ಕೈಗೆ ಭಾರೀ ಹೊಡೆತ: ಪಕ್ಷಕ್ಕೆ ಪ್ರಮುಖ ನಾಯಕ ಗುಡ್ ಬೈ!

By Web DeskFirst Published Apr 11, 2019, 8:31 AM IST
Highlights

ಗುಜರಾತ್‌ ಕಾಂಗ್ರೆಸ್‌ಗೆ ಶಾಕ್‌: ಅಲ್ಪೇಶ್‌ ಠಾಕೂರ್‌ ರಾಜೀನಾಮೆ| ಲೋಕಸಭೆ ಟಿಕೆಟ್‌ ನಿರಾಕರಣೆ ಆಗಿದ್ದಕ್ಕೆ ಠಾಕೂರ್‌ ಆಕ್ರೋಶ| ಕಾಂಗ್ರೆಸ್‌ ಮೋಸ ಮಾಡಿದೆ ಎಂದು ಆರೋಪಿಸಿ ತ್ಯಾಗಪತ್ರ| ಬಿಜೆಪಿ ಸೇರುವ ಸಾಧ್ಯತೆ

ಅಹಮದಾಬಾದ್‌[ಏ.11]: ಗುಜರಾತ್‌ ಕಾಂಗ್ರೆಸ್‌ಗೆ ಬುಧವಾರ ದೊಡ್ಡ ಹೊಡೆತ ಬಿದ್ದಿದ್ದು, ಬಲಿಷ್ಠ ಠಾಕೂರ್‌ ಸಮುದಾಯದ ಮುಖಂಡ, ಯುವ ಶಾಸಕ ಅಲ್ಪೇಶ್‌ ಠಾಕೂರ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಾವು ಇಷ್ಟುದಿನ ವಿರೋಧಿಸಿಕೊಂಡು ಬಂದಿದ್ದ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಠಾಕೂರ್‌ ಸಮುದಾಯದ ಪರ ಮೀಸಲು ಹೋರಾಟ ನಡೆಸಿ ಪ್ರವರ್ಧಮಾನಕ್ಕೆ ಬಂದಿದ್ದ ಅಲ್ಪೇಶ್‌, ಚುನಾವಣೆಗೂ ಮುನ್ನ ಕಾಂಗ್ರೆಸ್‌ ಸೇರಿ ಶಾಸಕರಾಗಿದ್ದರು. ಈ ಮೂಲಕ ಪಕ್ಷವು ಬಿಜೆಪಿ ಎದುರು ಸೋಲು ಅನುಭವಿಸಿದ್ದರೂ, ಉತ್ತಮ ಸ್ಥಾನಗಳನ್ನು ಪಡೆದು ಮೋದಿ-ಶಾ ಜೋಡಿಗೆ ಬೆವರಿಳಿಸುವಲ್ಲಿ ಯಶಸ್ವಿಯಾಗಿತ್ತು.

ಆದರೆ ಲೋಕಸಭೆ ಚುನಾವಣೆಗೂ ನಿಲ್ಲುವ ಇರಾದೆ ಹೊಂದಿದ್ದ ಅಲ್ಪೇಶ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿ ಪಟಾನ್‌ ಕ್ಷೇತ್ರದಿಂದ ಮಾಜಿ ಸಂಸದ ಜಗದೀಶ್‌ ಠಾಕೂರ್‌ ಅವರಿಗೆ ಟಿಕೆಟ್‌ ನೀಡಿತ್ತು. ಇದಲ್ಲದೆ, ಅಲ್ಪೇಶ್‌ ಅವರ ಕೆಲವು ಆಪ್ತರಿಗೂ ಟಿಕೆಟ್‌ ನಿರಾಕರಿಸಿತ್ತು. ಇದು ರಾಧಾಪುರ ಶಾಸಕರಾಗಿರುವ ಅಲ್ಪೇಶ್‌ಗೆ ಸಿಟ್ಟು ತರಿಸಿತ್ತು.

ಈ ನಡುವೆ, ಮಂಗಳವಾರ ‘ಕ್ಷತ್ರಿಯ ಠಾಕೂರ್‌ ಸೇನಾ ಸಂಘಟನೆ’ಯು ಅಲ್ಪೇಶ್‌ಗೆ ಕಾಂಗ್ರೆಸ್‌ ಬಿಡಲು 24 ತಾಸಿನ ಗಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಮಿತ್‌ ಚಾವ್ಡಾ ಅವರಿಗೆ ರಾಜೀನಾಮೆ ಪತ್ರ ಬರೆದಿರುವ ಠಾಕೂರ್‌, ‘ಕಾಂಗ್ರೆಸ್‌ ಪಕ್ಷವು ನನಗೆ ಮೋಸ ಮಾಡಿದೆ’ ಎಂದು ಆರೋಪಿಸಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!