ಐಶಾನಿ ಶೆಟ್ಟಿ ಟೀನೇಜ್ ಪ್ರೇಮಪ್ರಸಂಗ

First Published Jul 6, 2018, 1:27 PM IST
Highlights

ಯೋಗರಾಜ್ ಭಟ್ಟರ ಶಿಷ್ಯ ರವೀನ್ ಸದ್ದಿಲ್ಲದೆ, ಸುದ್ದಿ ಮಾಡದೆ ಸಿನಿಮಾ ನಿರ್ದೇಶಿಸಿ ತೆರೆಗೆ ತರಲು ರೆಡಿ ಆಗಿದ್ದಾರೆ. ಆ ಚಿತ್ರದ ಹೆಸರು ‘ನಡುವೆ ಅಂತರವಿರಲಿ’

ಇದು ಎರಡೂವರೆ ವರ್ಷಗಳ ಹಿಂದೆಯೇ ಶುರುವಾದ ಸಿನಿಮಾ. ಇದೀಗ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿಕೊಂಡು ರಿಲೀಸ್ಗೆ ರೆಡಿ ಆಗಿದೆ. ಬಹುತೇಕ ಆಗಸ್ಟ್ ತಿಂಗಳಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದ್ದು, ಈಗ ಆಡಿಯೋ ಸೀಡಿ ಬಿಡುಗಡೆಯೊಂದಿಗೆ ಸೌಂಡ್ ಮಾಡಿದೆ. ಬೃಂದಾ ಪ್ರೊಡಕ್ಷನ್ ಹೌಸ್ ಸಂಸ್ಥೆಯಡಿ ನಿರ್ದೇಶಕ ರವೀನ್ ಹಾಗೂ ನಾಗರಾಜ್ ನಿರ್ಮಿಸಿ, ತೆರೆಗೆ ತರುತ್ತಿರುವ ಚಿತ್ರವಿದು. ನವ ಪ್ರತಿಭೆ ಪ್ರಖ್ಯಾತ್ ಹಾಗೂ ವಾಸ್ತು ಪ್ರಕಾರ ಖ್ಯಾತಿಯ ನಟಿ ಐಶಾನಿ ಶೆಟ್ಟಿ ಜೋಡಿಯೊಂದಿಗೆ ಈ ಕಾಲದ ಹುಡುಗ-ಹುಡುಗಿಯರಿಗೆ ಇಷ್ಟವಾಗುವಂತೆ ಹದಿಹರೆಯದ ಪ್ರೇಮ ಕತೆಯೊಂದನ್ನು ತೆರೆ ಮೇಲೆ ಹೇಳಲು ಬರುತ್ತಿದ್ದಾರಂತೆ ನಿರ್ದೇಶಕ ರವೀನ್. ಅವರು ಹಾಗಂತ ಹೇಳಿಕೊಂಡಿದ್ದು ಚಿತ್ರದ ಆಡಿಯೋ ಸೀಡಿ ಬಿಡುಗಡೆಯ ದಿನ.

ಗಣ್ಯರು ಹೇಳಿದ್ದಿಷ್ಟು...

ಸಂಸದ ಡಿ.ಕೆ. ಸುರೇಶ್ ಆಡಿಯೋ ಸೀಡಿ ಬಿಡುಗಡೆಗೊಳಿಸಿ ಮಾತನಾಡಿದರು. ‘ಕನ್ನಡ ಚಿತ್ರರಂಗ ಉಳಿಯಬೇಕಾದ್ರೆ ಹೊಸ ಪ್ರಯತ್ನಗಳು ನಡೆಯಬೇಕು. ಅವುಗಳಿಗೆ ಪ್ರೇಕ್ಷಕರ ಸಹಕಾರ ಬೇಕು. ಹೊಸ ಪ್ರತಿಭೆ ಪ್ರಖ್ಯಾತ್ ಕುಮಾರ್ ಭರವಸೆಯ ನಟನಾಗುವ ಎಲ್ಲ ಲಕ್ಷಣಗಳು ಇವೆ’ ಎಂದರು. ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್, ಉದಯ್ ಮೆಹ್ತಾ, ಜಿ.ಟಿ. ಮಾಲ್ ಮಾಲೀಕ ಆನಂದ್ ಚಿತ್ರಕ್ಕೆ ಯಶಸ್ಸು ಸಿಗಲಿ ಅಂದ್ರು. ಡಿ.ಕೆ. ಸುರೇಶ್ ಕಾರ್ಯಕ್ರಮ ಮುಕ್ತಾಯದವರೆಗೂ ಅಲ್ಲಿದ್ದರು. ನಾಯಕ ನಟ ಪ್ರಖ್ಯಾತ್ ಕುಮಾರ್ ಕನಕಪುರ ಮೂಲದವರು. ಹಾಗೆಯೇ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಅನ್ನೋದು ಅದಕ್ಕೆ ಕಾರಣ.

