ಇದು ಜಡ್ಜ್ ಮೆಂಟ್ ಡೇ : ಮತ್ತೊಮ್ಮೆ ಆಗ್ತಾರಾ ಮೋದಿ ಪ್ರಧಾನಿ..?

By Web DeskFirst Published May 23, 2019, 6:27 AM IST
Highlights

ಲೋಕಸಭಾ ಮಹಾ ಸಮರದ ಮತ ಎಣಿಕೆ ಆರಂಭವಾಗಲಿದೆ. ಯಾರ ಸರ್ಕಾರ ಅಧಿಕಾರಕ್ಕೆ ಎನ್ನುವುದು ಇಂದು ನಿರ್ಧಾರವಾಗಲಿದೆ

ನವದೆಹಲಿ :  ವಿಶ್ವಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಹಾಗೂ ಜಿದ್ದಾಜಿದ್ದಿ ಹಣಾಹಣಿಗೆ ಸಾಕ್ಷಿಯಾದ ಸಾರ್ವತ್ರಿಕ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಬೆಳಗ್ಗೆ 8ರಿಂದಲೇ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ ಹೊತ್ತಿಗೆ ಅಧಿಕೃತ ಫಲಿತಾಂಶ ಹೊರಬೀಳಲಿದೆ. ತನ್ಮೂಲಕ ದೇಶದ ಮುಂದಿನ ಪ್ರಧಾನಿ ಯಾರು? ನರೇಂದ್ರ ಮೋದಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುತ್ತಾ? ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಜಾದೂ ಮಾಡುತ್ತಾ? ಪ್ರತಿಪಕ್ಷಗಳ ಕೂಟ ಮೋದಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಸಫಲವಾಗುತ್ತಾ? ಎನ್‌ಡಿಎಗೆ ಬಹುಮತ ನೀಡಿರುವ ಮತದಾನೋತ್ತರ ಸಮೀಕ್ಷೆಗಳು ನಿಜವಾಗುತ್ತವಾ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ.

ಬೆಳಗ್ಗೆ 8.30ರಿಂದಲೇ ಯಾವ ಪಕ್ಷ, ಯಾವ ಕೂಟ ಮುನ್ನಡೆಯಲ್ಲಿದೆ, ಯಾವ ಅಭ್ಯರ್ಥಿ ಗೆಲುವಿನತ್ತ ಸಾಗುತ್ತಿದ್ದಾರೆ ಎಂಬ ಟ್ರೆಂಡ್‌ ಶುರುವಾಗಲಿದೆ. 12ರ ವೇಳೆಗೆ ಸ್ಪಷ್ಟಚಿತ್ರಣ ಲಭ್ಯವಾಗಲಿದೆ. ಸಂಜೆ ನಂತರ ಅಧಿಕೃತ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ 542 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 8049 ಅಭ್ಯರ್ಥಿಗಳಿಗೆ ಚಡಪಡಿಕೆ ಶುರುವಾಗಿದೆ.

7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆದಿದ್ದು, 90.99 ಕೋಟಿ ಮತದಾರರ ಪೈಕಿ ಶೇ.67.11ರಷ್ಟುಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಮತದಾನ ನಡೆದಿದೆ. ಅಲ್ಲದೆ ಇದೇ ಪ್ರಥಮ ಬಾರಿಗೆ ಎಲ್ಲ ಕ್ಷೇತ್ರಗಳಲ್ಲೂ ವಿವಿಪ್ಯಾಟ್‌ ಯಂತ್ರ ಬಳಸಲಾಗಿದೆ. ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳಲ್ಲಿನ ಮತಗಳನ್ನು ವಿವಿಪ್ಯಾಟ್‌ನಲ್ಲಿರುವ ಚೀಟಿಗಳ ಜತೆ ತಾಳೆ ಹಾಕಿ ನೋಡಬೇಕಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ವಿವಿಪ್ಯಾಟ್‌ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಈ ಪ್ರಕ್ರಿಯೆ ನಡೆಸಬೇಕಾಗಿದೆ. ಹೀಗಾಗಿ ಫಲಿತಾಂಶ 4ರಿಂದ 5 ತಾಸು ತಡವಾಗಲಿದೆ. ಇವಿಎಂ ಹಾಗೂ ವಿವಿಪ್ಯಾಟ್‌ ಮತಗಳ ನಡುವೆ ವ್ಯತ್ಯಾಸ ಕಂಡುಬಂದರೆ ವಿವಿಪ್ಯಾಟ್‌ ಮತಗಳನ್ನೇ ಪರಿಗಣಿಸಲಾಗುತ್ತದೆ.

ಸಾಮಾನ್ಯವಾಗಿ ಮೊದಲು ಅಂಚೆ ಮತಗಳ ಎಣಿಕೆ ಆರಂಭಿಸಿ, ನಂತರ ಇವಿಎಂ ಮತಗಳನ್ನು ಎಣಿಸಿ, ಕೊನೆಯದಾಗಿ ವಿವಿಪ್ಯಾಟ್‌ ಮತಗಳನ್ನು ಆಯೋಗ ಎಣಿಕೆ ಮಾಡುತ್ತದೆ. ಆದರೆ ಈ ಬಾರಿ ಭಾರಿ ಪ್ರಮಾಣದಲ್ಲಿ ಅಂಚೆ ಮತಗಳು (16.49 ಲಕ್ಷ) ಇರುವ ಹಿನ್ನೆಲೆಯಲ್ಲಿ ಇವಿಎಂ ಹಾಗೂ ಅಂಚೆ ಮತಗಳನ್ನು ಒಟ್ಟಿಗೇ ಎಣಿಸಲು ಉದ್ದೇಶಿಸಿದೆ ಎಂದು ತಿಳಿದುಬಂದಿದೆ. ದೇಶದಲ್ಲಿ 10.3 ಲಕ್ಷ ಮತಗಟ್ಟೆಗಳು ಇವೆ. ಆ ಪೈಕಿ 20,600 ಮತಗಟ್ಟೆಗಳ ವಿವಿಪ್ಯಾಟ್‌ ಮತಗಳನ್ನು ಎಣಿಸಬೇಕಾಗಿದೆ.

ದೇಶದಲ್ಲಿ 543 ಲೋಕಸಭಾ ಕ್ಷೇತ್ರಗಳು ಇವೆಯಾದರೂ 542 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ವ್ಯಾಪಕ ಹಣ ಹಂಚಿಕೆ ನಡೆದ ಹಿನ್ನೆಲೆಯಲ್ಲಿ ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸಲಾಗಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ.

ವಿಧಾನ ಎಣಿಕೆ: ಲೋಕಸಭೆಯ ಜೊತೆಜೊತೆಗೇ ಅರುಣಾಚಲಪ್ರದೇಶ, ಒಡಿಶಾ, ಆಂಧ್ರಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆಗಳಿಗೆ ಚುನಾವಣೆ ನಡೆದಿದ್ದು, ಅದರ ಫಲಿತಾಂಶವೂ ಗುರುವಾರ ಪ್ರಕಟವಾಗಲಿದೆ.

click me!