ಹರ್ಷಿಕಾ ಪೂಣಚ್ಚಗೆ ಸ್ಯಾಂಡಲ್’ವುಡ್’ನಲ್ಲಿ ದಶಕಗಳ ಸಂಭ್ರಮ

First Published Jun 27, 2018, 1:44 PM IST
Highlights

ಹರ್ಷಿಕಾ ಪೂಣಚ್ಚ ಚಿತ್ರರಂಗಕ್ಕೆ ಬಂದು 10 ವರ್ಷಗಳಾಗುತ್ತಿವೆ. ಇದೇ ಶುಕ್ರವಾರ (ಜೂ.29) ಅವರ ನಟನೆಯ, ಎಂ ಎಲ್ ಪ್ರಸನ್ನ ನಿರ್ದೇಶನದ ‘ಚಿಟ್ಟೆ’ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹರ್ಷಿಕಾ ಜತೆಗಿನ ಮಾತುಗಳು ಇಲ್ಲಿವೆ.

ಚಿಟ್ಟೆಯ ಸಂಭ್ರಮಕ್ಕೇನು ಕಾರಣ?

ಬಣ್ಣದ ಲೋಕಕ್ಕೆ ಕಾಲಿಟ್ಟು 10 ವರ್ಷ. ನಾನು ‘ಪಿಯುಸಿ’ ಹೆಸರಿನ ಸಿನಿಮಾ ಮಾಡಬೇಕಾದರೆ  ಆಗಷ್ಟೆ ನಾನು ಎಸ್‌ಎಸ್‌ಎಲ್‌ಸಿ ಮುಗಿಸಿದ್ದೆ.
 

ಏನಾಗಬೇಕು ಅಂದ್ಕೊಂಡಿದ್ರಿ?
ಇದೇ ಬೇಕು, ಇಂಥದ್ದೇ ಕ್ಷೇತ್ರದಲ್ಲಿ  ಗುರುತಿಸಿಕೊಳ್ಳಬೇಕು ಎನ್ನುವುದಕ್ಕಿಂತ ಎರಡನೇ ಆಯ್ಕೆ ಇಟ್ಟುಕೊಂಡೇ ಬಂದೆ. ಓದುವ ಜತೆಗೆ ಸಿನಿಮಾ, ಸಿನಿಮಾ ಜತೆಗೆ ಖಾಸಗಿ ಕಂಪನಿಯಲ್ಲಿ ಕೆಲಸ, ಸಿನಿಮಾದಲ್ಲಿ ಇದ್ದಾಗಲೇ ಗ್ಲ್ಯಾಮ್ ಗಾಡ್
ಹೆಸರಿನ ಫ್ಯಾಷನ್ ಶೋ ಮ್ಯಾನೇಜ್‌ಮೆಂಟ್... ಹೀಗೆ ಎರಡೆರಡನ್ನೂ ಜತೆಯಲ್ಲಿಟ್ಟುಕೊಂಡೇ ಬಂದೆ.

ಈ ಹತ್ತು ವರ್ಷದ ದಾರಿ ಹೇಗಿತ್ತು?
ನಾಯಕಿ, ಅತಿಥಿ ಪಾತ್ರ ಸೇರಿದಂತೆ ಒಟ್ಟು  25 ಸಿನಿಮಾಗಳಲ್ಲಿ ನಟಿಸಿದ್ದೇನೆ. ಒಬ್ಬ ಸಾಮಾನ್ಯ ಕನ್ನಡದ ಹುಡುಗಿ ಕನ್ನಡ ಜತೆಗೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ  ನಟಿಸಿದೆ. ಸೋಲು- ಗೆಲುವು ಸಮಾನವಾಗಿ ಕಂಡಿದ್ದೇನೆ. ಸಿನಿಮಾ ಸೋತಾಗಲೂ ನನ್ನ ಪಾತ್ರ ಸೋತಿಲ್ಲ. ನನ್ನ ನಟನೆಯಲ್ಲಿ ಕೊರತೆ ಕಾಣಲಿಲ್ಲ ಎಂಬುದು ಸಮಾಧಾನದ ಸಂಗತಿ. ನಟ ಶಿವರಾಜ್‌ಕುಮಾರ್ ಅವರ ಜತೆ ‘ತಮಸ್ಸು’ ಚಿತ್ರದಲ್ಲಿ ನಟಿಸಿದ್ದು ನನಗೆ ಮರೆಯಲಾಗದ ಅನುಭವ.

