ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣಾಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದ್ದು, ಘಟಾನುಘಟಿ ನಾಯಕರುಗಳು ಕೊನೆಯದಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಹಾಗಾದ್ರೆ ಕಡೆದಿನದ ಅಬ್ಬರ ಹೇಗಿತ್ತು ನೋಡಿ.
ಬೆಂಗಳೂರು, (ಏ.16) : ಕರ್ನಾಟಕದಲ್ಲಿನ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು [ಮಂಗಳವಾರ] ತೆರೆ ಬಿದ್ದಿದೆ. ರಣ ರಣ ಬಿಸಿಲಿನ ಮಧ್ಯೆಯೂ ಮತದಾರನ ಮನಗೆಲ್ಲಲು ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಬೆವರು ಹರಿಸಿದ್ದು ಇದೀಗ ಮನೆ ಮನೆ ಪ್ರಚಾರಕ್ಕೆ ತೆರಳಲಿದ್ದಾರೆ.
28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಏಪ್ರಿಲ್ 18ರಂದು ಮತದಾನ ನಡೆಯಲಿದ್ದು, ಚುನಾವಣೆಗೆ ಇನ್ನೂ ಒಂದೇ ದಿನ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ನಾಳೆ [ಬುಧವಾರ] ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ಇದೆ.
28 ಕ್ಷೇತ್ರಗಳಿಗೆ 478 ಅಭ್ಯರ್ಥಿಗಳು ಫೈನಲ್: ಇಲ್ಲಿದೆ ಪಟ್ಟಿ!
ಬಹಿರಂಗ ಪ್ರಚಾರಕ್ಕೆ ಇಂದು ಕೊನೆದಿನವಾಗಿದ್ದರಿಂದ 14 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅಬ್ಬರಿಸಿ ಬೊಬ್ಬಿರಿದರು. ಅದರಲ್ಲೂ ಪೈಕಿ ಮಂಡ್ಯದಲ್ಲಿ ಕ್ಲೈಮಾಕ್ಸ್ ಪ್ರಚಾರ ಅಂತೂ ಅಕ್ಷರಶಃ ರಣರಂಗವಾಗಿತ್ತು. ಹಾಗಾದ್ರೆ ಯಾವ ಕ್ಷೇತ್ರದಲ್ಲಿ ಯಾರೆಲ್ಲ ಅಬ್ಬರಿಸಿ ಬೊಬ್ಬಿರಿದ್ದಾರೆ ನೋಡಿ.
ಕೊನೆ ದಿನ ರಣ'ಕಹಳೆ' ಊದಿದ ಸುಮಲತಾ
ಮೊದಲ ಹಂತದ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರು ಕ್ಷೇತ್ರ ಮಂಡ್ಯ. ಒಂದು ಕಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಮಂಡ್ಯದ 'ಸ್ವಾಭಿಮಾನಿ ಸಮಾವೇಶ' ಎಂಬ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಿದ್ರೆ, ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಂದೆ ಸಿಎಂ ಕುಮಾರಸ್ವಾಮಿ ಅಬ್ಬರದ ಪ್ರಚಾರ ಮಾಡಿದರು. ಆರೋಪ-ಪ್ರತ್ಯಾರೋಪಗಳಿಂದ ರೋಡ್ ಶೋ ಮಾಡುತ್ತಿದ್ದ ದಳಪತಿಗಳು ಹಾಗೂ ಸುಮಲತಾ ಕಡೆದಿನವಾದ ಇಂದು ತಮ್ಮ ಶಕ್ತಿ ಪ್ರದರ್ಶನ ತೋರಿಸಿದರು.
