವಾಗಿದೆ. ಸಂದೇಶದ ರೂಪದಲ್ಲಿ ಚಿತ್ರವನ್ನು ಮುಕ್ತಾಯಗೊಳಿಸಿದ್ದು ತೀರಾ ಸಾಮಾನ್ಯ ಕೊನೆ ಎನಿಸುತ್ತದೆ. ರಾಧಿಕಾ ಚೇತನ್ ನಟನೆಯಲ್ಲಿ ಸೂಕ್ಷ್ಮತೆ ಇದೆ. ಕಿರಣ್ ರಾಜ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಲಾಸ್ಯ ನಟನೆಯಲ್ಲಿ
ಇನ್ನಷ್ಟು ಪಳಗಬೇಕಿದೆ.ದೀಪಕ್ ಅಭಿನಯ ಚೆನ್ನಾಗಿದೆ. ಪುಟಾಣಿ ಚಿತ್ರಾಲಿ ಎಂದಿನಂತೆ ನಟನೆಯಲ್ಲಿ ಚುರುಕು. ಆದರೆ ಆಕೆಯಿಂದ ಹೇಳಿಸಿದ ಸಂಭಾಷಣೆ ದೊಡ್ಡವರ ಡೈಲಾಗ್‌ನಂತಿದೆ.
ನಿರ್ದೇಶಕ ರಾಜೇಶ್ ವೇಣೂರ್ ಅವರ ಮೊದಲ ಪ್ರಯತ್ನವಿದು. ಹಾಗಾಗಿ ಕೊಂಚ ಗೊಂದಲ, ಬಹಳಷ್ಟನ್ನು ಹೇಳಿ ಮುಗಿಸಬೇಕು ಎನ್ನುವ ಧಾವಂತ ಇರುವುದು ಸಹಜ. ಇಂಥ ಮಿತಿಗಳನ್ನು ದಾಟಿ, ಕೆಲವು ಕ್ಲೀಷೆಗಳನ್ನು ಮೀರಲು ಪ್ರಯತ್ನಿಸಿದರೆ ಅತ್ಯುತ್ತಮ ನಿರ್ದೇಶಕನಾಗುವ ಎಲ್ಲ ಸಾಧ್ಯತೆ ಇವರಿಗಿದೆ.
-ಚಿತ್ರ: ಅಸತೋಮಾ ಸದ್ಗಮಯ ತಾರಾಗಣ: ರಾಧಿಕಾ ಚೇತನ್, ಕಿರಣ್ ರಾಜ್, ಲಾಸ್ಯ, ಬೇಬಿ ಚಿತ್ರಾಲಿ ನಿರ್ದೇಶನ: ರಾಜೇಶ್ ವೇಣೂರು ನಿರ್ಮಾಣ: ಅಶ್ವಿನ್ ಪಿರೇರ ಸಂಗೀತ: ವಹಾಬ್ ಸಲೀಮ್ ಛಾಯಾಗ್ರಹಣ: ಕಿಶೋರ್ ಕುಮಾರ್ ರೇಟಿಂಗ್: ***
-ವಿಮರ್ಶೆ: ಪ್ರಿಯಾ ಕೇರ್ವಾಶೆ