ಶಿವಮೊಗ್ಗದಲ್ಲಿ ರಾಘವೇಂದ್ರಗೆ ನಿರೀಕ್ಷಿತ ಗೆಲುವು: ಮಧು ಎಡವಿದ್ದೆಲ್ಲಿ..?

By Naveen Kodase  |  First Published May 23, 2019, 5:34 PM IST

ಮಾಜಿ ಮುಖ್ಯಮಂತ್ರಿಗಳ ಪುತ್ರರ ಕಾಳಗದಲ್ಲಿ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಎದುರು ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಸುಮಾರು 2 ಲಕ್ಷಕ್ಕೂ ಅಧಿಕ ಮತಗಳಿಂದ ಜಯಭೇರಿ ಸಾಧಿಸಿದ್ದಾರೆ. ಚೊಚ್ಚಲ ಬಾರಿಗೆ ಸಂಸತ್ ಪ್ರವೇಶಿಸುವ ಮಧು ಬಂಗಾರಪ್ಪ ಕನಸು ಭಗ್ನವಾಗಿದೆ. ರಾಘವೇಂದ್ರ ಗೆದ್ದಿದ್ದು ಹೇಗೆ.? ಮಧು ಎಡವಿದ್ದೆಲ್ಲಿ ಎನ್ನುವುದರ ವಿಶ್ಲೇಷಣೆಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ..


ಶಿವಮೊಗ್ಗ[ಮೇ.23]: ಮಲೆನಾಡಿನ ಹೆಬ್ಬಾಗಿಲು, ಬಿಜೆಪಿ ಭದ್ರಕೋಟೆ ಶಿವಮೊಗ್ಗದಲ್ಲಿ ಮತ್ತೊಮ್ಮೆ ಕಮಲ ಕಿಲಕಿಲ ಎಂದಿದೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರ ನಡುವಿನ ಹೈವೋಲ್ಟೇಜ್ ಕದನದಲ್ಲಿ ಬಿ.ವೈ ರಾಘವೇಂದ್ರ 7,29,051 ಮತಗಳನ್ನು ಪಡೆಯುವ ಮೂಲಕ ಮಧು ಬಂಗಾರಪ್ಪ ವಿರುದ್ಧ 2,22,706 ಅಂತರದ ಗೆಲುವು ದಾಖಲಿಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಕ್ಷೇತ್ರದಲ್ಲಿ ಮೊದಲ ಸುತ್ತಿನಿಂದಲೂ ಬಿ.ವೈ ರಾಘವೇಂದ್ರ ಮುನ್ನಡೆ ಕಾಯ್ದುಕೊಂಡಿದ್ದರು. 

ಆರು ತಿಂಗಳ ಹಿಂದಷ್ಟೇ ನಡೆದಿದ್ದ ಉಪಚುನಾವಣೆಯಲ್ಲಿ ಮಧು ಬಂಗಾರಪ್ಪ ವಿರುದ್ಧ 52 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದ ರಾಘವೇಂದ್ರ, ಇದೀಗ ಬಂಗಾರಪ್ಪ ಕುಟುಂಬದ ವಿರುದ್ಧವೇ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಈ ಮೊದಲು 2009ರಲ್ಲಿ ನಡೆದ 15ನೇ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು 52,893 ಮತಗಳಿಂದ ಮಣಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಇದಾದ ಬಳಿಕ 2014ರಲ್ಲಿ ನಡೆದ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ದಾಖಲೆಯ 6,06,216 ಮತಗಳನ್ನು ಪಡೆದು ಸಂಸತ್ ಪ್ರವೇಶಿಸಿದ್ದರು. ಇವರ ಎದುರಾಳಿಗಳಾದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ[2,42,911] ಹಾಗೂ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್[2,40,636] ಮತಗಳನ್ನು ಪಡೆದಿದ್ದರು.    

