‘ಮೋದಿ ನೀಚ’ ಹೇಳಿಕೆ ಮತ್ತೆ ಸಮರ್ಥಿಸಿಕೊಂಡ ಅಯ್ಯರ್‌

By Web DeskFirst Published May 15, 2019, 8:56 AM IST
Highlights

‘ಮೋದಿ ನೀಚ’ ಹೇಳಿಕೆ ಮತ್ತೆ ಸಮರ್ಥಿಸಿಕೊಂಡ ಅಯ್ಯರ್‌| ಒಂದೂವರೆ ವರ್ಷದ ಹಿಂದೆ ನೀಡಿದ್ದ ಹೇಳಿಕೆ ಸಮರ್ಥಿಸಿದ ಕಾಂಗ್ರೆಸ್ಸಿಗ| ಮೋದಿ ದೇಶದ ಅತ್ಯಂತ ಹೊಲಸು ಮಾತಿನ ಪ್ರಧಾನಿ ಎಂದೂ ಟೀಕೆ, ಬಿಜೆಪಿ ಕಿಡಿ| ಹೇಳಿಕೆ ವೈಯಕ್ತಿಕ ಎಂದ ಕಾಂಗ್ರೆಸ್‌

ನವದೆಹಲಿ[ಮೇ.15]: ಒಂದೂವರೆ ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನೀಚ’ ಎಂದು ನಿಂದಿಸಿ ಕಾಂಗ್ರೆಸ್‌ ಪಕ್ಷದಿಂದಲೇ ಅಮಾನತಾಗಿದ್ದ, ಹಲವು ತಿಂಗಳುಗಳಿಂದ ಮೌನಕ್ಕೆ ಶರಣಾಗಿದ್ದ ಹಿರಿಯ ಕಾಂಗ್ರೆಸ್ಸಿಗ ಮಣಿಶಂಕರ್‌ ಅಯ್ಯರ್‌ ಮತ್ತೆ ಸುದ್ದಿಯಾಗಿದ್ದಾರೆ. ಮೋದಿ ನೀಚ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಮೋದಿ ಅವರು ದೇಶ ಕಂಡ ಅತ್ಯಂತ ಹೊಲಸು ಮಾತಿನ ಪ್ರಧಾನಿ ಎಂದೂ ಹೀಯಾಳಿಸಿದ್ದಾರೆ.

ಸಹಜವಾಗಿಯೇ ಈ ಹೇಳಿಕೆ ಬಿಜೆಪಿಯ ಆಕ್ರೋಶಕ್ಕೆ ಗುರಿಯಾಗಿದೆ. ಅಯ್ಯರ್‌ ಅವರೊಬ್ಬ ನಿಂದನಾ ಮುಖ್ಯಸ್ಥ. ಅವರ ಪಕ್ಷ ಅತ್ಯಂತ ದುರಹಂಕಾರಿ ಎಂದು ಕಿಡಿಕಾರಿದೆ. ಆದರೆ ಅಯ್ಯರ್‌ ಹೇಳಿಕೆಯಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ. ಇದು ಅವರ ವೈಯಕ್ತಿಕ ಹೇಳಿಕೆ ಎಂದಿದೆ ಜೊತೆಗೆ ಹೇಳಿಕೆಯನ್ನು ಖಂಡಿಸಿದೆ.

ಅಯ್ಯರ್‌ ಹೇಳಿದ್ದೇನು?:

ಹಲವು ತಿಂಗಳುಗಳಿಂದ ಮೌನಕ್ಕೆ ಶರಣಾಗಿದ್ದ ಅಯ್ಯರ್‌, ಕಾಶ್ಮೀರದ ದಿನಪತ್ರಿಕೆ ‘ರೈಸಿಂಗ್‌ ಕಾಶ್ಮೀರ್‌’ ಹಾಗೂ ‘ದ ಪ್ರಿಂಟ್‌’ ವೆಬ್‌ಸೈಟ್‌ಗೆ ಲೇಖನವೊಂದನ್ನು ಬರೆದಿದ್ದಾರೆ. ‘ಮೇ 23ರಂದು ಮೋದಿ ಅವರನ್ನು ದೇಶದ ಜನರು ಅಧಿಕಾರದಿಂದ ಕಿತ್ತೊಗೆಯುತ್ತಾರೆ. ಇದರೊಂದಿಗೆ ದೇಶ ಎಂದೂ ಕಾಣದ, ಮುಂದೆಯೂ ಕಾಣದ ಹೊಲಸು ಮಾತಿನ ಪ್ರಧಾನಿಯ ಅಂತ್ಯವಾಗಲಿದೆ.

