ಖರ್ಚಿಲ್ಲದೇ ಎಲೆಕ್ಷನ್‌ ಗೆಲ್ಲಲು ಕಾರ್ಯಕರ್ತರಿಗೆ ಮೋದಿ ಸೂತ್ರ

By Web DeskFirst Published Apr 27, 2019, 11:31 AM IST
Highlights

ಖರ್ಚಿಲ್ಲದೇ ಎಲೆಕ್ಷನ್‌ ಗೆಲ್ಲಲು ಮೋದಿ ಸೂತ್ರ| ಪೇಪರ್‌ಬಿಲ್‌, ಕರೆಂಟ್‌ ಬಿಲ್‌, ಟೀ, ತಿಂಡಿ ಯಾವುದೇ ಬಿಲ್‌ ಕಟ್ಟದೇ ಕಾಲ ಕಳೀರಿ...| ಪಕ್ಷದ ಕಾರ್ಯಕರ್ತರನ್ನು ವಿನೂತನ ರೀತಿ ಚುನಾವಣೆಗೆ ಹುರಿದುಂಬಿಸಿದ ಮೋದಿ

ವಾರಾಣಸಿ[ಏ.27]: ನೀವು ಖರ್ಚಿಲ್ಲದೇ ಚುನಾವಣೆ ಗೆಲ್ಲಬಹುದು... ಪೇಪರ್‌ ಬಿಲ್‌ ಕಟ್ಟಬೇಕಾಗಿಲ್ಲ, ಟೀವಿ ಬಿಲ್‌ ತುಂಬ ಬೇಕಾಗಿಲ್ಲ, ಕರೆಂಟ್‌ ಬಿಲ್‌ ಕೂಡ ಇರಲ್ಲ. ಜೊತೆಗೆ ಕಾಫಿ, ತಿಂಡಿಗೂ ದುಡ್ಡುಕೊಡಬೇಕಾಗಿಲ್ಲ ಎಂದು ಬಿಜೆಪಿ ಕಾರ್ಯಕರ್ತರನ್ನು ಪ್ರಧಾನಿ ನರೇಂದ್ರ ಮೋದಿ ಹುರಿದುಂಬಿಸಿದ್ದಾರೆ.

