
ಬೆಂಗಳೂರು: ಕಿರುತೆರೆ ನಟಿ, ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ ಅಶ್ವಿನಿ ಗೌಡ, ತಮ್ಮ ವಿರುದ್ಧ ಟ್ರೋಲ್ ಹೆಸರಿನಲ್ಲಿ ನಡೆಯುತ್ತಿರುವ ಅವಹೇಳನಕಾರಿ ವಿಡಿಯೋ, ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಬಗ್ಗೆ ಸತ್ಯಾಸತ್ಯತೆ ತಿಳಿಯದೆ ಪ್ರಸಾರವಾದ ವಿಡಿಯೋಗಳು, ಸಂದರ್ಶನಗಳು, ಟ್ರೋಲ್‌ಗಳು, ಫೋಟೋಗಳು ಹಾಗೂ ವೈಯಕ್ತಿಕ ವಿಚಾರಗಳು ನನ್ನನ್ನು ಮಾತ್ರವಲ್ಲ, ನನ್ನ ತಾಯಿ ಮತ್ತು ಮಗನನ್ನೂ ನೋಯಿಸಿವೆ. ನನ್ನ ಹೆಸರು, ಇಮೇಜ್, ಫೋಟೋ ಹಾಗೂ ನನ್ನ ಕುಟುಂಬದ ಹೆಸರು, ಫೋಟೋ–ವಿಡಿಯೋಗಳನ್ನು ಬಳಸುವುದರ ವಿರುದ್ಧ ನಾನು ಈಗಾಗಲೇ Defamation Suit ದಾಖಲಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ನನ್ನ ಬಗ್ಗೆ ಈಗಾಗಲೇ ಪ್ರಕಟಿಸಿರುವ ವಿಷಯಗಳನ್ನೂ ತೆಗೆದುಹಾಕಬೇಕು, ಮುಂದೆಯೂ ಯಾವುದೇ ರೀತಿಯಲ್ಲಿ ಬಳಸಬಾರದು ಎಂದು ನ್ಯಾಯಾಲಯದ ಆದೇಶವಿದೆ. ಆದ್ದರಿಂದ ನ್ಯಾಯಾಲಯದ ಆದೇಶವನ್ನು ಗೌರವಿಸಿ ಎಲ್ಲ ಸಂಬಂಧಿತ ವಿಷಯಗಳನ್ನು ತಕ್ಷಣವೇ ಡಿಲೀಟ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನಾನು ಒಬ್ಬ ತಾಯಿ. ನನ್ನ ಮಗನ ಭವಿಷ್ಯ ನನ್ನ ಮೊದಲ ಆದ್ಯತೆ. ನಾನು ಒಬ್ಬ ಮಗಳು, ನನ್ನ ತಾಯಿಯ ಮನಸ್ಸಿಗೆ ನೋವಾಗುವುದು ನನಗೆ ದೊಡ್ಡ ನೋವು. ನನ್ನ ತಂದೆ ಕಲಿಸಿಕೊಟ್ಟ ದಾರಿಯಲ್ಲಿ, ಅವರ ಆಶೀರ್ವಾದದೊಂದಿಗೆ ನಾನು ನಡೆಯುತ್ತಿದ್ದೇನೆ. ಭಯದಿಂದ ನಾನು ಮೌನವಾಗಿಲ್ಲ, ಕುಟುಂಬಕ್ಕಾಗಿ ಮೌನವಾಗಿದ್ದೇನೆ
ಇದು ನನ್ನ ಕುಟುಂಬಕ್ಕಾಗಿ ನಾನು ತೆಗೆದುಕೊಂಡ ನಿರ್ಧಾರ. ನಾನು ಒಬ್ಬ ಕಲಾವಿದೆ. ಒಬ್ಬ ಮಗನ ತಾಯಿ. ಒಬ್ಬ ಗೃಹಿಣಿ. ಕಳೆದ ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ವಿವಿಧ ಭಾಷೆಗಳಲ್ಲಿ ಅಭಿನಯಿಸುತ್ತಾ, ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಸಂಪಾದಿಸಿಕೊಂಡು ಬಂದಿದ್ದೇನೆ. ನನ್ನ ಇಪ್ಪತ್ತು ವರ್ಷಗಳ ಕಲಾ ಪಯಣ ನನ್ನನ್ನು ಬಿಗ್ ಬಾಸ್ ಮನೆವರೆಗೂ ಕರೆದುಕೊಂಡು ಹೋಯಿತು.