‘ತಮಸ್ಸು’ ನಂತರ ನಿಮಗೆ ಹೇಳಿಕೊಳ್ಳುವಂತಹ ಅವಕಾಶಗಳು ಬರಲಿಲ್ವಲ್ಲಾ?
ತುಂಬಾ ಬಂದ್ವು. ಆದರೆ, ಬಹುತೇಕ ತಂಗಿ ಪಾತ್ರಗಳೇ ಆಗಿದ್ದವು. ‘ಜಾಕಿ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್, ‘ತಮಸ್ಸು’ ಚಿತ್ರದಲ್ಲಿ ಶಿವಣ್ಣನಿಗೆ ತಂಗಿ ಆದ ಮೇಲೆ ಸಿಸ್ಟರ್ ಎಫೆಕ್ಟ್ ನನ್ನ ಮೇಲೆ ಬಿತ್ತು. ಯಾಕೋ ತಂಗಿ ರೋಲ್‌ಗಳಿಗೆ ನನ್ನ ಖಾಯಂ ಮಾಡುತ್ತಿದ್ದಾರಲ್ಲ ಅನ್ನೋ ಭಯ ಕಾಡುವುದಕ್ಕೆ ಶುರುವಾಯಿತು. ಆಗ ಸಿಸ್ಟರ್ ಸೆಂಟಿಮೆಂಟ್‌ನಿಂದ ತಪ್ಪಿಸಿಕೊಳ್ಳುವುದಕ್ಕೆ ಒಂದಷ್ಟು ತಿಂಗಳು ನಾನು ಸಿನಿಮಾ ಒಪ್ಪಿಕೊಳ್ಳಲಿಲ್ಲ.

ಯಶಸ್ಸು?
ಐಡೆಂಟಿಟಿ ದೊರಕಿದೆ. ಇಂಥ ಸಿನಿಮಾ ನಟಿ ಎನ್ನುವುದಕ್ಕಿಂತ ನಟಿ ಹರ್ಷಿಕಾ ಪೂಣಚ್ಚ ಎಂದರೆ ಎಲ್ಲರಿಗೂ ಗೊತ್ತು ಎನ್ನುವಂತೆ ಛಾಪು ಮೂಡಿಸಿರುವೆ. ಅದೇ ದೊಡ್ಡ ಹೆಮ್ಮೆ ನನಗೆ. 

ಜನಪ್ರಿಯತೆ ಹೇಗಿದೆ?
ಸಾಮಾನ್ಯವಾಗಿ ಸ್ಟಾರ್ ನಟ, ನಟಿಯರು ಬಂದಾಗ ಜನ ಸೇರಿಸಿ ಶಿಳ್ಳೆ, ಚಪ್ಪಾಳೆ ತಟ್ಟಿಸಿಕೊಳ್ಳುವುದು ಕೂಡ ಸಹಜ. ಯಾವುದೇ ಮುನ್ಸೂಚನೆ ಇಲ್ಲದೆ ಹೋದಾಗ ಜನ ಸೇರಿ, ನಾನು ನಿಮ್ಮ ಅಭಿಮಾನಿ ಅಂತ ಬಂದು ಫೋಟೋ
ತೆಗೆಸಿಕೊಳ್ಳುವುದನ್ನು ನೋಡಿದ್ದೇನೆ. ‘ಚಿಟ್ಟೆ’ ಸಿನಿಮಾ ಪ್ರಚಾರಕ್ಕೆ ಹೋದಾಗ ಜನರ ಇಂಥ ಪ್ರೀತಿ ನೋಡಿ ಭಾವುಕಳಾದೆ. ನನ್ನ ನೋಡಿ ‘ನೀನಾದೆ....ನಾ...’ ಹಾಡು ಹಾಡುತ್ತಾರೆ. ಗುರುತಿಸುವುದೇ ನಿಜವಾದ ಗೆಲುವು ಮತ್ತು ಸ್ಟಾರ್ ಪಟ್ಟ .
ಆದರೂ ನಿಮ್ಮನ್ನು ಹುಡುಕಿ ಬಂದ ಸಿನಿಮಾಗಳ ಸಂಖ್ಯೆ ಕಡಿಮೆ ಅಲ್ಲವೇ?
ನಾನು ಹಣಕ್ಕೆ ಮಹತ್ವ ಕೊಡುತ್ತಿಲ್ಲ. ಕತೆ ಇಷ್ಟವಾದರೆ ಮಾತ್ರ ಒಪ್ಪಿಕೊಳ್ಳುತ್ತಿರುವೆ. ಹೀಗಾಗಿ ಒಂಚೂರು ಹಿಂದೆ ಮುಂದೆ ನೋಡಿಕೊಂಡು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವೆ. ಹಾಗೆ ನಾನು ಇತ್ತೀಚೆಗೆ ಏಳೆಂಟು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದೇನೆ. ಹೀಗಾಗಿ ನನ್ನ ಹೆಸರಿನಲ್ಲಿ ನನ್ನ  ನಟನೆಯ ಸಿನಿಮಾಗಳ ಸಂಖ್ಯೆ ದೊಡ್ಡ ಪಟ್ಟಿ ನಿಮಗೆ ಸಿಗಲ್ಲ.