2017ರ ಡಿಸೆಂಬರ್‌ 7ರಂದು ನಾನು ಏನೆಂದು ಹೇಳಿದ್ದೆ ಎಂದು ನೆನಪಿದೆಯೇ? ನಾನು ಭವಿಷ್ಯವಾದಿಯಲ್ಲವೇ?’ ಎಂದು ಲೇಖನದಲ್ಲಿ ಬರೆದಿದ್ದಾರೆ. 2017ರ ಡಿಸೆಂಬರ್‌ನಲ್ಲಿ ಮೋದಿ ಅವರನ್ನು ಅಯ್ಯರ್‌ ನೀಚ ಎಂದು ಕರೆದಿದ್ದರು. ಈ ಹೇಳಿಕೆ ವ್ಯಾಪಕ ಟೀಕೆಗೆ ಕಾರಣವಾದ ಹಿನ್ನೆಲೆಯಲ್ಲಿ ಅಯ್ಯರ್‌ ಅವರನ್ನು ಕಾಂಗ್ರೆಸ್‌ ಅಮಾನತುಗೊಳಿಸಿತ್ತು. 2018ರ ಆಗಸ್ಟ್‌ನಲ್ಲಿ ಅಮಾನತನ್ನು ಹಿಂಪಡೆದಿತ್ತು.

ಲೇಖನ ಕುರಿತು ಶಿಮ್ಲಾದಲ್ಲಿ ಮಂಗಳವಾರ ಸುದ್ದಿಗಾರರು ಪ್ರಶ್ನಿಸಿದಾಗ, ನೀವು ಪ್ರಸ್ತಾಪಿಸಿರುವುದು ನನ್ನ ಲೇಖನದಲ್ಲಿರುವ ಒಂದು ಸಾಲನ್ನು ಮಾತ್ರ. ಮಾಧ್ಯಮಗಳ ಆಟದಲ್ಲಿ ನಾನು ಭಾಗಿಯಾಗುವುದಿಲ್ಲ. ನಾನು ಮೂರ್ಖ ಇರಬಹುದು. ಆದರೆ ಶತಮೂರ್ಖನಲ್ಲ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಟೀಕೆ:

ಅಯ್ಯರ್‌ ಹೇಳಿಕೆಗೆ ಬಿಜೆಪಿ ಕೆಂಡಕಾರಿದೆ. 2017ರ ನೀಚ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ವಾಪಸಾಗಿರುವ ಅಯ್ಯರ್‌ ಒಬ್ಬ ನಿಂದಕ ಮುಖ್ಯಸ್ಥ. 2017ರಲ್ಲಿ ಹೇಳಿಕೆ ನೀಡಿದಾಗ ಹಿಂದಿ ಗೊತ್ತಿಲ್ಲ, ಕ್ಷಮಿಸಿ ಎಂದಿದ್ದರು. ಈಗ ಭವಿಷ್ಯವಾದಿಯಾಗಿದ್ದಾರೆ. ಕಳೆದ ವರ್ಷ ಕಾಂಗ್ರೆಸ್‌ ಅಯ್ಯರ್‌ ಅವರ ಅಮಾನತನ್ನು ರದ್ದುಗೊಳಿಸಿತ್ತು. ಇದು ಕಾಂಗ್ರೆಸ್ಸಿನ ದುರಂಹಕಾರಿ, ದ್ವಿಮುಖ ವರ್ತನೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್‌. ನರಸಿಂಹ ರಾವ್‌ ಹರಿಹಾಯ್ದಿದ್ದಾರೆ.

ಅಯ್ಯರ್‌ ಹೇಳಿಕೆ ಅವರ ಸ್ವಂತ ಅಭಿಪ್ರಾಯ. ಅಯ್ಯರ್‌ ವಿಚಾರದಲ್ಲಿ ಪಕ್ಷ ಹೆಜ್ಜೆ ಹಿಂದೆ ಇಡುತ್ತಿಲ್ಲ. ಮುಜುಗರಕ್ಕೆ ಒಳಗಾಗಿಲ್ಲ. ಮುಜುಗರ ಆಗಬೇಕಾಗಿರುವುದು ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಅವರ ಬಗ್ಗೆ ಕೀಳಾಗಿ ಮಾತನಾಡಿ, ಪ್ರಧಾನಿ ಹುದ್ದೆಯ ಗೌರವ ತಗ್ಗಿಸಿದ ಮೋದಿ ಅವರಿಗೆ ಎಂದು ಕಾಂಗ್ರೆಸ್ಸಿನ ವಕ್ತಾರ ಜೈವೀರ್‌ ಶೆರ್ಗಿಲ್‌ ಹೇಳಿದ್ದಾರೆ.

click me!