ಯಾರ ಸರ್ಕಾರ ಇಂದು ತಿಳಿಯಿರಿ

By Web DeskFirst Published May 19, 2019, 7:45 AM IST
Highlights

ಲೋಕಸಭಾ ಚುನಾವಣೆ ಸಮರ ದೇಶದಲ್ಲಿ ಇಂದು ಭಾನುವಾರ ಮುಕ್ತಾಯವಾಗುತ್ತಿದೆ. ಇದಾದ ಬಳಿಕ ಹಲವು ಸುದ್ದಿ ವಾಹಿನಿಗಳು ಎಕ್ಸಿಟ್ ಪೋಲ್ ಸರ್ವೆ ಬಿತ್ತರಿಸಲು ಸಜ್ಜಾಗಿವೆ. 

ನವದೆಹಲಿ: ಸಾರ್ವತ್ರಿಕ ಲೋಕಸಭೆ ಚುನಾವಣೆಯ 7 ನೇ ಹಾಗೂ ಕೊನೆಯ ಹಂತದ ಚುನಾವಣೆ ಭಾನುವಾರ ನಡೆಯಲಿದೆ. 7 ರಾಜ್ಯಗಳ 59 ಕ್ಷೇತ್ರ ಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ  6 ರವರೆಗೆ ಮತದಾನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರವಿಶಂಕರ ಪ್ರಸಾದ್, ಮನೋಜ್ ಸಿನ್ಹಾ, ಅನುಪ್ರಿಯಾ ಪಟೇಲ್, ಹರ್ದೀಪ್ ಸಿಂಗ್ ಪುರಿ, ಚಿತ್ರ ನಟರಾದ ಶತ್ರುಘ್ನ ಸಿನ್ಹಾ, ಸನ್ನಿ ಡಿಯೋಲ್ ಸೇರಿ 918  ಅಭ್ಯರ್ಥಿಗಳ ಭವಿಷ್ಯವನ್ನು 10.17 ಕೋಟಿ ಮತದಾರರು ನಿರ್ಧರಿಸಲಿದ್ದಾರೆ.

ಏ.11 ರಿಂದ 7 ಹಂತದ ಲೋಕಸಭೆ ಚುನಾವಣೆ ಆರಂಭವಾಗಿದ್ದು, ಮತದಾನ ಪ್ರಕ್ರಿಯೆಗೆ ಭಾನುವಾರ ಅಧಿಕೃತವಾಗಿ ತೆರೆ ಬೀಳಲಿದೆ. ಮೇ 23 ರ ಗುರುವಾರ ಮತ ಎಣಿಕೆ ನಡೆಯಲಿದೆ. ಲೋಕಸಭೆ ಚುನಾವಣೆಯ ಕಡೆಯ ಹಂತದ ಮತದಾನ ಭಾನುವಾರ ಸಂಜೆ 6 ಗಂಟೆಗೆ ತೆರೆ ಬೀಳುತ್ತಿದ್ದಂತೆ, ವಿವಿಧ ಸುದ್ದಿವಾಹಿನಿಗಳು ‘ಎಕ್ಸಿಟ್ ಪೋಲ್’ (ಚುನಾವಣೋತ್ತರ ಸಮೀಕ್ಷೆ) ಬಿತ್ತರಿಸಲು ಸಜ್ಜಾಗಿವೆ.

ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷ ಅಥವಾ ಕೂಟಕ್ಕೆ ಸ್ಪಷ್ಟ ಬಹುಮತ ಸಿಗುತ್ತಾ ಅಥವಾ ಅತಂತ್ರ ಲೋಕಸಭೆ ರಚನೆಯಾಗುತ್ತಾ?  ಯಾವ ಪಕ್ಷ ಅತಿದೊಡ್ಡ ಪಕ್ಷವಾಗಬಹುದು? ಯಾರಿಗೆ ಎಷ್ಟು ಸ್ಥಾನಗಳು ಒಲಿಯಬಹುದು ಎಂಬ ಅಂದಾಜನ್ನು ಈ ಸಮೀಕ್ಷೆಗಳು ನೀಡುವ ಕಾರಣ ತೀವ್ರ ಕುತೂಹಲವಿದೆ.

ಎಲ್ಲೆಲ್ಲಿ ಮತದಾನ?: ಉತ್ತರಪ್ರದೇಶ (13), ಪಂಜಾಬ್ (13), ಪಶ್ಚಿಮ ಬಂಗಾಳ (9), ಬಿಹಾರ (8), ಮಧ್ಯಪ್ರದೇಶ (8), ಹಿಮಾಚಲಪ್ರದೇಶ (4),  ಜಾರ್ಖಂಡ್ (3) ಹಾಗೂ ಚಂಡೀಗಢ (1)ದಲ್ಲಿ ಚುನಾವಣೆ ನಡೆಯಲಿದೆ. ಭಾನುವಾರ ಮತದಾನ ನಡೆಯಲಿರುವ 59 ಕ್ಷೇತ್ರಗಳಲ್ಲಿ 2014 ರಲ್ಲಿ ಬಿಜೆಪಿ 30 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹೀಗಾಗಿ ಈ ಹಂತ ಕೂಡ ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದೆ.

ಬಂಗಾಳದ ಮೇಲೆ ಕಣ್ಣು?: 7 ಹಂತದಲ್ಲಿ ಚುನಾವಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಮೊದಲ ಆರೂ ಹಂತದಲ್ಲಿ ಚುನಾವಣೆ ವೇಳೆ ಭಾರೀ ಹಿಂಸಾಚಾರ ಸಂಭವಿಸಿತ್ತು. ಹೀಗಾಗಿ 7 ನೇ ಹಂತದಲ್ಲಿ 9 ಲೋಕಸಭಾ ಕ್ಷೇತ್ರಗಳಿಗೆ ಮತದಾನದ ವೇಳೆ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, 70000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!