 ‘ಚಿಟ್ಟೆ’ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಗುಟ್ಟೇನು?
ಸಿನಿಮಾ ಅಂತ ಬಂದಾಗ ಯಾವ ಹಂತಕ್ಕೆ ಬೇಕಾದರೂ ಕೆಲಸ ಮಾಡಬಲ್ಲೆ. ಯಾವ ನಟಿಯೂ ಬಸ್ಟ್ಯಾಂಡ್, ಮಾಲ್‌ಗೆ ಒಬ್ಬಳೇ ಹೋಗಿ ಸಿನಿಮಾ ಪ್ರಚಾರ ಮಾಡಿಲ್ಲ. ನಾನು ಮಾಡಿದ್ದೇನೆ. ಹಾಗೆ ಇದ್ದಕ್ಕಿದ್ದಂತೆ ಹೋದಾಗ ಸೇರುವ ಜನರ
ಪ್ರೀತಿಯನ್ನು ಸ್ವತಃ ಕಂಡಿದ್ದೇನೆ. ನನಗೆ ಹಾರರ್ ಸಿನಿಮಾಗಳೆಂದರೆ ಸಿಕ್ಕಾಪಟ್ಟೆ ಭಯ. ಒಬ್ಬಳೇ ಇವತ್ತಿಗೂ ನಾನು ದೆವ್ವದ ಸಿನಿಮಾ ನೋಡಿಲ್ಲ. ಆದರೆ, ಹೆದರಿಕೊಳ್ಳುವ ನಾನೇ ಮೊದಲ ಬಾರಿಗೆ ಹೆದರಿಸುತ್ತಿದ್ದೇನೆ. ಅದೇ ‘ಚಿಟ್ಟೆ’ ವಿಶೇಷತೆ.

ಮುಂದಿನ ಪಯಣದಲ್ಲಿ ಏನೆಲ್ಲ ಅಚ್ಚರಿಗಳಿವೆ?
ದುಲ್ಕರ್ ಸಲ್ಮಾನ್ ಮತ್ತು ಅವರ ಸೋದರ  ತಮಿಳಿನಲ್ಲಿ ನಟಿಸುತ್ತಿರುವ ಚಿತ್ರದಲ್ಲಿ ಇಬ್ಬರು ನಾಯಕಿಯರು. ನಾನು ಅದರಲ್ಲಿ ಒಬ್ಬಳು. ಮಮ್ಮುಟ್ಟಿ ಮಗನ ಚಿತ್ರದ ಮೂಲಕ ತಮಿಳಿಗೆ ಹೋಗುತ್ತಿರುವೆ. ಮಲಯಾಳಂನ ‘ತಾಜ್‌ಮಹಲ್’
ಚಿತ್ರದ ನಂತರ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ.  

-ಆರ್. ಕೇಶವಮೂರ್ತಿ 

click me!