ಮಂಡ್ಯ ಕಾಂಗ್ರೆಸ್ ಬಂಡಾಯ ಶಮನಕ್ಕೆ ಸಿದ್ದರಾಮಯ್ಯ ಫೈನಲ್ ಟಚ್..!

By Web DeskFirst Published Apr 4, 2019, 6:54 PM IST
Highlights

ಮಂಡ್ಯ ಕೈ ಬಿಕ್ಕಟ್ಟಿಗೆ ಅಂತ್ಯ ಹಾಡಲು ಸಿದ್ದರಾಮಯ್ಯ ಯತ್ನ|ಸಿಎಂ ಹೆಚ್ಡಿಕೆ ಹಾಗೂ ಚೆಲುವರಾಯಸ್ವಾಮಿ ಟೀಮ್ ಜೊತೆ ಸಂಧಾನಕ್ಕೆ ಮುಂದಾದ ಸಿದ್ದು | ಮಂಡ್ಯದ್ದೇ ತಲೆನೋವಿನಿಂದ ಹೊರಬಂದರೆ ಸಾಕು ಅಂತಿರೋ ಸಿದ್ದರಾಮಯ್ಯ |ಮತ್ತೆ ಮಂಡ್ಯ ಕೈ ಮುಖಂಡರ ಸಭೆ ಕರೆದಿರೋ ಮಾಜಿ ಸಿದ್ದರಾಮಯ್ಯ |  

ಬೆಂಗಳೂರು/ಮಂಡ್ಯ, [ಏ.4]: ಒಂದು ಕಡೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಕ್ಯಾಂಡಿಡೇಟ್ ಸುಮಲತಾ ಅಂಬರೀಶ್ ನಡುವೆ ಜಿದ್ದಾಜಿದ್ದಿಗೆ ಮಂಡ್ಯ ಲೋಕಸಭಾ ಕಣ ಸಾಕ್ಷಿಯಾಗಿದೆ.

ಮತ್ತೊಂದೆಡೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರರ ಮತ್ತು ಜೆಡಿಎಸ್ ನಾಯಕರ ನಡುವೆ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ರಾಜ್ಯ ಮೈತ್ರಿ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಕಾಂಗ್ರೆಸ್‌ ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಶತಾಯಗತಾಯವಾಗಿ ಅಂತಿಮ ಕಸರತ್ತು ನಡೆಸಿದ್ದಾರೆ.

‘ಕೈ’ಕಮಾಂಡ್- ದಳಪತಿಗಳಿಗೆ ಮಂಡ್ಯ ಕಾಂಗ್ರೆಸ್ ಸೆಡ್ಡು; ಮಹತ್ವದ ನಿರ್ಣಯ

ಮೊನ್ನೆ ಮಂಗಳವಾರ ತಡರಾತ್ರಿ ವರೆಗೂ ಈ ವಿಚಾರವಾಗಿ ಸಭೆ ನಡೆಸಿದ್ದ ಸಿದ್ದು, ಮಂಡ್ಯ ಕಾಂಗ್ರೆಸ್‌ನ ಅತೃಪ್ತರ ಬಣದ ಚಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ಗಣಿಗ ರವಿ ಮತ್ತಿತರರಿಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದರು. 

ಮೈತ್ರಿ ಧರ್ಮದಂತೆ ಕ್ಷೇತ್ರದ ಜಂಟಿ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳುವಂತೆ ಸೂಚನೆ ಕೊಟ್ಟಿದ್ದರು. ಆದರೂ ಇದಕ್ಕೆ ಮಂಡ್ಯ ನಾಯಕರು ಸೊಪ್ಪು ಹಾಕಿಲ್ಲ. ಇದ್ರಿಂದ ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಸಿಎಂ ಕುಮಾರಸ್ವಾಮಿ ಹಾಗೂ ಚೆಲುವರಾಯಸ್ವಾಮಿ ಸಂಧಾನಕ್ಕೆ ಮುಂದಾಗಿರುವ ಸಿದ್ದು, ಯುಗಾದಿ ದಿನದಂದು [ಶನಿವಾರ] ಮತ್ತೇ ಮಂಡ್ಯ ಕೈ ಮುಖಂಡರ ಸಭೆ ಕರೆದಿದ್ದಾರೆ. ಇನ್ನು ಈ ಸಭೆಗೆ ಕುಮಾರಸ್ವಾಮಿಗೂ ಆಹ್ವಾನ ನೀಡಿದ್ದಾರೆ. 

ನಮಗೇನು ಮಾನ- ಮರ್ಯಾದೆ ಇಲ್ಲವಾ ? ಅನ್ನೋ ಪ್ರಶ್ನೆ ಚೆಲುವರಾಯಸ್ವಾಮಿ ಹಾಗೂ ತಂಡದ ವಾದವಾಗಿದ್ದು, ಇದಕ್ಕೆಲ್ಲ ತಾರ್ತಿಕ ಅಂತ್ಯ ಹಾಡಬೇಕು ಅನ್ನೋ ತೀರ್ಮಾನಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿಗೂ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಕೊಟ್ಟಿದ್ದಾರೆ.

ಹಾಸನದಲ್ಲಿ ರೇವಣ್ನ ಹಾಗೂ ಕಾಂಗ್ರೆಸ್ ನಾಯಕರ ಸಂಧಾನ ಮಾಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು. ಇದೀಗ ಮಂಡ್ಯಕ್ಕೆ ಕೈ ಹಾಕಿದ್ದು, ಮಂಡ್ಯ ಕೈ ಬಿಕ್ಕಟ್ಟಿಗೆ ಅಂತ್ಯ ಹಾಡಲು ಯತ್ನಿಸುತ್ತಿದ್ದಾರೆ. ಆದ್ರೆ ಶನಿವಾರದ ಸಭೆಯಲ್ಲಿ ಏನೇನ್ ಆಗುತ್ತೋ ಎನ್ನುವುದನ್ನು ಕಾದುನೋಡಬೇಕಿದೆ.

ಒಟ್ಟಿನಲ್ಲಿ ಸಿದ್ದರಾಮಯ್ಯ ಅವರಿಗೆ ಮಂಡ್ಯ ತಲೆನೋವಿನಿಂದ ಹೊರಬಂದರೆ ಸಾಕಪ್ಪಾ ಸಾಕು ಎನ್ನುವಂತಾಗಿದೆ.

click me!