ಬಾಲಾಕೋಟ್‌ ದಾಳಿ ಪ್ರಶ್ನಿಸಿದ ಕಾಂಗ್ರೆಸ್: ಸೋನಿಯಾ ಆಪ್ತ ಬಿಜೆಪಿಗೆ!

By Web DeskFirst Published Mar 15, 2019, 8:34 AM IST
Highlights

ಸೋನಿಯಾ ಆಪ್ತ ಟಾಮ್‌ ವಡಕ್ಕನ್‌ ದಿಢೀರ್‌ ಬಿಜೆಪಿಗೆ| ಕಾಂಗ್ರೆಸ್‌ಗೆ ಭಾರಿ ಮುಜುಗರ| ನಿನ್ನೆಯವರೆಗೂ ಮೋದಿ ಬೈಯುತ್ತಿದ್ದ ಟಾಮ್‌ ನಮೋ ಪಾಳಯಕ್ಕೆ| ಬಾಲಾಕೋಟ್‌ ದಾಳಿಯನ್ನು ಕಾಂಗ್ರೆಸ್‌ ಪ್ರಶ್ನಿಸಿದ್ದರಿಂದ ಬಿಜೆಪಿ ಸೇರ್ಪಡೆ: ವಡಕ್ಕನ್‌

ನವದೆಹಲಿ[ಮಾ.15]: ನಿನ್ನೆ ಮೊನ್ನೆಯವರೆಗೂ ಬಿಜೆಪಿ ಹಾಗೂ ಮೋದಿ ಸರ್ಕಾರವನ್ನು ಟೀವಿ ಚಾನೆಲ್‌ ಚರ್ಚಾಗೋಷ್ಠಿಗಳಲ್ಲಿ ಹಾಗೂ ಸುದ್ದಿಗೋಷ್ಠಿಗಳಲ್ಲಿ ಹಿಗ್ಗಾಮುಗ್ಗಾ ಝಾಡಿಸುತ್ತಿದ್ದ ಕಾಂಗ್ರೆಸ್‌ ವಕ್ತಾರ, ಸೋನಿಯಾ ಗಾಂಧಿ ಅವರ ಆಪ್ತ ಟಾಮ್‌ ವಡಕ್ಕನ್‌ ಅವರು ಗುರುವಾರ ಬಿಜೆಪಿ ಸೇರಿ ಅಚ್ಚರಿ ಮೂಡಿಸಿದ್ದಾರೆ. ಟಾಮ್‌ ಕೇರಳದವರಾಗಿದ್ದು, ಅವರ ಬಿಜೆಪಿ ಸೇರ್ಪಡೆ ಕೇರಳ ಬಿಜೆಪಿಗೆ ಅನುಕೂಲ ಉಂಟುಮಾಡುವ ಸಾಧ್ಯತೆ ಇದೆ.

ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ನೇತೃತ್ವದಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ವಡಕ್ಕನ್‌ ಅವರು ಬಿಜೆಪಿ ಸೇರಿದರು. ನಂತರ ಪಕ್ಷಾಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿದರು.

‘ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ ಉಗ್ರ ನೆಲೆಗಳ ಮೇಲೆ ಭಾರತ ನಡೆಸಿದ ವಾಯುದಾಳಿಯ ಸಾಚಾತನವನ್ನು ಕಾಂಗ್ರೆಸ್‌ ಪಕ್ಷ ಪ್ರಶ್ನಿಸಿದೆ. ಇದು ನನಗೆ ಅತೀವ ನೋವು ಹಾಗೂ ಆಘಾತ ಉಂಟು ಮಾಡಿದೆ. ಆದ್ದರಿಂದ ನಾನು ಭಾರವಾದ ಹೃದಯದಿಂದ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದೆ’ ಎಂದರು. ‘ಒಂದು ಪಕ್ಷವು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದರೆ ಆ ಪಕ್ಷ ತೊರೆಯುವುದನ್ನು ಬಿಟ್ಟು ಬೇರೆ ಆಯ್ಕೆಗಳಿರಲಿಲ್ಲ’ ಎಂದರು.

ಕಾಂಗ್ರೆಸ್‌ ಟೀಕೆ:

ಟಾಮ್‌ ವಡಕ್ಕನ್‌ ಬಿಜೆಪಿ ಸೇರಿದ್ದರಿಂದ ಆಘಾತಗೊಂಡಿರುವ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ‘ಈವರೆಗೂ ಮೋದಿ ಅವರನ್ನು ಟಾಮ್‌ ‘ಬೈಯುತ್ತಿದ್ದರು’. ಇದಕ್ಕೆ ಮೋದಿ-ಶಾ ಪ್ರತಿಕ್ರಿಯೆ ಏನು?’ ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

click me!