ಬಿಗ್ ಬಾಸ್ ಮನೆ ನನಗೆ ಕೇವಲ ಒಂದು ಕಾರ್ಯಕ್ರಮವಾಗಿರಲಿಲ್ಲ. ಅದು ಒಂದು ಅನುಭವ. ಒಂದು ಪರೀಕ್ಷೆ ಮತ್ತು ಒಂದು ಜೀವನದ ಪಾಠ. ಆ ಮನೆಯೊಳಗಿನ ನನ್ನ ನಡೆ-ನುಡಿಗಳನ್ನು ಕೆಲವರು ವಿಮರ್ಶಿಸಿದರು. ಕೆಲವರು ಪ್ರೋತ್ಸಾಹಿಸಿದರು, ಕೆಲವರು ಕಾಲೆಳೆದರು, ಕೆಲವರು ಒಪ್ಪಿಕೊಂಡರು. ಮತ್ತೆ ಕೆಲವರ ಮಾತುಗಳು ನನ್ನ ಮನಸ್ಸಿಗೆ ನೋವುಂಟು ಮಾಡಿದವು. ಆದರೆ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ನನ್ನ ವೈಯಕ್ತಿಕ ಜೀವನ, ನನ್ನ ಕುಟುಂಬ, ನನ್ನ ವೈವಾಹಿಕ ಬದುಕಿನ ಬಗ್ಗೆ ನಮಗೆ ಗೊತ್ತಿಲ್ಲದೆ, ಸತ್ಯಾಸತ್ಯತೆ ಪರಿಶೀಲಿಸದೆ, ಹಳೆಯ ವೀಡಿಯೋಗಳನ್ನು ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಅವಮಾನಿಸುವುದು, ತೇಜೋವಧೆ ಮಾಡುವುದು ಇವೆಲ್ಲವೂ ನನ್ನ ಮಾನಸಿಕವಾಗಿ, ಕುಟುಂಬದವರೂ ಭಾರೀ ನೋವುಂಟು ಮಾಡಿದೆ.
ಒಬ್ಬ ಹೆಣ್ಣಿನ ಮೇಲೆ ನಡೆಯುವ ಇಂತಹ ಮಾತುಗಳು ಕೇವಲ ಆ ಹೆಣ್ಣಿಗೆಲ್ಲ, ಅವಳ ಕುಟುಂಬಕ್ಕೂ, ಅವಳ ಮಗುವಿನ ಮನಸ್ಸಿಗೂ ಗಾಯ ಮಾಡುತ್ತವೆ. ನನ್ನ ಬಗ್ಗೆ ನಿಮಗೆ ಎಲ್ಲವೂ ಗೊತ್ತಿಲ್ಲ, ನನ್ನ ಕುಟುಂಬದ ಬಗ್ಗೆ ಗೊತ್ತಿಲ್ಲ. ನನ್ನ ವೈವಾಹಿಕ ಬದುಕಿನ ಸಂಪೂರ್ಣ ಸತ್ಯ ನಿಮಗೆ ಗೊತ್ತಿಲ್ಲ. ಹಾಗಿರುವಾಗ, ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಹಳೆಯ ವೀಡಿಯೋಗಳನ್ನು ಹಂಚಿಕೊಳ್ಳುವುದು ಯಾರಿಗೂ ಹಕ್ಕಿಲ್ಲ.
ಕಾನೂನು ಕ್ರಮದ ಎಚ್ಚರಿಕೆ
ನಾನು ಈಗಾಗಲೇ ಮಾನಹಾನಿ (Defamation) ಪ್ರಕರಣ ದಾಖಲಿಸಿದ್ದೇನೆ. ಹಾಗೇ ತಡೆಯಾಜ್ಞೆ (Injunction Order) ಸಹ ಪಡೆದಿದ್ದೇನೆ. ಮುಂದೆಯೂ ನನ್ನ ಬಗ್ಗೆ ಅಥವಾ ನನ್ನ ಕುಟುಂಬದ ಬಗ್ಗೆ ಆಧಾರರಹಿತ ಆರೋಪಗಳು, ಮಾನಹಾನಿಕರ ವಿಷಯಗಳು, ಹಳೆಯ ವೀಡಿಯೋಗಳನ್ನು ತಿರುಚಿ ಅಥವಾ ಸಂದರ್ಭದಿಂದ
ಬೇರ್ಪಡಿಸಿ ಪ್ರಸಾರ ಮಾಡುವಂತಹ ಕೃತ್ಯಗಳು ಮುಂದುವರಿದರೆ ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಇದು ಯಾರನ್ನೂ ಬೆದರಿಸುವ ಮಾತಲ್ಲ. ನನ್ನ ಗೌರವವನ್ನು, ನನ್ನ ಕುಟುಂಬದ ಗೌರವವನ್ನು ಮತ್ತು ನನ್ನ ಮಗನ ಭವಿಷ್ಯವನ್ನು ಕಾಪಾಡಿಕೊಳ್ಳಲು ನಾನು ತೆಗೆದುಕೊಂಡಿರುವ ಕಾನೂನುಬದ್ಧ ಹೆಜ್ಜೆ.
STOP
ದಯವಿಟ್ಟು ಯಾವುದೇ ಅವಹೇಳನಕಾರಿ, ಮಾನಹಾನಿಕರ ವೀಡಿಯೋ, ಫೋಟೋಗಳನ್ನು ಹಂಚಿಕೊಳ್ಳಬೇಡಿ. ಒಬ್ಬ ಹೆಣ್ಣಿನ ವೈಯಕ್ತಿಕ ಬದುಕನ್ನು ಗೌರವಿಸಿ. ಒಬ್ಬ ತಾಯಿಯ ನೋವನ್ನು ಅರ್ಥಮಾಡಿಕೊಳ್ಳಿ. ಒಬ್ಬ ಮಗುವಿನ ಭವಿಷ್ಯವನ್ನು ಗೌರವಿಸಿ. ಒಂದು ಕುಟುಂಬದ ಗೌರವವನ್ನು ಗೌರವಿಸಿ.
Respect Women
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.