ಕಟ್ಟಾ-ಅಶೋಕ್‌ ನಡುವೆ ಮುಸುಕಿನ ಗುದ್ದಾಟ!

By Web Desk  |  First Published Mar 12, 2019, 11:46 AM IST

ಲೋಕ ಸಮರಕ್ಕೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ, ಎಲ್ಲ ಪಕ್ಷಗಳಲ್ಲಿಯೂ ತಮ್ಮ ಬೆಂಬಲಿಗರನ್ನು ಬೆಂಬಲಿಸುವ ಖಯಾಲಿ ಹೆಚ್ಚುತ್ತಿದೆ. ಇದೇ ಬೆನ್ನಲ್ಲೇ ಈಗಲೇ ಪಕ್ಷ ಬಿಟ್ಟಿರುವ ಬಿಜೆಪಿ ಮುಖಂಡರನ್ನು ಮರಳಿ ಕರೆ ತರುವ ವಿಷಯವಾಗಿ ಬೆಂಗಳೂರಿನ ಆರ್.ಆಶೋಕ್ ಹಾಗೂ ಕಟ್ಟಾ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.


ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಆರೋಪದಲ್ಲಿ ಉಚ್ಚಾಟನೆಗೊಂಡಿರುವವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆಗೆ ಮುಂದಾಗಿರುವುದರಿಂದ ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದ್ದು, ಸೋಮವಾರ ರಾಮನಗರದಲ್ಲಿ ನಡೆಯಬೇಕಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮುಖಂಡರ ಸಭೆ ಮುಂದೂಡುವಂತಾಗಿದೆ.

ಬಿಬಿಎಂಪಿ ಮಾಜಿ ಸದಸ್ಯರಾದ ಗೋಪಿ ಮತ್ತು ಶರವಣ ಎಂಬುವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಈ ಹಿಂದೆ ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ಆದರೆ, ಈ ಇಬ್ಬರನ್ನು ಮತ್ತೆ ಪಕ್ಷಕ್ಕೆ ಕರೆತರಲು ಸಂಸದ ಪಿ.ಸಿ.ಮೋಹನ್‌ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಪ್ರಯತ್ನ ನಡೆಸುತ್ತಿದ್ದು, ಈ ಬೆಳವಣಿಗೆ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

Tap to resize

Latest Videos

ಅಲ್ಲದೆ, ಉಚ್ಚಾಟಿತರನ್ನು ಮತ್ತೆ ಸೇರ್ಪಡೆ ಮಾಡಿಕೊಂಡಲ್ಲಿ ಪಕ್ಷದ ಸಹವಾಸವೇ ಬೇಡ ಎಂದಿರುವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ ನೇತೃತ್ವದಲ್ಲಿ ಶನಿವಾರ ಮಲ್ಲೇಶ್ವರದ ಪಕ್ಷದ ಕಚೇರಿಯಲ್ಲಿ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಪಕ್ಷದ ಮುಖಂಡರಾದ ಆರ್‌.ಅಶೋಕ್‌, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಸುಬ್ಬಣ್ಣ, ಸದಾಶಿವ, ಅರವಿಂದ ಲಿಂಬಾವಳಿ, ಸೇರಿದಂತೆ ಹಲವರು ಭಾಗಿಯಾಗಿದ್ದರು.

ಸಭೆಯಲ್ಲಿ ಅಶೋಕ್‌ ಮತ್ತು ಪಿ.ಸಿ.ಮೋಹನ್‌ ಅವರು ವಿಷಯ ಪ್ರಸ್ತಾಪಿಸಿದ್ದು ಗೋಪಿ ಮತ್ತು ಶರವಣ ಅವರು ಬಿಜೆಪಿಗೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು ಪಕ್ಷಕ್ಕೆ ಬಂದರೆ ಶಿವಾಜಿನಗರ ಮತ್ತು ಹೆಬ್ಬಾಳ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೆಚ್ಚು ಅನುಕೂಲವಾಗಲಿದ್ದು, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಕೇಂದ್ರ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ನೆರವಾಗಲಿದೆ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದರು.

ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ...

ನನ್ನ ಸೋಲಿಗೆ ಅವರೇ ಕಾರಣ:

ಇದರಿಂದ ಅಸಮಾಧಾನಗೊಂಡ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಈ ಇಬ್ಬರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿದ್ದ ರೋಷನ್‌ಬೇಗ್‌ ಜೊತೆ ಕೈಜೋಡಿಸಿದ್ದರು. ಇದೇ ಕಾರಣದಿಂದ ನಾನು ಸೋಲುವಂತಾಯಿತು. ಇಂಥಹ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಎಷ್ಟುಸರಿ ಎಂದು ಪ್ರಶ್ನಿಸಿದ್ದಲ್ಲದೇ, ಆರ್‌.ಅಶೋಕ್‌ ವಿರುದ್ಧ ಏರು ಧ್ವನಿಯಲ್ಲಿ ಕೂಗಾಡಿದ್ದರು.

ಈ ಸಂದರ್ಭದಲ್ಲಿ ಕಟ್ಟಾಬೆಂಬಲಕ್ಕೆ ಸುಬ್ಬಣ್ಣ, ಸದಾಶಿವ, ಲಿಂಬಾವಳಿ ನಿಂತರೆ, ಅಶೋಕ್‌ ಪರವಾಗಿ ಸಂಸದ ಪಿ.ಸಿ.ಮೋಹನ್‌ ಮಾತನಾಡಿದ್ದು, ಸಭೆಯಿಂದ ಅರ್ಧಕ್ಕೆ ನಿರ್ಗಮಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಬೇಸತ್ತ ಕಟ್ಟಾಸುಬ್ರಹ್ಮಣ್ಯ ನಾಯ್ಡು ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲಿಲ್ಲ. ಅಲ್ಲದೆ, ರಾಮನಗರ ಜಿಲ್ಲೆ ಪ್ರಭಾರಿಯಾಗಿರುವ ಅವರು ಸೋಮವಾರ ಕರೆದಿದ್ದ ಸಭೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಇದೇ ವಿಚಾರ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿರುವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಉಚ್ಚಾಟಿತರಾಗಿರುವವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್ಸಿನ ರೋಷನ್‌ ಬೇಗ್‌ ಗೆಲುವಿಗೆ ನೆರವಾಗಿದ್ದಾರೆ. ಇವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಲ್ಲಿ ಪಕ್ಷದಿಂದ ದೂರ ಸರಿಯುವುದಾಗಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

ಪಕ್ಷಕ್ಕೆ ತೊಂದರೆ ಆಗಬಾರದು: ಬಿಎಸ್‌ವೈ

ಈ ಬೆಳವಣಿಗೆಗಳನ್ನು ಗಮನಿಸಿರುವ ಯಡಿಯೂರಪ್ಪ, ಪಕ್ಷಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ವಿಷಯವನ್ನು ಪಕ್ಷದ ಎಲ್ಲ ಮುಖಂಡರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಲೋಕಸಭಾ ಚುನಾವಣೆಯಲ್ಲಿ ಯಾರೂ ಸಹ ಪಕ್ಷಕ್ಕೆ ತೊಂದರೆಯಾಗುವಂತೆ ನಡೆದುಕೊಳ್ಳಬಾರದು ಎಂಬ ಸೂಚನೆ ನೀಡಿದ್ದಾರೆ. ಜೊತೆಗೆ ಮುಂದಿನ ಎರಡು ಮೂರು ದಿನಗಳಲ್ಲಿ ಸಭೆ ನಡೆಸಿ ಎಲ್ಲರನ್ನು ಒಂದು ಮಾಡುವ ತೀರ್ಮಾನ ಕೈಗೊಂಡಿದ್ದಾರೆ.
 

click me!