
ಸ್ಟಾರ್ ಹೀರೋಯಿನ್ ತ್ರಿಷಾ ಸಿನಿಮಾಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುತ್ತಾರೆ. ತಮ್ಮ ಪರ್ಸನಲ್ ಹಾಗೂ ಪ್ರೊಫೆಷನಲ್ ಲೈಫ್‌ಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಆಗಾಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತ್ರಿಷಾ ವಿಟಮಿನ್ ಡಿಗೆ ಸಂಬಂಧಿಸಿದಂತೆ ಹಂಚಿಕೊಂಡಿರುವ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸೌತ್ ಇಂಡಿಯನ್ ಬ್ಯೂಟಿ ಕ್ವೀನ್ ತ್ರಿಷಾ (43) ಇತ್ತೀಚೆಗೆ ಬೆಳಗಿನ ಹೊತ್ತು ಬಿಸಿಲಿನಲ್ಲಿ ನಿಂತು ಸೂರ್ಯನ ಕಿರಣಗಳನ್ನು ಆನಂದಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ‘ವಿಟಮಿನ್ ಡಿಗಾಗಿ ಕೊಂಚ ಸನ್ ಟೈಮ್’ ಎಂದು ಇಂಟ್ರೆಸ್ಟಿಂಗ್ ಕ್ಯಾಪ್ಷನ್ ಕೂಡ ನೀಡಿದ್ದಾರೆ. ತ್ರಿಷಾ ಅವರ ಈ ಪೋಸ್ಟ್ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.
ತ್ರಿಷಾ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ, 40 ವರ್ಷ ದಾಟಿದ ಬಳಿಕ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳ ಹಿನ್ನೆಲೆಯಲ್ಲಿ ವಿಟಮಿನ್ ಡಿ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
40ರ ಬಳಿಕ ವಿಟಮಿನ್ ಡಿ ಯಾಕೆ ಮುಖ್ಯ?
40 ವರ್ಷ ದಾಟಿದ ನಂತರ ಮೂಳೆಗಳು, ಸ್ನಾಯುಗಳು ಹಾಗೂ ದೇಹದ ಮೆಟಬಾಲಿಸಂನಲ್ಲಿ ನಿಧಾನವಾಗಿ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ದೇಹ ಕ್ಯಾಲ್ಸಿಯಂ ಅನ್ನು ಸರಿಯಾಗಿ ಹೀರಿಕೊಳ್ಳಲು ವಿಟಮಿನ್ ಡಿ ಸಹಾಯ ಮಾಡುತ್ತದೆ. ಮೂಳೆಗಳ ಬಲವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸ್ನಾಯುಗಳ ಕಾರ್ಯನಿರ್ವಹಣೆಯಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ.
ವಯಸ್ಸು ಹೆಚ್ಚಾದಂತೆ ಮೂಳೆ ಸಾಂದ್ರತೆ ಕಡಿಮೆಯಾಗುವುದು ಹಾಗೂ ಸ್ನಾಯುಗಳ ಬಲ ಕುಸಿಯುವುದು ಸಾಮಾನ್ಯ. ಇದರಿಂದ ದೌರ್ಬಲ್ಯ, ಬಿದ್ದು ಗಾಯಗೊಳ್ಳುವ ಸಾಧ್ಯತೆ ಹಾಗೂ ಮೂಳೆ ಮುರಿತದ ಅಪಾಯ ಹೆಚ್ಚಾಗಬಹುದು. ಹೀಗಾಗಿ ದೇಹದಲ್ಲಿ ಸೂಕ್ತ ಮಟ್ಟದ ವಿಟಮಿನ್ ಡಿ ಇರುವಂತೆ ನೋಡಿಕೊಳ್ಳುವುದು ಮುಖ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.
ಬಿಸಿಲಿನಲ್ಲಿ ಕುಳಿತರೆ ಸಾಕಾ?
ಸೂರ್ಯನ ಬೆಳಕು ದೇಹದಲ್ಲಿ ವಿಟಮಿನ್ ಡಿ ಉತ್ಪಾದನೆಗೆ ಸಹಾಯ ಮಾಡುತ್ತದೆ. ಆದರೆ, ಎಲ್ಲರಿಗೂ ಒಂದೇ ಪ್ರಮಾಣದ ಸೂರ್ಯನ ಬೆಳಕು ಸಾಕಾಗುತ್ತದೆ ಎನ್ನಲು ಸಾಧ್ಯವಿಲ್ಲ. ಚರ್ಮದ ವಿಧ, ವಯಸ್ಸು, ಋತುಮಾನ, ಧರಿಸುವ ಬಟ್ಟೆ, ವಾಸಿಸುವ ಪ್ರದೇಶ, ವಾಯುಮಾಲಿನ್ಯ ಹಾಗೂ ಸೂರ್ಯನ ಬೆಳಕಿಗೆ ತೆರೆದುಕೊಳ್ಳುವ ಚರ್ಮದ ಪ್ರಮಾಣ ಸೇರಿದಂತೆ ಹಲವು ಅಂಶಗಳು ದೇಹದಲ್ಲಿ ವಿಟಮಿನ್ ಡಿ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ.
ಹೀಗಾಗಿ ಕೇವಲ ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದಲೇ ದೇಹಕ್ಕೆ ಅಗತ್ಯವಿರುವಷ್ಟು ವಿಟಮಿನ್ ಡಿ ಸಿಗುತ್ತದೆ ಎಂದು ಭಾವಿಸಬಾರದು. ವಿಟಮಿನ್ ಡಿ ಕೊರತೆ ಇದೆ ಎಂಬ ಅನುಮಾನವಿದ್ದರೆ ರಕ್ತ ಪರೀಕ್ಷೆ ಹಾಗೂ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಬಿಸಿಲಿನಿಂದ ದೇಹಕ್ಕೆ ಎಷ್ಟು ವಿಟಮಿನ್ ಡಿ ಸಿಕ್ಕಿದೆ ಎಂಬುದನ್ನು ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ ಎನ್ನುತ್ತಾರೆ ವೈದ್ಯರು.