ಟೀಕೆಗಳಿಗೆ ಕೊನೆದಿನ ತಿರುಗೇಟ ಕೊಟ್ಟ ಜೋಡೆತ್ತುಗಳು
ಹೌದು, ಮಂಡ್ಯದಲ್ಲಿ ವೈಯಕ್ತಿಕ ಟೀಕೆಗಳು ಅಬ್ಬರ ಜೋರಾಗಿದ್ದವು. ಅದರಲ್ಲೂ ಸಿಎಂ ಸೇರಿದಂತೆ ಜೆಡಿಎಸ್ ನಾಯಕರು ಸುಮಲತಾ, ದರ್ಶನ್, ಯಶ್ ವಿರುದ್ಧ ಮೇಲಿಂದ ಮೇಲೆ ವೈಯಕ್ತಿಕ ಟೀಕೆಗಳ ಮೂಲಕ ವಾಗ್ದಾಳಿ ನಡೆಸಿದ್ದರು. ಆದ್ರೆ ಅದ್ಯಾವುದಕ್ಕೆ ತಲೆಕೆಡಿಸಿಕೊಳ್ಳದ ಜೋಡೇತ್ತುಗಳು, ಇಂದು ಕೊನೆ ದಿನದಂದು ಜೆಡಿಎಸ್ ವಿರುದ್ಧ ಒಬ್ಬೊಬ್ಬರಾಗಿ ಗುಡುಗುವ ಮೂಲಕ ಎಲ್ಲ ಸಿಟ್ಟನ್ನು ತೀರಿಸಿಕೊಂಡರು.
ತುಮಕೂರು- 'ಬೆಣ್ಣೆ'ನಗರಿಯಲ್ಲಿ ಬಿಜೆಪಿ ಚಾಣಕ್ಯನ ರಣಕಹಳೆ
'ಬೆಣ್ಣೆ'ನಗರಿ ದಾವಣಗೆರೆ ಲೋಕಸಭಾ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ರೋಡ್ ಶೋ ನಡೆಸಿದರು. ಬಳಿಕ ತುಮಕೂರಿನಲ್ಲೂ ಸಹ ಜಿ.ಎಸ್. ಬಸವರಾಜು ಪರ ರೋಡ್ ಶೋ ಮಾಡಿ ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬಿದರು.
ಚಾಮರಾಜನಗರದಲ್ಲಿ ಸಿದ್ದರಾಮಯ್ಯ
ರಾಜ್ಯಾದಂತ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊನೆದಿನ ಚಾಮರಾಜನಗರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಧ್ರುವನಾರಾಯಣ್ ಪರ ಕೊನೆದಿನ ಬಿರುಸಿನ ಪ್ರಚಾರ ನಡೆಸಿದರು.
ಬೆಂಗಳೂರು ಕೇಂದ್ರ
ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಇಂದು ಕಾಟನ್ ಪೇಟೆ, ಗುಡ್ ಶೆಡ್ ರೋಡ್, ಗಾಂಧಿ ನಗರ ಕಡೆಯಲ್ಲಿ ರೋಡ್ ಶೋ ನಡೆಸಿದ್ರು. ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ ಚಿಕ್ಕಪೇಟೆ, ಗಾಂಧಿನಗರ ಪ್ರಚಾರ ನಡೆಸಿದರು.
ಬೆಂಗಳೂರು ದಕ್ಷಿಣ
ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ರೋಡ್ ಶೋ ನಡೆಸಿದ್ರೆ. ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಕೂಡ ಕ್ಷೇತ್ರದ ಹಲವೆಡೆ ರೋಡ್ ಶೋ ನಡೆಸಿ ಕೈತೊಳೆದುಕೊಂಡರು.
ಬೆಂಗಳೂರು ಉತ್ತರ
ಬೆಂಗಳೂರು ಉತ್ತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ .ಆರ್.ಪುರಂ ಕ್ಷೇತ್ರದ ಹೆಬ್ಬಾಳ, ರಾಮಮೂರ್ತಿನಗರ ವಾರ್ಡ್ ಗಳಲ್ಲಿ ಪ್ರಚಾರ ನಡೆಸಿದರು.
ಮತದಾನ ನಡೆಯುವ 14 ಕ್ಷೇತ್ರಗಳು
ಏಪ್ರಿಲ್ 18ರಂದು ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಉಡುಪಿ-ಚಿಕ್ಕಮಗಳೂರು, ಮೈಸೂರು-ಕೊಡಗು, ಚಿತ್ರದುರ್ಗ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.