ವಾರಾಣಸಿಯಿಂದ 2ನೇ ಬಾರಿಗೆ ಆಯ್ಕೆ ಬಯಸಿ ಶುಕ್ರವಾರ ನಾಮಪತ್ರ ಸಲ್ಲಿಕೆಗೂ ಮುನ್ನ ಬೂತ್‌ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನಿಮ್ಮ ಮತಗಟ್ಟೆಯಲ್ಲಿ 1000 ಮತದಾರರು ಇದ್ದಾರೆ ಎಂದು ಅಂದುಕೊಂಡರೆ, 250 ಕುಟುಂಬಗಳು ಇವೆ ಎಂದು ಭಾವಿಸಿಕೊಳ್ಳಿ. ಆ ಬೂತ್‌ನಲ್ಲಿ 25 ಕಾರ್ಯಕರ್ತರು ಇದ್ದರೆ ಒಬ್ಬರಿಗೆ 10 ಕುಟುಂಬದ ಜವಾಬ್ದಾರಿಯನ್ನು ವಹಿಸಿ ಮತ್ತು ಅವರಿಗೆ ಹೇಳಿ ಇಂದಿನಿಂದ ನಿಮ್ಮ ಪೇಪರ್‌ ಬಿಲ್‌ ಇಲ್ಲ... ಕರೆಂಟ್‌ ಬಿಲ್‌ ಕಟ್ಟಬೇಕಾಗಿಲ್ಲ... ಟೀವಿ ಬಿಲ್‌ ಇಲ್ಲ.. ಟೀ ಕಾಫಿ ಬಿಲ್‌ ಇಲ್ಲ... ಹೀಗೆಂದ ಕೂಡಲೇ ಎಲ್ಲರೂ ಖುಷಿಯಿಂದ ಒಪ್ಪಿಕೊಳ್ಳುತ್ತಾರೆ. ಹಾಗಾದರೆ ಅವರು ಏನು ಮಾಡಬೇಕು? ಮುಂಜಾನೆ ಚಹಾದ ಸಮಯದಲ್ಲಿ ಒಬ್ಬರ ಮನೆಗೆ ಹೋಗಬೇಕು. ನಮಸ್ಕಾರ... ಹೇಗಿದ್ದೀರಾ? ನಿಮ್ಮ ಮಗ ಎಲ್ಲಿರುತ್ತಾನೆ? ಆರೋಗ್ಯ ಹೇಗಿದೆ? ಅಜ್ಜಿ ಔಷಧಿ ಸೇವೆನೆ ಮಾಡುತ್ತಿದ್ದಾರಾ? ಹೀಗೆ ಕುಶಲೋಪರಿ ವಿಚಾರಿಸಿ... ಅವರು ನಿಮಗೆ ಟೀ ಕುಡಿಯುತ್ತೀರಾ ಎಂದು ಕೇಳುತ್ತಾರೆ... ಆಗ ಹೌದು... ಹೌದು... ಚಹಾ ಕುಡಿಯುತ್ತೇನೆ ಎಂದು ತಲೆ ಅಲ್ಲಾಡಿಸಿ... ನಿಮ್ಮ ಚಹಾದ ಖರ್ಚು ಮುಗಿಯಿತು. ಬಳಿಕ ಮತ್ತೊಂದು ಮನೆಗೆ ಹೋಗಿ ಆ ಮನೆಯವರನ್ನು ಮಾತನಾಡಿ... ಮನೆಯಲ್ಲಿದ್ದ ಪೇಪರ್‌ ಕೈಗೆತ್ತಿಕೊಂಡು ನೀವು ಯಾವ ಪೇಪರ್‌ ಓದುತ್ತೀರಿ... ಈ ಪೇಪರ್‌ ನಾನು ಓದಿಯೇ ಇಲ್ಲ. ಸ್ವಲ್ಪ ಓದು ಕೊಡುತ್ತೇನೆ ಎಂದು ಪೇಪರ್‌ ಓದಿ.. ಅವರು ದುಡ್ಡುಕೊಟ್ಟು ತರಿಸಿದ ಪೇಪರ್‌ ಅನ್ನು ನೀವು ಉಚಿತವಾಗಿ ಓದಿಕೊಂಡು ಬನ್ನಿ. ನಿಮ್ಮ ಪೇಪರ್‌ ಬಿಲ್‌ನ ಖರ್ಚು ಉಳಿಯಿತು. ತಿಂಡಿ ತಿನ್ನುತ್ತೀರಾ ಎಂದು ಕೇಳಿದರೆ.. ಹೌದು ನೀವು ಚೆನ್ನಾಗಿ ತಿಂಡಿ ಮಾಡುತ್ತೀರಂತೆ ನಾನೂ ಅದರ ರುಚಿ ನೋಡುತ್ತೇನೆ ಎಂದು ಹೇಳಿ.. ಅವರು ತಿಂಡಿ ತಂದು ಕೊಡುತ್ತಾರೆ. ನಿಮ್ಮ ತಿಂಡಿ ಖರ್ಚು ಉಳಿಯಿತು. ಮಧ್ಯಾಹ್ನ ಮತ್ತೊಂದು ಮನೆಗೆ ಹೋಗಿ ಅವರು ಟೀವಿ ನೋಡುತ್ತಿದ್ದರೆ ನೀವು ಅವರ ಜೊತೆ ಕುಳಿತು ಟೀವಿ ನೋಡಿ... ನಿಮಗೆ ಟೀವಿ ಬಿಲ್‌ ಬರಲ್ಲ. ಕರೆಂಟ್‌ ಬಿಲ್‌ ಬರಲ್ಲ.. ಚುನಾವಣೆಯ ಹಿಂದಿನ ದಿನದ ವರೆಗೂ ನಿಮಗೆ ಖರ್ಚೆ ಇರುವುದಿಲ್ಲ. ಚುನಾವಣೆಯ ದಿನ ಮತ್ತೆ ಅವರ ಮನೆಗೆ ಹೋಗಿ ಅವರನ್ನು ಮತಟ್ಟೆಗೆ ಕರೆದುಕೊಂಡು ಬನ್ನಿ.. ಎಂದು ಮೋದಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮೊದಲ ಬಾರಿ ಆಡಳಿತಾರೂಢ ಅಲೆ

