ಲೋಕಸಮರ ಮಹಾತೀರ್ಪು: ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಮತ ಎಣಿಕೆಗೆ ಆಯೋಗ ಸರ್ವಸನ್ನದ್ಧ

By Web Desk  |  First Published May 23, 2019, 7:29 AM IST

ಇಂದು ಲೋಕಸಮರ ಮಹಾತೀರ್ಪು| ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಮತ ಎಣಿಕೆಗೆ ಆಯೋಗ ಸರ್ವಸನ್ನದ್ಧ| ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ: ಮಧ್ಯಾಹ್ನ 3 ಗಂಟೆ ವೇಳೆಗೆ ಸ್ಪಷ್ಟಚಿತ್ರಣ?


ಬೆಂಗಳೂರು[ಮೇ.23]: ರಾಷ್ಟ್ರದ ಮುಂದಿನ ಸರ್ಕಾರವನ್ನು ನಿರ್ಧರಿಸುವ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶದ ಕುತೂಹಲಕ್ಕೆ ಗುರುವಾರ ಅಂತಿಮ ತೆರೆ ಬೀಳಲಿದ್ದು, ಘಟಾನುಘಟಿಗಳ ಭವಿಷ್ಯ ಸಂಜೆಯ ವೇಳೆಗೆ ಹೊರಬೀಳಲಿದೆ.

ರಾಜ್ಯದ ಒಟ್ಟು 461 ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಗುರುವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕೆ ಕಾರ್ಯಕ್ಕೆ ಸಕಲ ರೀತಿಯಲ್ಲಿ ಚುನಾವಣಾ ಆಯೋಗವು ಸಿದ್ಧತೆ ಮಾಡಿಕೊಂಡಿದೆ.

Tap to resize

Latest Videos

undefined

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಕಣದಲ್ಲಿರುವ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರವು ಪ್ರತಿಷ್ಠೆಯ ಕ್ಷೇತ್ರವಾಗಿದೆ. ಮಿತ್ರ ಪಕ್ಷಗಳಿಗೆ ಸಡ್ಡು ಹೊಡೆದು ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಶ್‌ ಮತ್ತು ಜೆಡಿಎಸ್‌ನ ನಿಖಿಲ್‌ ಕುಮಾರಸ್ವಾಮಿ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ. ಹಾಸನ ಕ್ಷೇತ್ರವನ್ನು ತಮ್ಮ ವಾರಸುದಾರನಿಗೆ ಬಿಟ್ಟುಕೊಟ್ಟು ತುಮಕೂರು ಕ್ಷೇತ್ರದಿಂದ ಅದೃಷ್ಟಪರೀಕ್ಷೆಗಿಳಿದಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಸೇರಿದಂತೆ ಅವರಿಬ್ಬರ ಮೊಮ್ಮಕ್ಕಳ ರಾಜಕೀಯ ಪರೀಕ್ಷೆ ಏನಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‌ನ ಹಿರಿಯ ಧುರೀಣ ಹಾಗೂ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕೆ.ಎಚ್‌.ಮುನಿಯಪ್ಪ, ಎಂ.ವೀರಪ್ಪ ಮೊಯ್ಲಿ, ಕೇಂದ್ರದ ಸಚಿವರಾದ ಡಿ.ವಿ.ಸದಾನಂದಗೌಡ, ರಮೇಶ್‌ ಜಿಗಜಿಣಗಿ, ಅನಂತಕುಮಾರ್‌ ಹೆಗಡೆ, ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಶೋಭಾ ಕರಂದ್ಲಾಜೆ, ಬಿ.ವೈ.ರಾಘವೇಂದ್ರ, ಪ್ರಹ್ಲಾದ ಜೋಶಿ ಸೇರಿದಂತೆ 461 ಅಭ್ಯರ್ಥಿಗಳ ಸೋಲು-ಗೆಲುವಿನ ಫಲಿತಾಂಶ ಪ್ರಕಟವಾಗಲಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ 28 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 3,224 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕಾರ್ಯಕ್ಕಾಗಿ 28 ಕ್ಷೇತ್ರಗಳಲ್ಲಿ 28 ಚುನಾವಣಾಧಿಕಾರಿಗಳು, 258 ಸಹಾಯಕ ಚುನಾವಣಾಧಿಕಾರಿಗಳು, 180 ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳು, 80 ವೀಕ್ಷಕರನ್ನು ನಿಯೋಜಿಸಲಾಗಿದೆ. ಇದಲ್ಲದೇ 3,682 ಮೇಲುಸ್ತುವಾರಿ, 3707 ಸಹಾಯಕರು, 3,738 ಸೂಕ್ಷ್ಮ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ.

