ಸಂಸದ ಡಿ.ಕೆ. ಸುರೇಶ್‌ ಆಸ್ತಿ ವಿವರ ಬಹಿರಂಗ: 5 ವರ್ಷದಲ್ಲಿ ಮಾಡಿದ್ದೆಷ್ಟು ಗೊತ್ತಾ?

By Web DeskFirst Published Mar 27, 2019, 7:56 AM IST
Highlights

ಬೆಂಗಳೂರು ಗ್ರಾಂತರ ಲೋಕಸಭಾ ಕ್ಷೇತ್ರದಿಂದ ಸಂಸದ ಡಿ. ಕೆ. ಸುರೇಶ್ ನಾಮಪತ್ರ ಸಲ್ಲಿಕೆ| 2014ರಲ್ಲಿ ಅವರು 85.87 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದ ಡಿಕೆಸು ಆಸ್ತಿಯಲ್ಲಿ ಹೆಚ್ಚಾಗಿದ್ದೆಷ್ಟು? ಇಲ್ಲಿದೆ ಡಿಕೆ ಶಿವಕುಮಾತರ್ ಸಹೋದರನ ಆಸ್ತಿ ವಿವರ

ರಾಮನಗರ[ಮಾ.27]: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿರುವ ಸಂಸದ ಡಿ.ಕೆ.ಸುರೇಶ್‌ .338 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. 2014ರಲ್ಲಿ ಅವರು 85.87 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದರು. ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿಯು 252 ಕೋಟಿ ರು.ಗಳಷ್ಟುಹೆಚ್ಚಾಗಿದ್ದು, ಒಟ್ಟಾರೆ ಮೌಲ್ಯವು ನಾಲ್ಕು ಪಟ್ಟು ವೃದ್ಧಿಸಿದೆ.

ಈಗ ಅವರ ಆಸ್ತಿ ಮೌಲ್ಯ ಬರೊಬ್ಬರಿ 338,65,85,135 ಆಗಿದೆ. ಇದರಲ್ಲಿ ಚರಾಸ್ತಿ .33,06,68,208 ಹಾಗೂ ಸ್ಥಿರಾಸ್ತಿಯು 305,59,16,927 ಆಗಿದೆ. ಈ ಪೈಕಿ ಸ್ವಯಾರ್ಜಿತ ಆಸ್ತಿಯ ಮಾರುಕಟ್ಟೆಯ ಮೌಲ್ಯ 1,98,40,22,505 ಆಗಿದೆ. ಪಿತ್ರಾರ್ಜಿತವಾಗಿ ಬಂದ ಆಸ್ತಿ ಮೌಲ್ಯ 1,07,18,94,422 ಆಗಿದೆ. ಅವರ ಬಳಿ 1.260 ಕೆ.ಜಿ. ಚಿನ್ನ, 4.860 ಕೆ.ಜಿ. ಬೆಳ್ಳಿ ಇದೆ. ಹುಂಡೈ ಕ್ರೆಟಾ ಕಾರನ್ನು ಮಾತ್ರವೇ ಹೊಂದಿದ್ದಾರೆ.

ಕುಟುಂಬಸ್ಥರಿಗೆ ಸಾಲ:

ಡಿ.ಕೆ.ಸುರೇಶ್‌ ಅವರು 51,93,20,305 ಸಾಲಗಾರರಾಗಿದ್ದು, ಸಹೋದರ ಡಿ.ಕೆ.ಶಿವಕುಮಾರ್‌ ಅವರಿಗೆ 1,03,02,802 ಸಾಲ ನೀಡಿದ್ದರೆ, ಸಹೋದರನ ಪುತ್ರಿ ಐಶ್ವರ್ಯ ಅವರಿಗೆ 5,87,42,717 ಸಾಲ ನೀಡಿದ್ದಾರೆ. ವಾರ್ಷಿಕ ಆದಾಯ 1,87,81,090 ಆಗಿದೆ. 5 ಪ್ರಕರಣಗಳಲ್ಲಿ ಇವರ ಹೆಸರಿದ್ದು, ಬಹುತೇಕ ಪ್ರಕರಣಗಳು ಅರಣ್ಯ ಇಲಾಖೆಗೆ ಸೇರಿವೆ. ಅವರ ತಾಯಿಯೇ .15 ಕೋಟಿ ರು.ಗಳ ಆಸ್ತಿಯನ್ನು ನೀಡಿದ್ದಾರೆ. ಷೇರು ಮುಂತಾದವುಗಳಲ್ಲಿ .2,55,31,330 ಹೂಡಿಕೆ ಮಾಡಿದ್ದಾರೆ. ಡಿ.ಕೆ.ಸುರೇಶ್‌ ಅವರ ಬಳಿ ಸದ್ಯ 22,35,707 ನಗದು ಇದೆ.

ಐಟಿ ಇಲಾಖೆ ಬಳಿ ದೆಹಲಿ ನಿವೇಶನ:

ಬರೋಬ್ಬರಿ 4,19,35,700 ಮೌಲ್ಯದ ಕೃಷಿ ಭೂಮಿಯನ್ನು ಡಿ.ಕೆ.ಸುರೇಶ್‌ ಹೊಂದಿದ್ದಾರೆ. ಕೃಷಿಯೇತ್ತರ ಭೂಮಿ ಮೌಲ್ಯ 2,48,23,33,118 ಆಗಿದೆ. 35,23,01,989 ಮೌಲ್ಯದ ಕಮರ್ಷಿಯಲ್‌ ಭೂಮಿ ಹೊಂದಿದ್ದಾರೆ. ರಾಂಪುರ ದೊಡ್ಡಿ, ಕೋಡಿಹಳ್ಳಿ, ಕನಕಪುರ, ಬೆಂಗಳೂರು ಸದಾಶಿವನಗರದ ಅಪ್ಪರ್‌ ಪ್ಲೇಸ್‌ನಲ್ಲಿ 16,05,46,120 ಮೌಲ್ಯದ ಮನೆ ಹೊಂದಿದ್ದಾರೆ. ದೆಹಲಿಯಲ್ಲಿರುವ ಮನೆ 21,38,000 ಬೆಲೆ ಬಾಳುತ್ತದೆ. ಆದರೆ, ದೆಹಲಿ ನಿವೇಶನವನ್ನು ಐಟಿ ಇಲಾಖೆ ತನ್ನ ವಶಕ್ಕೆ ಪಡೆದಿದೆ. ಡಿ.ಕೆ. ಸುರೇಶ್‌ ಪಿಯುಸಿ ಓದಿದ್ದಾರೆ.

click me!