ಬಂಗಾಳಕ್ಕೆ ಬಿತ್ತು ಚುನಾವಣಾ ಆಯೋಗದಿಂದ ಬ್ರೇಕ್

By Web DeskFirst Published May 16, 2019, 12:54 PM IST
Highlights

ಇನ್ನೊಂದು ಹಂತದ ಲೋಕಸಭಾ ಚುನಾವಣೆಯಷ್ಟೇ ಬಾಕಿ ಉಳಿದಿದೆ. ಫಲಿತಾಂಶಕ್ಕೂ ಕೂಡ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಬಂಗಾಳಕ್ಕೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.

ನವದೆಹಲಿ: ಲೋಕಸಭೆಗೆ ನಡೆದ 6 ಹಂತದ ಚುನಾವಣೆ ವೇಳೆ ಬಂಗಾಳದಲ್ಲಿ ನಡೆದ ಹಿಂಸಾಚಾರ ಮತ್ತು ಮಂಗಳವಾರ ಅಮಿತ್‌ ಶಾ ರೋಡ್‌ ಶೋ ವೇಳೆ ನಡೆದ ಹಿಂಸಾಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ, ಮೇ 19ರಂದು ರಾಜ್ಯದಲ್ಲಿ ನಡೆಯಲಿರುವ 7ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇದ್ದ ಅವಧಿಯನ್ನು ಒಂದು ದಿನ ಕಡಿತಗೊಳಿಸಿದೆ.

ಸಂವಿಧಾನದ 324ನೇ ವಿಧಿಯನ್ನು ಬಳಸಿ ಚುನಾವಣಾ ಪ್ರಚಾರದ ಅವಧಿಯನ್ನು ಒಂದು ದಿನ ಕಡಿತ ಮಾಡಿದ್ದು, ದೇಶದ ಚುನಾವಣಾ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ.

ಚುನಾವಣಾ ಆಯೋಗದ ಈ ನಿರ್ಧಾರದ ಅನ್ವಯ ಗುರುವಾರ ರಾತ್ರಿ 10 ಗಂಟೆ ಬಳಿಕ ಯಾವುದೇ ರಾಜಕೀಯ ಪಕ್ಷಗಳು ಬಹಿರಂಗ ಸಭೆ ಅಥವಾ ಪ್ರಚಾರ ನಡೆಸುವಂತಿಲ್ಲ. ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯನ್ನದ್ದೇಶಿಸಿ ಮಾತನಾಡಿದ ಉಪ ಚುನಾವಣಾ ಆಯುಕ್ತ ಚಂದ್ರ ಭೂಷಣ್‌ ಕುಮಾರ್‌ ಅವರು, ‘ಭಾರೀ ಹಿಂಸಾಚಾರ ಹಿನ್ನೆಲೆ, ಸಾಂವಿಧಾನಿಕ ಅಧಿಕಾರಗಳನ್ನು ಬಳಸಿ, ಇದೇ ಮೊದಲ ಬಾರಿಗೆ ಒಂದು ದಿನ ಮುಂಚಿತವಾಗಿಯೇ ಚುನಾವಣಾ ಪ್ರಚಾರಕ್ಕೆ ಬ್ರೇಕ್‌ ಹಾಕಲಾಗಿದೆ. ಅಲ್ಲದೆ, ಗೃಹ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಅತ್ರಿ ಭಟ್ಟಾಚಾರ್ಯ ಹಾಗೂ ಹೆಚ್ಚುವರಿ ಪ್ರಧಾನ ನಿರ್ದೇಶಕ, ಸಿಐಡಿ ರಾಜೀವ್‌ ಕುಮಾರ್‌ ಅವರನ್ನು ತೆಗೆದುಹಾಕುವಂತೆಯೂ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಮಂಗಳವಾರ ಕೋಲ್ಕತಾದಲ್ಲಿ ಭಾರೀ ಹಿಂಸಾಚಾರ ನಡೆದಿದ್ದರೂ, ಚುನಾವಣಾ ಆಯೋಗ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ಅಮಿತ್‌ ಶಾ ಬುಧವಾರ ಬೆಳಗ್ಗೆ ಕಿಡಿಕಾರಿದ್ದರು.

click me!