ಮತ ಎಣಿಕೆ ಕಾರ್ಯವು ಗುರುವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಪ್ರಾರಂಭದಲ್ಲಿ ಪೋಸ್ಟಲ್‌ ಬ್ಯಾಲೆಟ್‌ಗಳ ಮತ ಎಣಿಕೆ ನಡೆಯಲಿದೆ. ಅರ್ಧಗಂಟೆಯ ಬಳಿಕ ಮತಯಂತ್ರಗಳ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. 98,606 ಪೋಸ್ಟಲ್‌ ಬ್ಯಾಲೆಟ್‌ ಸ್ವೀಕೃತಿಯಾಗಿವೆ. 14 ಟೇಬಲ್‌ಗಳ ಮತ ಎಣಿಕೆ ಮತ್ತು ಚುನಾವಣಾಧಿಕಾರಿಯ ಪರಿಶೀಲನೆ ಮುಗಿದ ಬಳಿಕ ಒಂದು ಸುತ್ತು ಎಂದು ಪರಿಗಣಿಸಲಾಗುತ್ತದೆ. ಮತ ಎಣಿಕೆ ಕೇಂದ್ರದೊಳಗೆ ಮತ ಎಣಿಕೆಯ ಮೇಲುಸ್ತುವಾರಿ, ಎಣಿಕೆಯ ಸಹಾಯಕರು ಮತ್ತು ಸೂಕ್ಷ್ಮ ವೀಕ್ಷಕರು ಮತ್ತು ಚುನಾವಣಾ ಆಯೋಗದಿಂದ ಮಾನ್ಯತೆ ಪತ್ರ ಪಡೆದುಕೊಂಡ ಸಿಬ್ಬಂದಿ, ಅಭ್ಯರ್ಥಿಗಳು, ಅವರ ಏಜೆಂಟ್‌ಗಳ ಪ್ರವೇಶಕ್ಕೆ ಅವಕಾಶ ಇದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್‌ ನಿಷೇಧಿಸಲಾಗಿದೆ.

ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಾಲ್ಕು ಹಂತದಲ್ಲಿ ಭದ್ರತೆ ಮಾಡಲಾಗಿದೆ. ಕೇಂದ್ರ ಕ್ಷಿಪ್ರ ಕಾರ್ಯಪಡೆ, ಶಸ್ತ್ರಾಸ್ತ್ರ ಮೀಸಲು ಪಡೆ, ಸಿವಿಲ್‌ ಪೊಲೀಸ್‌, ಕೆಎಸ್‌ಆರ್‌ಪಿ ಪೊಲೀಸರನ್ನು ವಿವಿಧ ಹಂತದಲ್ಲಿ ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರಿಗೆ ಮತ ಎಣಿಕೆ ಕೇಂದ್ರದಿಂದ 50 ಮೀಟರ್‌ನಿಂದ 100 ಮೀಟರ್‌ ದೂರದವರೆಗೆ ನಿಷೇಧ ಇದೆ. ಫಲಿತಾಂಶ ವೀಕ್ಷಣೆಗಾಗಿ ಎಲ್‌ಇಡಿ ವ್ಯವಸ್ಥೆ ಮಾಡಲಾಗಿರುತ್ತದೆ.