ಇದೇ ವೇಳೆ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಡಳಿತಾರೂಢ ಸರ್ಕಾರದ ಪರ ಅಲೆ ಕಂಡುಬರುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹಬ್ಬದ ವಾತಾವರಣ ಕಾಣುತ್ತಿದೆ. ಉತ್ತಮ ಆಡಳಿತ ನೀಡಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ಮೋದಿ ಸರ್ಕಾರ ಮತ್ತೊಮ್ಮೆ ಬೇಕು ಎಂದು ಜನರೇ ನಿರ್ಣಯ ಮಾಡಿದ್ದಾರೆ ಎಂದು ಹೇಳಿದರು.

ಮೋದಿಗೆ ಮಾಳವೀಯ ಮೊಮ್ಮಗಳು, ಸ್ಮಶಾನದ ಚೌಕಿದಾರ ಸೂಚಕರು!

ವಾರಾಣಸಿ ಚುನಾವಣೆ ಮುಗಿದಿದೆ ಎಂದು ಮಾಧ್ಯಮಗಳಿಗೆ ಗೊತ್ತಿದೆ. ನಾವು ಈಗ ಮತದಾನದ ಎಲ್ಲ ದಾಖಲೆಗಳನ್ನೂ ಮುರಿಯಬೇಕು. ಮಹಿಳೆಯರ ಮತದಾನ ಪ್ರಮಾಣ ಶೇ.5ರಷ್ಟುಹೆಚ್ಚಿರುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು. ಪಕ್ಷದ ಕಾರ್ಯಕರ್ತರೇ ನೈಜ ಅಭ್ಯರ್ಥಿಗಳು ಎಂದು ಹೇಳಿದರು.

‘ವಾರಾಣಸಿಯಲ್ಲಿ ಗುರುವಾರ ನಾನು ರೋಡ್‌ ಶೋ ನಡೆಸಿದೆ. ಆದರೆ ಭದ್ರತೆ ಬಗ್ಗೆ ನಾನು ಚಿಂತೆ ಮಾಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿಬಂದವು. ಆದರೆ ಮೋದಿಯನ್ನು ಕೋಟ್ಯಂತರ ತಾಯಂದಿರು ಹಾಗೂ ಸೋದರಿಯರು ರಕ್ಷಿಸುತ್ತಿದ್ದಾರೆ. ಬೇರೆಯವರು ಏನು ಹೇಳುತ್ತಾರೋ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಕೊಳಕು ನೀರಿನಲ್ಲೂ ಕಮಲ ಅರಳುವಂತೆ ಮಾಡುತ್ತೇನೆ’ ಎಂದು ತಿಳಿಸಿದರು.

NOT KNOWN ಕಾಲಂ ಸೇರಿ ಮೋದಿ ಆಸ್ತಿ ವಿವರ ಬಹಿರಂಗ!

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಮೋದಿ ಅವರು ಈ ಚುನಾವಣೆಯಲ್ಲಿ ಈಗಾಗಲೇ ಗೆದ್ದಿದ್ದಾರೆ. ಹೀಗಾಗಿ ಮತ ಹಾಕದಿದ್ದರೂ ನಡೆಯುತ್ತದೆ ಎಂಬ ವಾತಾವರಣವನ್ನು ಕೆಲವು ವ್ಯಕ್ತಿಗಳು ಸೃಷ್ಟಿಸುತ್ತಿದ್ದಾರೆ. ಆ ಬಲೆಗೆ ಸಿಲುಕಬೇಡಿ. ಮತದಾನ ನಿಮ್ಮ ಹಕ್ಕು. ಪ್ರತಿಯೊಬ್ಬರೂ ಹಕ್ಕು ಚಲಾವಣೆ ಮಾಡಿ ಎಂದು ಹೇಳಿದರು.

click me!