Latest Videos

undefined

ರಾಜ್ಯರಾಜಕಾರಣದಲ್ಲಿ ಅತ್ಯಂತ ಕುತೂಹಲ ಮೂಡಿಸಿದ ಲೋಕಸಭಾ ಕ್ಷೇತ್ರಗಳಲ್ಲಿ ಶಿವಮೊಗ್ಗ ಕ್ಷೇತ್ರ ಕೂಡ ಒಂದಾಗಿತ್ತು. ಇದೇ ಮೊದಲ ಬಾರಿಗೆ ಕಾಂಗ್ರೆಸ್ ತನ್ನ ಸ್ಥಾನವನ್ನು ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಮಧು ಬಂಗಾರಪ್ಪ ಅವರಿಗೆ ಬಿಟ್ಟುಕೊಟ್ಟಿತ್ತು. ಉಪಚುನಾವಣೆಯಲ್ಲಿ ಅಲ್ಪ ಅಂತರದಲ್ಲಿ ಸೋತಿದ್ದ ಮಧು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದರು. 

ರಾಘವೇಂದ್ರ ಗೆದ್ದಿದ್ದು ಹೇಗೆ:

* ಯಡಿಯೂರಪ್ಪ ಮಾರ್ಗದರ್ಶನ: ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಖದರ್ ಹೊಂದಿರುವ ಯಡಿಯೂರಪ್ಪ ತಂತ್ರಗಾರಿಕೆ, ಅಭಿವೃದ್ದಿ ಕಾರ್ಯಗಳು ರಾಘವೇಂದ್ರ ಪಾಲಿಗೆ ವರವಾಗಿ ಪರಿಣಮಿಸಿದೆ. ಶಿವಮೊಗ್ಗ ಹೇಳಿ-ಕೇಳಿ ಬಿಜೆಪಿ ಭದ್ರಕೋಟೆ. ಉಪಚುನಾವಣೆಯಲ್ಲಿನ ಕಡಿಮೆ ಮತದ ಅಂತರದ ಗೆಲುವಿನಿಂದ ಎಚ್ಚೆತ್ತುಕೊಂಡ ರಾಘವೇಂದ್ರ ಕಾರ್ಯಕರ್ತರನ್ನು ಸಂಘಟಿಸುವಲ್ಲಿ ಯಶಸ್ವಿಯಾದರು. ಕಾರ್ಯಕರ್ತರು ಹಾಗೂ ಕ್ಷೇತ್ರದ ಜನತೆಯ ಜತೆ ರಾಘವೇಂದ್ರ ನಿರಂತರ ಸಂಪರ್ಕವಿಟ್ಟುಕೊಂಡಿದ್ದರು. ಇದರ ಜತೆಗೆ ಮೋದಿ ಹೆಸರಿನಲ್ಲಿ ಚುನಾವಣೆ ಎದುರಿಸಿದ್ದು ರಾಘವೇಂದ್ರ ಗೆಲುವಿಗೆ ಅನುಕೂಲವಾಯಿತು.

* 7 ಶಾಸಕರ ಬಲ: ಬೈಂದೂರು ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಭದ್ರಾವತಿ ಹೊರತುಪಡಿಸಿ 7 ಬಿಜೆಪಿ ಶಾಸಕರ ಬಲ ರಾಘವೇಂದ್ರ ಗೆಲುವಿಗೆ ಸಹಕಾರಿಯಾಯಿತು. ಸೊರಬ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ರಾಘವೇಂದ್ರ ಲೀಡ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

* ಕೈಹಿಡಿದ ಬೈಂದೂರು-ಶಿವಮೊಗ್ಗ ನಗರ: ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ರಾಘವೇಂದ್ರ ಲೀಡ್ ಪಡೆದಿದ್ದರೂ, ಬೈಂದೂರಿನಲ್ಲಿ [73,612 ಮತ] ಅತಿಹೆಚ್ಚು, ಆ ಬಳಿಕ ಶಿವಮೊಗ್ಗ ನಗರದಲ್ಲಿ 47,908 ಮತಗಳು ಬಿಜೆಪಿ ತೆಕ್ಕೆಗೆ ಜಾರಿದ್ದು ರಾಘವೇಂದ್ರ ಗೆಲುವು ಇನ್ನಷ್ಟು ಸುಲಭಗೊಳಿಸಿತು.