ರಾಜ್ಯದ ಮತ ಎಣಿಕೆ ಕೇಂದ್ರಗಳು

* ಚಿಕ್ಕೋಡಿ - ಸಿಟಿಇ ಸೊಸೈಟಿ ಪಿಯು ಕಾಲೇಜು * ಬೆಳಗಾವಿ - ರಾಣಿ ಪಾರ್ವತಿದೇವಿ ಕಾಲೇಜು * ಬಾಗಲಕೋಟೆ - ಕೃಷಿ ವಿಶ್ವವಿದ್ಯಾಲಯ * ವಿಜಯಪುರ - ಸೈನಿಕ ಶಾಲೆ * ಕಲಬುರಗಿ - ಗುಲ್ಬರ್ಗ ವಿಶ್ವವಿದ್ಯಾಲಯ * ರಾಯಚೂರು - ಎಲ್‌ವಿಡಿ ಕಾಲೇಜು ಮತ್ತು ಎಸ್‌ಆರ್‌ಪಿಎಸ್‌ ಕಾಲೇಜು ಆವರಣ * ಬೀದರ್‌ - ಬಿವಿಬಿ ಕಾಲೇಜು * ಕೊಪ್ಪಳ - ಶ್ರೀಗವಿಸಿದ್ದೇಶ್ವರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು * ಬಳ್ಳಾರಿ - ರಾವ್‌ಬಹದೂರ್‌ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್‌ ಕಾಲೇಜು * ಹಾವೇರಿ - ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು * ಧಾರವಾಡ - ಕೃಷಿ ವಿಜ್ಞಾನ ವಿಶ್ವವಿದ್ಯಾಲಯ * ಉತ್ತರ ಕನ್ನಡ - ಡಾ.ಎ.ವಿ.ಬಾಳಿಗ ಕಲೆ ಮತ್ತು ವಿಜ್ಞಾನ ಕಾಲೇಜು, ಕುಮಟಾ * ದಾವಣಗೆರೆ - ದಾವಣಗೆರೆ ವಿಶ್ವವಿದ್ಯಾಲಯ * ಶಿವಮೊಗ್ಗ - ಸಹ್ಯಾದ್ರಿ ಕಲೆ ಕಾಲೇಜು * ಉಡುಪಿ-ಚಿಕ್ಕಮಗಳೂರು - ಸೆಂಟ್‌ ಸಿಸಿಲಿ ಹೈಸ್ಕೂಲ್‌ * ಹಾಸನ - ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು * ದಕ್ಷಿಣ ಕನ್ನಡ - ಎನ್‌ಐಟಿಕೆ ಕಾಲೇಜು, ಸುರತ್ಕಲ್‌ * ಚಿತ್ರದುರ್ಗ - ಸರ್ಕಾರಿ ವಿಜ್ಞಾನ ಕಾಲೇಜು (ಹೊಸಕಟ್ಟಡ) * ತುಮಕೂರು - ಸರ್ಕಾರಿ ಪಾಲಿಟೆಕ್ನಿಕ್‌ ಮತ್ತು ತುಮಕೂರು ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು * ಮಂಡ್ಯ - ಸರ್ಕಾರಿ ಕಾಲೇಜು, ಬಿ.ಎಂ.ರಸ್ತೆ * ಮೈಸೂರು - ಸರ್ಕಾರಿ ಮಹಾರಾಣಿ ಕಾಲೇಜು * ಚಾಮರಾಜನಗರ - ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು * ಬೆಂಗಳೂರು ಗ್ರಾಮಾಂತರ - ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ರಾಮನಗರ * ಬೆಂಗಳೂರು ಉತ್ತರ - ಸೆಂಟ್‌ ಜೋಸೆಫ್‌ ಇಂಡಿಯನ್‌ ಸ್ಕೂಲ್‌, ವಿಠ್ಠಲ್‌ ಮಲ್ಯ ರಸ್ತೆ * ಬೆಂಗಳೂರು ಕೇಂದ್ರ - ಮೌಂಟ್‌ ಕಾರ್ಮಲ್‌ ಕಾಲೇಜು, ವಸಂತನಗರ * ಬೆಂಗಳೂರು ದಕ್ಷಿಣ - ಎಸ್‌ಎಸ್‌ಎಂಆರ್‌ವಿ ಪಿಯುಸಿ ಕಾಲೇಜು, ಜಯನಗರ * ಚಿಕ್ಕಬಳ್ಳಾಪುರ - ನಾಗಾರ್ಜುನ ಎಂಜಿನಿಯರಿಂಗ್‌ ಕಾಲೇಜು, ದೇವನಹಳ್ಳಿ * ಕೋಲಾರ - ಸರ್ಕಾರಿ ಬಾಲಕರ ಪ್ರಥಮ ದರ್ಜೆ ಪದವಿ ಕಾಲೇಜು.

