ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಲು ಪ್ರಿಯಾಂಕಾ ರೆಡಿ

By Web DeskFirst Published Apr 14, 2019, 8:19 AM IST
Highlights

ಮೋದಿ ವಿರುದ್ಧ ವಾರಾಣಸಿಯಲ್ಲಿ ಪ್ರಿಯಾಂಕಾ ಸ್ಪರ್ಧೆ?| ಸ್ಪರ್ಧೆಗೆ ಸೋನಿಯಾ ಪುತ್ರಿ ಒಪ್ಪಿಗೆ, ರಾಹುಲ್‌ ಸಮ್ಮತಿಯಷ್ಟೇ ಬಾಕಿ: ಮೂಲಗಳು

ನವದೆಹಲಿ[ಏ.14]: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ಹೇಳಿವೆ.

ಸಾಕಷ್ಟುವಿಚಾರ ವಿಮರ್ಶೆಯ ನಂತರ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಇದಕ್ಕೆ ಸಮ್ಮತಿ ನೀಡುವುದಷ್ಟೇ ಬಾಕಿಯಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿರುವ ಸೋನಿಯಾ ಗಾಂಧಿ ಪುತ್ರಿ ಹಾಗೂ ರಾಹುಲ್‌ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಆರಂಭದಲ್ಲಿ ಅವರು ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚೆಗಳಿರಲಿಲ್ಲ. ಕಳೆದ ತಿಂಗಳು ಪಕ್ಷದ ಕಾರ್ಯಕರ್ತರು ಉತ್ತರ ಪ್ರದೇಶದ ಅಮೇಠಿ ಅಥವಾ ರಾಯ್‌ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸಿ ಎಂದು ಕೇಳಿಕೊಂಡಿದ್ದರು. ಆಗ ‘ವಾರಾಣಸಿಯಿಂದ ಏಕೆ ಬೇಡ’ ಎಂದು ಪ್ರಿಯಾಂಕಾ ಮರುಪ್ರಶ್ನೆ ಹಾಕಿದ್ದರು. ನಂತರ ಪಕ್ಷ ಬಯಸಿದರೆ ತಾವು ಚುನಾವಣೆಗೆ ಸ್ಪರ್ಧಿಸುವುದಾಗಿ ಇನ್ನೊಮ್ಮೆ ಹೇಳಿದ್ದರು.

ಇವೆಲ್ಲಕ್ಕೂ ಪೂರಕವಾಗಿ ಕಳೆದ ತಿಂಗಳು ವಾರಾಣಸಿ ಕ್ಷೇತ್ರದಲ್ಲಿ ‘ಗಂಗಾ ಯಾತ್ರೆ’ ನಡೆಸಿ 140 ಕಿ.ಮೀ. ದೂರ ದೋಣಿಯಲ್ಲಿ ಗಂಗಾ ನದಿಯಲ್ಲಿ ಸಂಚರಿಸಿದ್ದರು. ನಂತರ ಮೋದಿಯವರು ತಮ್ಮ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ, ಜನರು ಅವರ ಬಗ್ಗೆ ಸಿಟ್ಟುಗೊಂಡಿದ್ದಾರೆ ಎಂದು ಆರೋಪಿಸಿದ್ದರು. ಆಗಲೂ ಪ್ರಿಯಾಂಕಾ ವಾರಾಣಸಿಯಿಂದ ಸ್ಪರ್ಧಿಸಲಿದ್ದಾರೆಯೇ ಎಂಬ ಊಹಾಪೋಹಗಳು ಎದ್ದಿದ್ದವು. ಈಗ ಆ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಲ್ಲಿ ಆಮ್‌ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌ ವಿರುದ್ಧ 5.8 ಲಕ್ಷ ಮತಗಳಿಂದ ಜಯ ಸಾಧಿಸಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28

click me!