ಮೊದಲ ಚುನಾವಣೇಲಿ ಮತ ಹಾಕಿದ್ದ 102 ವರ್ಷದ ನೇಗಿ ಇಂದು ಮತ್ತೆ ಮತ

By Web DeskFirst Published May 19, 2019, 9:03 AM IST
Highlights

ಮೊದಲ ಚುನಾವಣೇಲಿ ಮತ ಹಾಕಿದ್ದ 102 ವರ್ಷದ ನೇಗಿ ಇಂದು ಮತ್ತೆ ಮತ| 1951ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಮತಚಲಾಯಿಸುತ್ತಿದ್ದಾರೆ ನೇಗಿ

ಶಿಮ್ಲಾ[ಮೇ.19]: 1951ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮತಚಲಾಯಿಸಿದ್ದ ಹಿಮಾಚಲ ಪ್ರದೇಶದ ಶ್ಯಾಮ್‌ ಸರಣ್‌ ನೇಗಿ ಭಾನುವಾರ ಮತ್ತೊಮ್ಮೆ ಮತದಾನ ಮಾಡಲಿದ್ದಾರೆ. ಹಿಮಾಚಲ ಪ್ರದೇಶದ 4 ಲೋಕಸಭಾ ಕ್ಷೇತ್ರಗಳಿಗೆ ಲೋಕಸಭೆ ಕೊನೆಯ 7ನೇ ಹಂತದ ಮತದಾನ ನಡೆಯುತ್ತಿದ್ದು, ಗೌರವದೊಂದಿಗೆ ನೇಗಿ ಅವರನ್ನು ಮತಗಟ್ಟೆಗೆ ಕರೆಂತಂದು, ಮತಚಲಾಯಿಸಲು ಸಹಾಯ ಮಾಡಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿನ್ನೌರ್‌ ಜಿಲ್ಲೆಯಲ್ಲಿ ನಿವೃತ್ತ ಶಾಲಾ ಶಿಕ್ಷಕರಾಗಿರುವ 102 ವರ್ಷ ವಯಸ್ಸಿನ ನೇಗಿ, 1951ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಮತಚಲಾಯಿಸುತ್ತಲೇ ಬಂದಿದ್ದಾರೆ. ಇದುವರೆಗೆ ಒಮ್ಮೆಯೂ ಅವರು ಮತದಾನದಿಂದ ವಂಚಿತರಾಗಿಲ್ಲ. ಅಲ್ಲದೇ ಇತರರಿಗೂ ಮತ ಚಲಾಯಿಸುವಂತೆ ಪ್ರೇರಣೆ ನೀಡುತ್ತಿದ್ದಾರೆ. ಮತದಾನ ಜಾಗೃತಿ ಮತ್ತು ಚುನಾವಣೆಯಲ್ಲಿ ಭಾಗವಹಿಸುವಿಕೆ ಅಭಿಯಾನದ ರಾಯಭಾರಿಯನ್ನಾಗಿ ಚುನಾವಣಾ ಆಯೋಗ ನೇಗಿ ಅವರನ್ನು ನೇಮಿಸಿದೆ.

2010ರಲ್ಲಿ ಚುನಾವಣಾ ವಜ್ರ ಮಹೋತ್ಸವದ ಸಂದರ್ಭದಲ್ಲೂ ನೇಗಿ ಅವರನ್ನು ಚುನಾವಣಾ ಆಯೋಗ ಗೌರವಿಸಿತ್ತು. 2014 ಲೋಕಸಭೆ ಚುನಾವಣೆಯಲ್ಲಿ ಮತದಾನ ಜಾಗೃತಿಗಾಗಿ ಗೂಗಲ್‌ ಸಂಸ್ಥೆ ನೇಗಿ ಅವರ ಕುರಿತು ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿತ್ತು. ಜುಲೈನಲ್ಲಿ 103 ವರ್ಷಕ್ಕೆ ಕಾಲಿಡುತ್ತಿರುವ ನೇಗಿ, ‘ನಾನು ಎಲ್ಲಾ ಮತದಾರರಿಗೆ ಅದರಲ್ಲೂ ಯುವ ಮತದಾರರಿಗೆ ಚುನಾವಣೆಗಾಗಿ ಸಮಯವನ್ನು ಮೀಸಲಿಟ್ಟು, ಪ್ರಾಮಾಣಿಕ ವ್ಯಕ್ತಿಯನ್ನು ಆರಿಸುವಂತೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!