ಮಧು ಯಡವಿದ್ದೆಲ್ಲಿ..?

* ಉಪಚುನಾವಣೆ ಬಳಿಕ ನಾಪತ್ತೆ: ಉಪಚುನಾವಣೆಯಲ್ಲಿ ಸೋತ ಬಳಿಕ ಮಧು ಬಂಗಾರಪ್ಪ ಕ್ಷೇತ್ರದ ಜನತೆಯ ಜತೆಗೆ ನಿರಂತರ ಸಂಪರ್ಕ ಇಟ್ಟುಕೊಂಡಿರಲಿಲ್ಲ ಎನ್ನುವ ಆರೋಪ ಇದೆ. 

* ಕೈಹಿಡಿಯದ ಮೈತ್ರಿ ಧರ್ಮ: ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದ್ದರು, 8 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವೊಂದು ಕ್ಷೇತ್ರದಲ್ಲೂ ಮಧು ಲೀಡ್ ಪಡೆಯಲು ಯಶಸ್ವಿಯಾಗಲಿಲ್ಲ. ಸ್ವಂತ ಕ್ಷೇತ್ರ ಸೊರಬ ಹಾಗೂ ಕಾಂಗ್ರೆಸ್ ಶಾಸಕರಿರುವ ಭದ್ರಾವತಿಯಲ್ಲೂ ಮೈತ್ರಿ ಅಭ್ಯರ್ಥಿ ನಿರೀಕ್ಷಿಸಿದಷ್ಟು ಮತಗಳು ಸಿಗದಿರುವುದು ಸೋಲಿಗೆ ಕಾರಣ. ಕಡೇ ಗಳಿಗೆಯಲ್ಲಿ ಭದ್ರವತಿಯಲ್ಲಿ ಸಂಗಮೇಶ್ ಹಾಗೂ ಅಪ್ಪಾಜಿಗೌಡ ಅವರನ್ನು ಒಂದು ಮಾಡಿದ್ದರಾದರೂ ಮೈತ್ರಿ ಅಭ್ಯರ್ಥಿಗೆ ನಿರೀಕ್ಷಿತ ಮತ ದಕ್ಕಲಿಲ್ಲ.

* ಬಹುಸಂಖ್ಯಾತ ಈಡಿಗ ಹಾಗೂ ಒಕ್ಕಲಿಗ ಮತಗಳು ಮಧು ಬಂಗಾರಪ್ಪ ನಿರೀಕ್ಷಿಸಿದಷ್ಟು ಸಿಗದಿರುವುದು, ಜತೆಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಸಿದ್ದು ಮಧು ಹಿನ್ನಡೆಗೆ ಕಾರಣವಾಯಿತು.  

ಅಂಕಿಸಂಖ್ಯೆ: ಪಡೆದ ಮತಗಳು: 

ಬಿ.ವೈ. ರಾಘವೇಂದ್ರ -  7,29,051.
ಮಧು ಬಂಗಾರಪ್ಪ - 5,06,345
NOTA - 6866
ಬಿ.ವೈ. ರಾಘವೇಂದ್ರ LEAD - 2,22706

ರಾಘವೇಂದ್ರಗೆ ಎಲ್ಲೆಲ್ಲಿ ಲೀಡ್ ಎಷ್ಟು...?

ಸಾಗರ - 22,996.

ಸೊರಬ - 2,821.

ಬೈಂದೂರು - 73,612.

ಶಿವಮೊಗ್ಗ ನಗರ - 47,908.

ಶಿವಮೊಗ್ಗ ಗ್ರಾಮಾಂತರ - 18,126.

ಭದ್ರಾವತಿ - 5,645.

ಶಿಕಾರಿಪುರ - 21,670.

ತೀರ್ಥಹಳ್ಳಿ - 29,532.
 

click me!