ಶೇ.50 ವಿವಿಪ್ಯಾಟ್‌ ಮತ ಎಣಿಸಿ: ಮತ್ತೆ ಸುಪ್ರೀಂ ಮೊರೆ ಹೋಗಲು ಪ್ರತಿಪಕ್ಷಗಳ ನಿರ್ಧಾರ

By Web DeskFirst Published Apr 15, 2019, 10:43 AM IST
Highlights

ಶೇ.50 ವಿವಿಪ್ಯಾಟ್‌ ಮತ ಎಣಿಸಿ| ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಪ್ರತಿಪಕ್ಷಗಳ ನಿರ್ಧಾರ| ಇವಿಎಂ ಕಾರ್ಯನಿರ್ವಹಣೆ ಬಗ್ಗೆ 21 ಪಕ್ಷಗಳ ಸಭೆ ಅತೃಪ್ತಿ| ದೂರು ಕೊಟ್ಟರೂ ಚುನಾವಣಾ ಆಯೋಗ ಕಿವುಡು: ನಾಯ್ಡು ಆಕ್ರೋಶ

ನವದೆಹಲಿ(ಏ.15]: ಇತ್ತೀಚಿನ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಭಾರಿ ಪ್ರಮಾಣದಲ್ಲಿ ಕೈಕೊಟ್ಟಪ್ರಸಂಗಗಳು ನಡೆದ ಕಾರಣ ಅಸಮಾಧಾನಗೊಂಡಿರುವ ಪ್ರತಿಪಕ್ಷಗಳು, ಶೇ.50ರಷ್ಟುವಿವಿಪ್ಯಾಟ್‌ (ಮತತಾಳೆ ಯಂತ್ರ) ಮತದ ಪ್ರತಿಗಳನ್ನು ಕಡ್ಡಾಯವಾಗಿ ಎಣಿಸಬೇಕು ಎಂದು ಕೋರಿ ಮತ್ತೊಮ್ಮೆ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಿವೆ.

ಮೊದಲ ಹಂತದ ಇವಿಎಂ ಮತದಾನದ ಬಗ್ಗೆ ಶಂಕೆ ಹೊಂದಿರುವ 21 ಪ್ರತಿಪಕ್ಷಗಳು, ಭಾನುವಾರ ದಿಲ್ಲಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಸಭೆ ನಡೆಸಿ ಈ ನಿರ್ಣಯ ಕೈಗೊಂಡವು. ಇವಿಎಂ ಹಾಗೂ ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದವು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯ್ಡು, ‘21 ಪಕ್ಷಗಳೂ ಒಟ್ಟುಗೂಡಿ ಶೇ.50 ಎಣಿಕೆ ಕೋರಿ ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ನಿರ್ಧರಿಸಿವೆ. ಇವಿಎಂ ವೈಫಲ್ಯದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಪ್ರಯೋಜನ ಆಗುತ್ತಿಲ್ಲ. ಇಂಥ ನಿಷ್ೊ್ರಯೋಜಕ, ಬೇಜವಾಬ್ದಾರಿ ಚುನಾವಣಾ ಆಯೋಗವನ್ನು ನಾನು ಎಲ್ಲೂ ನೋಡಿಲ್ಲ. ಆಯೋಗವು ಬಿಜೆಪಿಯ ಶಾಖೆಯಾಗಿ ಬದಲಾಗಿದೆ’ ಎಂದು ಆರೋಪಿಸಿದರು.

‘ಜನರ ವಿಶ್ವಾಸ ಮರಳುವಂತಾಗಲು ವಿವಿಪ್ಯಾಟ್‌ನ ಶೇ.50ರಷ್ಟುಮತ ಎಣಿಕೆಯೇ ಪರಿಹಾರ. ಜರ್ಮನಿ, ನೆದರ್ಲೆಂಡ್‌ನಂತಹ ದೇಶಗಳು ಕೂಡ ಇಂದು ಮತಪತ್ರದ ಮೊರೆ ಹೋಗಿವೆ’ ಎಂದರು.

ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಸಿಂಘ್ವಿ ಮಾತನಾಡಿ, ‘ದೇಶಾದ್ಯಂತ ಇವಿಎಂಗಳ ಬಗ್ಗೆ ಜಾಗೃತಿ ಮೂಡಿಸಲು ಸಭೆ ತೀರ್ಮಾನಿಸಿದೆ. ಚುನಾವಣಾ ಆಯೋಗದಿಂದ ನಾವು ಈ ವಿಷಯದಲ್ಲಿ ಏನನ್ನೂ ನಿರೀಕ್ಷಿಸಲ್ಲ. ‘ಎಕ್ಸ್‌’ ಪಕ್ಷಕ್ಕೆ ಹಾಕಿದ ಮತ ‘ವೈ’ ಪಕ್ಷಕ್ಕೆ ಹೋಗುತ್ತಿವೆ. ವಿವಿಪ್ಯಾಟ್‌ನಲ್ಲಿ ಮುದ್ರಣವಾಗುವ ಮತದ ಪ್ರತಿಯು ಮತದಾರನ ಕಣ್ಣಿಗೆ 7 ಸೆಕೆಂಡು ಕಾಣಬೇಕು. ಆದರೆ ಇದರ ಬದಲು ಕೇವಲ 5 ಸೆಕೆಂಡು ಕಾಣುತ್ತದೆ’ ಎಂದು ದೂರಿದರು.

‘ಮೊದಲ ಹಂತದ ಮತದಾನದ ವೇಳೆ ಶೇ.25ರಷ್ಟುಇವಿಎಂಗಳು ತಾಂತ್ರಿಕ ತೊಂದರೆ ಅನುಭವಿಸಿವೆ. ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳು ಡಿಲೀಟ್‌ ಆಗಿವೆ. ಮತಯಂತ್ರ ಸಮಸ್ಯೆಯಿಂದ ಬೆಳಗ್ಗೆ 4 ಗಂಟೆಯವರೆಗೂ ಮತದಾನ ನಡೆದಿದೆ ಎಂದರೆ ಏನರ್ಥ? ಮತದಾರರ ಬದಲು ಚುನಾವಣಾ ಆಯೋಗ ಮತಯಂತ್ರ ಬೆಂಬಲಿಸುತ್ತಿರುವುದು ದುರದೃಷ್ಟಕರ’ ಎಂದರು.

‘ಇಂಥ ದೋಷಪೂರಿತ ಮತಯಂತ್ರದಿಂದಲೇ ಬಿಜೆಪಿ ಗೆಲ್ಲುತ್ತಿದೆ. ಇದಕ್ಕೆ ಶೇ.50ರಷ್ಟುವಿವಿಪ್ಯಾಟ್‌ ಮತ ಎಣಿಕೆಯೇ ಪರಿಹಾರ’ ಎಂದು ಸಿಂಘ್ವಿ ಹೇಳಿದರು. ಸಭೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಕೂಡ ಇದ್ದರು.

ಶನಿವಾರವೇ ಚಂದ್ರಬಾಬು ನಾಯ್ಡು ಅವರು ಇವಿಎಂಗಳ ಕಾರ್ಯನಿರ್ವಹಣೆ ಪ್ರಶ್ನಿಸಿ ಮುಖ್ಯ ಚುನಾವಣಾ ಆಯುಕ್ತ ಸುನೀಲ್‌ ಅರೋರಾ ಅವರಿಗೆ ದೂರು ನೀಡಿದ್ದರು.

ವಿವಿಪ್ಯಾಟ್‌ ಎಂದರೇನು?:

ಮತಯಂತ್ರದಲ್ಲಿನ ಗುಂಡಿಯನ್ನು ಮತದಾರ ಒತ್ತಿದಾಗ ಅದು ತಾನು ಹಾಕಿದ ಅಭ್ಯರ್ಥಿಗೇ ಬಿದ್ದಿದೆಯೇ ಇಲ್ಲವೇ ಎಂಬುನ್ನು ತಾಳೆ ಹಾಕಿ ಖಚಿತಪಡಿಸಿಕೊಳ್ಳಲು ಇರುವ ಯಂತ್ರವೇ ವಿವಿಪ್ಯಾಟ್‌. ಮತದಾರ ಹಾಕಿದ ಮತದ ಮುದ್ರಿತ ಪ್ರತಿಯು ‘ವಿವಿಪ್ಯಾಟ್‌’ (ಮತತಾಳೆ) ಯಂತ್ರದಲ್ಲಿ ಬರುತ್ತದೆ. ಇದು ಮತದಾರನಲ್ಲಿ ತನ್ನ ಮತದ ಬಗ್ಗೆ ಖಚಿತತೆ ಮೂಡುತ್ತದೆ. ಇತ್ತೀಚಿನ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಈ ಒಂದು ಲೋಕಸಭಾ ಕ್ಷೇತ್ರದಲ್ಲಿನ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್‌ ಮತಗಳನ್ನು ಎಣಿಸಬೇಕು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28

click me!