ಲೋಕಸಭಾ ಫಲಿತಾಂಶಕ್ಕೂ ಮುನ್ನವೇ ಪ್ರತಿಪಕ್ಷಗಳಲ್ಲಿ ಬಿರುಕು!

By Web DeskFirst Published May 13, 2019, 10:04 AM IST
Highlights

ಫಲಿತಾಂಶಕ್ಕೂ ಮುನ್ನವೇ ಪ್ರತಿಪಕ್ಷಗಳಲ್ಲಿ ಬಿರುಕು| ಮೇ 21ರ ಸಭೆಗೆ ಮಮತಾ, ಮಾಯಾ, ಅಖಿಲೇಶ್‌ ಗೈರು ಸಂಭವ| ಫಲಿತಾಂಶ ಬಂದ ಬಳಿಕ ನೋಡೋಣ ಎನ್ನುತ್ತಿರುವ ನಾಯಕರು| ಪ್ರಧಾನಿ ಯಾರಾಗಬೇಕೆಂಬ ವಿಷಯವೇ ಕಗ್ಗಂಟು

ನವದೆಹಲಿ[ಮೇ.13]: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಣೆಗೂ ಮುನ್ನವೇ ವಿಪಕ್ಷಗಳ ಪಾಳೆಯದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಅತಂತ್ರ ಲೋಕಸಭೆ ಸೃಷ್ಟಿಯಾದರೆ ಯಾವ ಹೆಜ್ಜೆಗಳನ್ನು ಇಡಬೇಕು ಎಂಬ ಕುರಿತು ಚರ್ಚಿಸಲು ಫಲಿತಾಂಶ ಪ್ರಕಟಣೆಗೆ ಎರಡು ದಿನ ಮುನ್ನ ಅಂದರೆ ಮೇ 21ರಂದು ಪ್ರತಿಪಕ್ಷಗಳ ಸಭೆಯೊಂದನ್ನು ದೆಹಲಿಯಲ್ಲಿ ನಡೆಸುವ ಯತ್ನ ನಡೆಯುತ್ತಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ತೆಲುಗುದೇಶಂನ ಚಂದ್ರಬಾಬು ನಾಯ್ಡು ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ಆದರೆ ಆ ಸಭೆಗೆ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಗೈರು ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಫಲಿತಾಂಶಕ್ಕೆ ಮುನ್ನ ಸಭೆ ಆಯೋಜನೆ ಮಾಡುವ ಕುರಿತು ರಾಹುಲ್‌ ಅವರಿಗೆ ಸಲಹೆ ನೀಡಿ, ಬಹುತೇಕ ಅವರ ಸಮ್ಮತಿ ಪಡೆದಿದ್ದ ಚಂದ್ರಬಾಬು ನಾಯ್ಡು ಅದೇ ದಿನ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ ಅವರಿಗೆ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿಲ್ಲ. ಫಲಿತಾಂಶಕ್ಕೆ ಮುನ್ನ ಸಭೆ ನಡೆಸುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ. ಈ ನಡುವೆ, ಮಾಯಾವತಿ ಹಾಗೂ ಅಖಿಲೇಶ್‌ ಅವರಿಂದಲೂ ಸ್ಪಂದನೆ ವ್ಯಕ್ತವಾಗಿಲ್ಲ ಎಂದು ಹೇಳಲಾಗುತ್ತಿದೆ.

ಅತಂತ್ರ ಲೋಕಸಭೆ ರಚನೆಯಾದರೆ ಯಾರು ಪ್ರಧಾನಿಯಾಗಬೇಕು ಎಂಬ ವಿಚಾರವೇ ಈ ಎಲ್ಲ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಮಾಯಾವತಿ ಹಾಗೂ ಮಮತಾ ಇಬ್ಬರೂ ಪ್ರಧಾನಿ ಕುರ್ಚಿ ಮೇಲೆ ತಮಗಿರುವ ಬಯಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಆದರೆ, ಡಿಎಂಕೆಯ ಸ್ಟಾಲಿನ್‌ ಸೇರಿ ಕೆಲವು ನಾಯಕರು ರಾಹುಲ್‌ ಹೆಸರನ್ನು ಸೂಚಿಸುತ್ತಿದ್ದಾರೆ. ಮತ್ತೊಂದೆಡೆ, ಮಮತಾ ಹಾಗೂ ಮಾಯಾವತಿ ಇಬ್ಬರೂ ಸದ್ಯಕ್ಕೆ ಕಾಂಗ್ರೆಸ್‌ ಜತೆ ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗಿದೆ.

ಇದೇ ವೇಳೆ ಮಮತಾ ಅವರು ಚಂದ್ರಬಾಬು ನಾಯ್ಡು ಅವರ ರಾಜಕೀಯ ವಿರೋಧಿ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ರಚಿಸಲು ಯತ್ನಿಸುತ್ತಿರುವ ಮಿತ್ರಕೂಟದ ಜತೆಗೂ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

click me!