ಅನಂತ್‌ ಮನೆಯಲ್ಲೇ ಆಡಿ ಬೆಳೆದ ಹುಡುಗ ತೇಜಸ್ವಿ!

By Web DeskFirst Published Mar 27, 2019, 8:13 AM IST
Highlights

ಅನಂತ್‌ ಮನೆಯಲ್ಲೇ ಆಡಿ ಬೆಳೆದ ಹುಡುಗ| ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅಣ್ಣನ ಮಗ ತೇಜಸ್ವಿ ಸೂರ್ಯ

ಬೆಂಗಳೂರು[ಮಾ.27]: ರಾಜಧಾನಿ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಮಲದ ಅಭೇದ್ಯ ಕೋಟೆಯಲ್ಲಿ ನಡುರಾತ್ರಿ ದಿಢೀರನೇ ಉದಯಿಸಿದ ‘ಸೂರ್ಯ’ ಈಗ ರಾಜ್ಯ ಹಾಗೂ ದೇಶ ರಾಜಕಾರಣದಲ್ಲಿ ಬಹುಚರ್ಚಿತ ವ್ಯಕ್ತಿಯಾಗಿದ್ದಾರೆ.

ವಕೀಲ, ವಾಗ್ಮಿ ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೀಗೆ ಸಮಾಜದ ಸೀಮಿತ ವಲಯದಲ್ಲಿ ಅಲ್ಪಮಟ್ಟಿಗೆ ಹೆಸರು ವಾಸಿಯಾಗಿದ್ದ 28ರ ಕುಡಿ ಮೀಸೆ ಯುವಕ ತೇಜಸ್ವಿ ಸೂರ್ಯ ಅವರು, ಹಿರಿಯ ನೇತಾರರಿಗೆ ಟಕ್ಕರ್‌ ಕೊಟ್ಟು ಕೇಂದ್ರ ಸಚಿವ ದಿ.ಅನಂತಕುಮಾರ್‌ ಅವರ ಉತ್ತರಾಧಿಕಾರತ್ವ ಪಡೆದು ನಾಗರಿಕರಲ್ಲಿ ಹುಬ್ಬೇರಿಸಿದ್ದಾರೆ. ಅವರ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಆಸಕ್ತ ಮೂಡಿದೆ. ಹೀಗಾಗಿ ತೇಜಸ್ವಿ ಸೂರ್ಯ ಅವರ ಕಿರುಪರಿಚಯ ಹೀಗಿದೆ.

ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಹ್ಮಣ್ಯ ಅವರ ಅಣ್ಣನ ಮಗ ತೇಜಸ್ವಿ ಸೂರ್ಯ. ಹೀಗಾಗಿ ಬಾಲ್ಯದಿಂದಲೇ ಕಮಲದ ನಂಟು ಬೆಸೆಯಿತು. ದಿ.ಅನಂತ್‌ ಕುಮಾರ್‌ ಅವರ ಮನೆಯಂಗಳದಲ್ಲಿ ಆಡಿ ಬೆಳೆದ ಸೂರ್ಯ, ಅತ್ಯಂತ ಕಿರಿಯ ವಯಸ್ಸಿನಲ್ಲೇ ಬಿಜೆಪಿ ಸಂಘಟನೆಯಲ್ಲಿ ಮಹತ್ವದ ಹುದ್ದೆ ಪಡೆದರು. ಅವರು ಹೈಕೋರ್ಟ್‌ನ ವಕೀಲರಾಗಿದ್ದಾರೆ. ನ್ಯಾಯಾಲಯದಲ್ಲಿ ರೈತರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ದನಿ ಎತ್ತಿದ್ದಾರೆ. ಅದರಲ್ಲೂ ಬೆಂಗಳೂರು ಮೇಯರ್‌ ವಿಷಯವಾಗಿ ಬಿಜೆಪಿ ನಡೆಸಿದ್ದ ಕಾನೂನು ಹೋರಾಟದ ವೇಳೆ ಪಕ್ಷದ ವಕೀಲರ ತಂಡದಲ್ಲಿದ್ದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಪರವಾಗಿ ಅವರು ವಕಾಲತ್ತು ನಡೆಸಿದ್ದಾರೆ.

ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಆನ್‌ಲೈನ್‌ ಪತ್ರಿಕೆಗಳಲ್ಲಿ ಅವರು ಅಂಕಣಕಾರರಾಗಿ ತಮ್ಮ ಬರಹಗಳ ಮೂಲಕ ಜನರಿಗೆ ವಿಚಾರಾಧಾರೆ ಪಸರಿಸಿದ್ದಾರೆ. ಉತ್ತಮ ವಾಗ್ಮಿಯಾಗಿರುವ ಅವರು, ಹಲವು ವಿಶ್ವವಿದ್ಯಾಲಯ ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಭಾರತೀಯ ನಾಗರೀಕತೆ, ರಾಜಕೀಯ, ಇತಿಹಾಸ ಹಾಗೂ ಆರ್ಥಿಕ ನೀತಿಗಳ ಕುರಿತು ಉಪನ್ಯಾಸ ನೀಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪರವಾಗಿ ದೇಶ ವ್ಯಾಪ್ತಿ ಪ್ರಚಾರ ನಡೆಸಿದ್ದರು. 2010ರಲ್ಲಿ ಕಪ್ಪು ಹಣದ ವಿರುದ್ಧ ಹಿರಿಯ ಬಿಜೆಪಿ ನೇತಾರ ಲಾಲ್‌ ಕೃಷ್ಣ ಆಡ್ವಾಣಿ ಅವರು ಹಮ್ಮಿಕೊಂಡಿದ್ದ 40 ದಿನಗಳ ಜನ ಚೇತನಾ ಯಾತ್ರೆಯಲ್ಲೂ ಹೆಜ್ಜೆ ಹಾಕಿದ್ದರು. ಅಂದು ಆಡ್ವಾಣಿ ಭಾಷಣ ಸಿದ್ಧಪಡಿಸುವಲ್ಲಿ ನೆರವಾಗಿದ್ದರು.

ಅತ್ಯಂತ ಕಿರಿಯ ವಯಸ್ಸಿನಲ್ಲೇ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆ ಅವರ ಹೆಗಲಿಗೆ ಬಿತ್ತು. ಇದನ್ನು ಸಮರ್ಥ ನಿಭಾಯಿಸಿದ ತೇಜಸ್ವಿ, ನೂರಾರು ಯುವಕರಿಗೆ ಉತ್ತೇಜಿಸಿ ಪಕ್ಷದ ಸಂಘಟನೆಯಲ್ಲಿ ಬಳಸಿಕೊಂಡಿದ್ದಾರೆ. ಟಿವಿ ಚರ್ಚೆಗಳಲ್ಲಿ ಭಾಗವಹಿಸಿ ಪಕ್ಷದ ನಿಲುವನ್ನು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಡಿಜಿಟಲ್‌ ಪ್ರಚಾರದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದರು.

ಸರ್ಕಾರೇತರ ಸಂಸ್ಥೆಯಾದ ಸೆಂಟರ್‌ ಫಾರ್‌ ಎಂಟರ್‌ಪೆನ್ಯುರಿಯಲ್‌ ಎಕ್ಸೆಲೆನ್ಸ್‌ (ಸಿಇಇ) ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದಾರೆ. ಈ ಸಂಸ್ಥೆಯ ಮೂಲಕ ಯುವಕರಿಗೆ ವೃತ್ತಿ ಕೌಶಲ್ಯ ತರಬೇತಿ ನೀಡುತ್ತಿದ್ದಾರೆ. 2017ರಲ್ಲಿ ಬ್ರಿಟಿಷ್‌, ಇಸ್ರೇಲ್‌ ಹಾಗೂ ರಷ್ಯಾ ದೇಶಗಳ ರಾಯಭಾರಿ ಕಚೇರಿ ಆಹ್ವಾನದ ಮೇರೆಗೆ ಆ ದೇಶಗಳಿಗೆ ಭೇಟಿ ನೀಡಿದ್ದ ಯುವ ರಾಜಕೀಯ ನಾಯಕರ ನಿಯೋಗದ ತೇಜಸ್ವಿ ಸದಸ್ಯರಾಗಿದ್ದರು. ಹೀಗೆ ಬಹುಮುಖ ಪ್ರತಿಭೆಯಾಗಿ ತೇಜಸ್ವಿ ಸೂರ್ಯ ಅವರು, ಲೋಕಸಭಾ ಅಖಾಡಕ್ಕಿಳಿಯುವ ಮೂಲಕ ಚುನಾವಣಾ ರಾಜಕೀಯಕ್ಕೆ ಪ್ರವೇಶ ಪಡೆದಿದ್ದಾರೆ.

click me!