ಹೊಸಬರ ಸಿನಿಮಾ ಅಂತನಿಸಲ್ಲ..

ಆಡಿಯೋ ಸೀಡಿ ಬಿಡುಗಡೆ ಹಾಗೂ ಗಣ್ಯರ ಶುಭ ಹಾರೈಕೆ ನಂತರ ಚಿತ್ರ ತಂಡದ ಮಾತು. ‘ಚಿತ್ರರಂಗಕ್ಕೆ ಕಾಲಿಟ್ಟು ಹತ್ತು ವರ್ಷ. ಇಲ್ಲಿಯ ತನಕ ಸಹಾಯಕ ನಿರ್ದೇಶಕನಾಗಿದ್ದೆ. ಈಗ ಸ್ವತಂತ್ರ ನಿರ್ದೇಶಕ. ಸ್ವಲ್ಪ ಲೇಟಾಯ್ತು. ಹಾಗಂತ ಬೇಸರವಿಲ್ಲ. ಅನುಭವ ಮುಖ್ಯ ಅನ್ನೋದು ನನ್ನ ಥಿಯರಿ. ಅದನ್ನೇ ತಲೆಯಲಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಹೊಸಬರ ಸಿನಿಮಾ ಅಂತೆನಿಸೋದಿಲ್ಲ ಅಂತ ಅನೇಕರು ಹೇಳುತ್ತಿದ್ದಾರೆ. ಖುಷಿ ಆಗುತ್ತಿದೆ. ಕತೆಗೆ ತಕ್ಕಂತೆ ನಾಯಕ-ನಾಯಕಿಯನ್ನು ಆಯ್ಕೆ ಮಾಡಿಕೊಂಡೆ. ನವಿರಾದ ಪ್ರೇಮ ಕತೆ. ಎಲ್ಲರಿಗೂ ಇಷ್ಟವಾಗುತ್ತೆ ಎನ್ನುವ ನಂಬಿಕೆಯಿದೆ’ ಎಂದರು ನಿರ್ದೇಶಕ ರವೀನ್.

ಆನಂತರ ಮಾತಿನ ಸರದಿ ನಾಯಕ ನಟ ಪ್ರಖ್ಯಾತ ಅವರದ್ದು. ಅವರು ನಾಯಕ ಆಗಿದ್ದರ ಕತೆ ಹೇಳಿಕೊಂಡರು. ಅರ್ಧರಾತ್ರಿಯಲ್ಲಿ ಐಶ್ವರ್ಯ ಸಿಕ್ಕಂತಾಯಿತು ಅಂತ ಬಣ್ಣಿಸಿದರು. ನಾಯಕಿ ಐಶಾನಿ ಮಾಸ್ಟರ್ ಡಿಗ್ರಿ ಓದುತ್ತಿದ್ದಾಗಲೇ ಈ ಚಿತ್ರ ಒಪ್ಪಿಕೊಂಡಿದ್ದನ್ನು ಹೇಳಿಕೊಂಡರು. ಹಲವರ ಸಾಥ್ ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ಹಾಗೂ ಗೌಸ್ಪೀರ್ ಸಾಹಿತ್ಯಕ್ಕೆ ಸಂಚಿತ್ ಹೆಗ್ಡೆ, ಸುಪ್ರಿಯಾ ಲೋಹಿತ್ ಸೇರಿದಂತೆ ಅಪ್ಪಟ ಕನ್ನಡ ಗಾಯಕರೇ ಹಾಡಿದ್ದಾರೆ. ಯೋಗಿ ಛಾಯಾಗ್ರಹಣ, ಗಣೇಶ್ ಮಲ್ಲಯ್ಯ ಸಂಕಲನ, ರವಿವರ್ಮ ಸಾಹಸ ಈ ಚಿತ್ರಕ್ಕಿದೆ. ಚಿಕ್ಕಣ್ಣ, ತುಳಸಿ ಶಿವಮಣಿ, ಅರುಣಾ ಬಾಲರಾಜ್, ಮಂಜು ಮಾಂಡವ್ಯ ಹಾಗೂ ಶ್ರೀನಿವಾಸ್ ಪ್ರಭು ಸೇರಿ ಹಲವು ಕಲಾವಿದರು ಪೋಷಕ ಪಾತ್ರಗಳಲ್ಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. 

click me!