ಫಲಿತಾಂಶ 4 ತಾಸು ತಡ

ಲೋಕಸಭಾ ಚುನಾವಣೆಯ ಅಧಿಕೃತ ಫಲಿತಾಂಶವು ಈ ಬಾರಿ ನಿಗದಿತ ಸಮಯಕ್ಕಿಂತ ನಾಲ್ಕು ತಾಸುಗಳ ಕಾಲ ತಡವಾಗಲಿದ್ದು, ಮೊದಲ ಫಲಿತಾಂಶದ ಘೋಷಣೆ ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ಗಳ ಮತಗಳನ್ನು ತಾಳೆ ಹಾಕಬೇಕಿದೆ. ಹೀಗಾಗಿ ತಡವಾಗಿ ಅಧಿಕೃತ ಫಲಿತಾಂಶ ತಡವಾಗಲಿದೆ. ಪೋಸ್ಟಲ್‌ ಬ್ಯಾಲೆಟ್‌, ಇವಿಎಂ ಮತ ಎಣಿಕೆ ಬಳಿಕ ವಿವಿಪ್ಯಾಟ್‌ ಹೋಲಿಕೆ ಮಾಡಲಾಗುವುದು. ಕಂಟ್ರೋಲ್‌ ಯೂನಿಟ್‌ನಲ್ಲಿ ಡಿಸ್‌ಪ್ಲೆ ಆಗದಿದ್ದಲ್ಲಿ ವಿವಿಪ್ಯಾಟ್‌ ಮೂಲಕ ಎಣಿಕೆ ಮಾಡಲಾಗುತ್ತದೆ. ಪ್ರತಿ ಇವಿಎಂಗಳ ಎಣಿಕೆ ಕಾರ್ಯವು 20 ನಿಮಿಷದಲ್ಲಿ ಮುಗಿಯಲಿದೆ.

ಘಟಾನುಘಟಿಗಳ ಭವಿಷ್ಯ ನಿರ್ಧಾರ?

ತುಮಕೂರು: ಎಚ್‌.ಡಿ.ದೇವೇಗೌಡ, ಜಿ.ಎಸ್‌.ಬಸವರಾಜು

ಮಂಡ್ಯ: ನಿಖಿಲ್‌ ಕುಮಾರಸ್ವಾಮಿ, ಸುಮಲತಾ ಅಂಬರೀಷ್‌

ಬೆಂ.ಉತ್ತರ: ಡಿ.ವಿ.ಸದಾನಂದ ಗೌಡ, ಕೃಷ್ಣ ಭೈರೇಗೌಡ

ಉಡುಪಿ: ಶೋಭಾ ಕರಂದ್ಲಾಜೆ, ಪ್ರಮೋದ ಮಧ್ವರಾಜ್‌

ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ, ಉಮೇಶ್‌ ಜಾಧವ್‌

ಧಾರವಾಡ: ಪ್ರಹ್ಲಾದ್‌ ಜೋಶಿ, ವಿನಯ್‌ ಕುಲಕರ್ಣಿ

ಶಿವಮೊಗ್ಗ: ಬಿ.ವೈ.ರಾಘವೇಂದ್ರ, ಮಧು ಬಂಗಾರಪ್ಪ

click me!