
ಉಡುಪಿ[ಏ.11]: ಕಳೆದ ಡಿಸೆಂಬರ್‌ನಲ್ಲಿ ಅರಬ್ಬಿ ಸಮುದ್ರದ ಮಧ್ಯೆ ಕಾಣೆಯಾದ ಮೀನುಗಾರರು ಉತ್ತರ ಕನ್ನಡದ ಸಂಸದ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮತದಾರರೇ ಹೊರತು ನನ್ನ ಮತದಾರರಲ್ಲ ಎಂದು ರಾಜ್ಯ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅನಂತ ಕುಮಾರ್ ಅವರಿಗೆ ತಮ್ಮ ಮತದಾರರ ಬಗ್ಗೆ ಜವಾಬ್ದಾರಿಯೇ ಇಲ್ಲ. ಅವರು ಇದುವರೆಗೆ ಒಮ್ಮೆಯೂ ಕಾಣೆಯಾದ ಮೀನುಗಾರರ ಮನೆಗೆ ಹೋಗಿಲ್ಲ. ಅವರನ್ನು ಹುಡುಕುವುದಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿಲ್ಲ. ಪರಿಹಾರ ಕೊಡಿಸಿಲ್ಲ ಎಂದು ದೂರಿದರು. ಕಾಣೆಯಾದ ಮಲ್ಪೆಯ ಇಬ್ಬರು ಮತ್ತು ಉತ್ತರ ಕನ್ನಡ ಜಿಲ್ಲೆಯ ಐವರು ಮೀನುಗಾರರ ಮನೆಗಳಿಗೆ ಘಟನೆ ನಡೆದ ತಕ್ಷಣ ಹೋಗಿದ್ದೇವೆ. ಗೃಹಸಚಿವರು ಹೋಗಿದ್ದಾರೆ. ಉಸ್ತುವಾರಿ ಸಚಿವರು ಹೋಗಿದ್ದಾರೆ. ಹಾಗಾಗಿ ಸಿಎಂ ಹೋಗಿಲ್ಲ ಎನ್ನುವ ಪ್ರಶ್ನೆಯೆ ಅಪ್ರಸ್ತುತ. ಸಿಎಂ ಮೀನುಗಾರರ ಮನೆಗೆ ಹೋಗಿ ಅವರೇ ಸ್ವತಃ ಮೀನುಗಾರರನ್ನು ಹುಡುಕುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಉಡುಪಿ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು, ಮೀನುಗಾರರು ಕಾಣೆಯಾಗುವುದಕ್ಕೆ ನೌಕಾಪಡೆಯ ಹಡಗಿನ ಹಿಟ್ ಆ್ಯಂಡ್ ರನ್ ಘಟನೆಯೇ ಕಾರಣ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಾಡಗೌಡ, ರಾಜ್ಯ ಸರ್ಕಾರದ ಬಳಿ ಇಂತಹ ಯಾವುದೇ ಮಾಹಿತಿ ಇಲ್ಲ. ಪ್ರಮೋದ್ ಅವರು ಸ್ಥಳೀಯರು, ಅವರಿಗೇನಾದರೂ ಮಾಹಿತಿ ಇದ್ದಿರಬಹುದು. ಆದರೆ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ ಎಂದರು.