ವಿಟಮಿನ್ ಡಿ ಕೊರತೆಯ ಲಕ್ಷಣಗಳೇನು?
ವಿಟಮಿನ್ ಡಿ ಕೊರತೆಯಿದ್ದಾಗ ಎಲ್ಲರಲ್ಲೂ ಸ್ಪಷ್ಟವಾದ ಲಕ್ಷಣಗಳು ಕಾಣಿಸಿಕೊಳ್ಳಬೇಕು ಎಂದೇನಿಲ್ಲ. ಕೆಲವರಲ್ಲಿ ಕೊರತೆ ಕಡಿಮೆ ಪ್ರಮಾಣದಲ್ಲಿದ್ದರೆ ದೀರ್ಘಕಾಲ ಯಾವುದೇ ಲಕ್ಷಣಗಳು ಇಲ್ಲದೆಯೂ ಇರಬಹುದು.
ಇನ್ನು ಕೆಲವರಿಗೆ ಸ್ನಾಯು ನೋವು, ಮೂಳೆಗಳಲ್ಲಿ ಅಸ್ವಸ್ಥತೆ, ದೌರ್ಬಲ್ಯ ಅಥವಾ ಸದಾ ಆಯಾಸವಾಗುತ್ತಿರುವ ಅನುಭವ ಕಾಣಿಸಿಕೊಳ್ಳಬಹುದು. ಆದರೆ, ಈ ಲಕ್ಷಣಗಳು ಕೇವಲ ವಿಟಮಿನ್ ಡಿ ಕೊರತೆಯಿಂದಲೇ ಉಂಟಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಬೇರೆ ಆರೋಗ್ಯ ಸಮಸ್ಯೆಗಳಿಂದಲೂ ಇದೇ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಹೀಗಾಗಿ ಸುಸ್ತಾಗಿದೆ ಎಂಬ ಒಂದೇ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಡಿ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ. ದೇಹದ ಮೂಳೆ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಸಾಕಷ್ಟು ಪ್ರೊಟೀನ್ ಸೇವನೆ, ನಿಯಮಿತ ದೈಹಿಕ ಚಟುವಟಿಕೆ ಹಾಗೂ ಸೂಕ್ತ ಪ್ರಮಾಣದ ಸೂರ್ಯನ ಬೆಳಕು ಕೂಡ ಮುಖ್ಯ.
40 ವರ್ಷ ದಾಟಿದ ಪ್ರತಿಯೊಬ್ಬರೂ ವಿಟಮಿನ್ ಡಿ ಸಪ್ಲಿಮೆಂಟ್ ತೆಗೆದುಕೊಳ್ಳಲೇಬೇಕು ಎಂದೇನಿಲ್ಲ. ದೇಹದಲ್ಲಿ ವಿಟಮಿನ್ ಡಿ ಕೊರತೆ ಇದೆ ಎಂದು ಪರೀಕ್ಷೆಯಿಂದ ದೃಢಪಟ್ಟಾಗ ಅಥವಾ ವೈದ್ಯರು ನಿರ್ದಿಷ್ಟ ಅಪಾಯವನ್ನು ಗುರುತಿಸಿದಾಗ ಮಾತ್ರ ಸಪ್ಲಿಮೆಂಟ್‌ಗಳ ಅಗತ್ಯವಿರಬಹುದು ಎಂದು ತಜ್ಞರು ಹೇಳುತ್ತಾರೆ. ಅತಿಯಾದ ಪ್ರಮಾಣದಲ್ಲಿ ವಿಟಮಿನ್ ಡಿ ಸೇವಿಸುವುದರಿಂದಲೂ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಸಹಜವಾಗಿ ಹೆಚ್ಚಾಗುವುದು ಇದರಿಂದ ಉಂಟಾಗಬಹುದಾದ ಸಮಸ್ಯೆಗಳಲ್ಲಿ ಒಂದು.
ಹೀಗಾಗಿ ವಯಸ್ಸು 40 ದಾಟಿದೆ ಎಂಬ ಕಾರಣಕ್ಕೆ ಸ್ವಯಂಪ್ರೇರಿತವಾಗಿ ಸಪ್ಲಿಮೆಂಟ್‌ಗಳನ್ನು ಸೇವಿಸುವ ಬದಲು, ನಿಮ್ಮ ದೇಹಕ್ಕೆ ನಿಜವಾಗಿಯೂ ಏನು ಅಗತ್ಯವಿದೆ ಎಂಬುದನ್ನು ತಿಳಿದುಕೊಂಡು, ವೈದ್ಯರ ಸಲಹೆಯಂತೆ ಮಾತ್ರ ತೆಗೆದುಕೊಳ್ಳುವುದು ಉತ್ತಮ. ಇನ್ನು ತ್ರಿಷಾ ಅವರ ‘ಸನ್ ಟೈಮ್’ ಪೋಸ್ಟ್ ವಿಟಮಿನ್ ಡಿ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ಆದರೆ ಆರೋಗ್ಯದ ವಿಚಾರದಲ್ಲಿ ಯಾವುದೇ ಸಪ್ಲಿಮೆಂಟ್ ಅಥವಾ ಚಿಕಿತ್ಸೆಯನ್ನು ಸ್ವತಃ ನಿರ್ಧರಿಸುವ ಬದಲು ತಜ್ಞರ ಸಲಹೆ ಪಡೆಯುವುದು ಮುಖ್ಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.