
ಜಮ್ಮು(ಏ.11): ಬಿಜೆಪಿಗೆ ಮತಹಾಕುವಂತೆ ಬಿಎಸ್‌ಎಫ್ ಯೋಧರು ಜನರಿಗೆ ಒತ್ತಾಯ ಮಾಡುತ್ತಿದ್ದು, ಕೆಲವು ಮತಗಟ್ಟೆಗಳಲ್ಲಿ ಕಾಂಗ್ರೆಸ್ ಬಟನ್ ಕೆಲಸ ಮಾಡುತ್ತಿಲ್ಲ ಎಂದು ಪಿಡಿಪಿ ಮತ್ತು ಎನ್‌ಸಿ ಗಂಭೀರ ಆರೋಪ ಮಾಡಿದೆ.
ಜಮ್ಮುವಿನ ಪೂಂಚ್ ಪ್ರದೇಶದಲ್ಲಿ ಸಮವಸ್ತ್ರದಲ್ಲಿರುವ ಬಿಎಸ್‌ಎಫ್ ಯೋಧರು ಮತಗಟ್ಟೆ ಬಳಿ ಬಂದು ಬಿಜೆಪಿಗೆ ಮತ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಪಿಡಿಪಿ ಮತ್ತು ಎನ್‌ಸಿ ಆರೋಪಿಸಿವೆ.
ಲೋಕಸಭೆಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ಮುಗಿದಿದ್ದು, ಪಿಡಿಪಿ ಮತ್ತು ಎನ್‌ಸಿ ಮಾಡಿರುವ ಆರೋಪ ಅತ್ಯಂತ ಗಂಭೀರ ಸ್ವರೂಪದ್ದಾಗಿದೆ.
ಈ ಕುರಿತು ಟ್ವಿಟ್ಟರ್‌ನಲ್ಲಿ ವಿಡಿಯೋ ಶೇರ್ ಮಾಡಿರುವ ಮುಫ್ತಿ, ಬಿಎಸ್‌ಎಫ್ ಯೋಧರ ಬೆದರಿಕೆಗೆ ಬಗ್ಗದೇ ಬಿಜೆಪಿ ವಿರೋಧಿ ಘೋಷಣೆ ಕೂಗಿಜನ ಮತಗಟ್ಟೆಯಿಂದ ಹೊರ ಬರುತ್ತಿರುವ ದೃಶ್ಯಾವಳಿಗಳನ್ನು ಶೇರ್ ಮಾಡಿದ್ದಾರೆ.
ಇನ್ನು ಎನ್‌ಸಿ ಜಮ್ಮು ಪ್ರಾಂತ್ಯದ ಅಧ್ಯಕ್ಷ ದವಿಂದರ್ ಸಿಂಗ್ ರಾಣಾ ಕೂಡ ಇಂತದ್ದೇ ಆರೋಪ ಮಾಡಿದ್ದು, ಮತದಾರರ ಮೇಲೆ ಒತ್ತಡ ಹೇರಲು ಬಿಜೆಪಿ ಸೇನೆಯನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.