ರಮೇಶ್ ಬಿಜೆಪಿ ಸೇರಿದ್ರೆ ಕಥೆಯೇ ಬೇರೆ: ಅಣ್ಣನಿಗೆ ತಮ್ಮನಿಂದ ಖಡಕ್ ವಾರ್ನಿಂಗ್..!

By Web DeskFirst Published Apr 21, 2019, 8:01 PM IST
Highlights

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರ ರಾಜಕೀಯ ಗುದ್ದಾಟ ಜೋರಾಗಿದೆ.  ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಸಾಧುನವರ್ ಗೆಲ್ಲಿಸಲು ಸತೀಶ್ ಜಾರಕಿಹೊಳಿ ಪಣತೊಟ್ಟಿದ್ದಾರೆ. ಆದರೆ, ಸಹೋದರ ರಮೇಶ್ ಜಾರಕಿಹೊಳಿ ನಡೆಯಿಂದ ಸತೀಶ್ ಜಾರಕಿಹೊಳಿ ಕೆರಳಿದ್ದು, ಅಣ್ಣನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಬೆಳಗಾವಿ, [ಏ.21]: ಬೆಳಗಾವಿ ಅಖಾಡದಲ್ಲಿ ಇದೀಗ ಜಾರಕಿಹೊಳಿ ಸಹೋದರರು ನೇರ ಕದನಕ್ಕೆ ಇಳಿದಿದ್ದು, ರೆಬೆಲ್ ನಾಯಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದ್ರೆ ಕಥೆಯೇ ಬೇರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಎಚ್ಚರಿಕೆ ಕೊಟ್ಟಿದ್ದಾರೆ. 

ಅಷ್ಟೇ ಅಲ್ಲ, ಚುನಾವಣೆ ಬಳಿಕ ಮತ್ತೆ ಆಪರೇಷನ್ ಕಮಲ ಆರಂಭವಾಗಲಿದೆ ಎಂಬ ಸುಳಿವನ್ನ ಸತೀಶ್ ಜಾರಕಿಹೊಳಿ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲವನ್ನುಂಟು ಮಾಡಿದೆ.

ಬೆಕ್ಕಿಗೆ ಆಟ, ಇಲಿಗೆ ಪ್ರಾಣಸಂಕಟ; ಸಾಹುಕಾರರ ಕ್ಷೇತ್ರದಲ್ಲಿ ಕೈ ಪಡೆಗೆ ಇದೆಂಥ ಕಾಟ

ಬೆಳಗಾವಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಚಿವರು, ಗೋಕಾಕ್ ರಾಜಕೀಯದಲ್ಲಿ ಇಲ್ಲಿಯವರೆಗೂ ನಾವು ಭಾಗವಹಿಸಿಲ್ಲ. ರಮೇಶ್ ಜಾರಕಿಹೊಳಿ ಅವರೇ ಎಲ್ಲವನ್ನೂ ನೋಡಿ ಹೋಗುತ್ತಿದ್ದರು. ಈಗ ಅವರು ನಮ್ಮ ಜೊತೆಗಿಲ್ಲ. ಹೀಗಾಗಿ ಕ್ಷೇತ್ರವನ್ನು ನಮ್ಮ ಹಿಡಿತದಲ್ಲಿ ತೆಗೆದುಕೊಳ್ಳಲು ಪ್ರತಿ ಹಳ್ಳಿ, ಗ್ರಾಮಕ್ಕೂ ಹೋಗಿ ಪ್ರಚಾರ ಮಾಡುತ್ತಿದ್ದೇವೆ ಎಂದರು.

ಬಿಜೆಪಿಯನ್ನು ಬೆಂಬಲಿಸುವಂತೆ ತಮ್ಮ ಬೆಂಬಲಿಗರಿಗೆ ರಮೇಶ್ ಜಾರಕಿಹೊಳಿ ಅವರು ಹೇಳಿದ್ದು ನಿಜ. ಈ ಕುರಿತು ಕೆಲ ಕಾರ್ಯಕರ್ತರು ನಮ್ಮ ಬಳಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲೆಯ ಬೇರೆ ಬೇರೆ ಗ್ರಾಮಗಳಿಗೆ ಹೋಗಿ ಬಿಜೆಪಿಗೆ ಬೆಂಬಲ ನೀಡುವಂತೆ ಮಾಜಿ ಸಚಿವರು ಸೂಚನೆ ನೀಡಿದ್ದಾರೆ. ಹೀಗೆ ಆಗುತ್ತದೆ ಎಂದು ನಮಗೆ ಮೊದಲೇ ತಿಳಿದಿತ್ತು. ಇದರಿಂದಾಗಿ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ನೇತೃತ್ವದಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮಂತ್ರಿ ಸ್ಥಾನದಿಂದ ಕೊಕ್ ಕೊಟ್ಟ ಬಳಿಕ ಮೈತ್ರಿ ಸರ್ಕಾರದಿಂದ ಅಂತರ ಕಾಯ್ದುಕೊಂಡಿರುವ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಸೇರುವುದು ಪಕ್ಕಾ ಎನ್ನುವುದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ರಮೇಶ್ ಸ್ಪರ್ಧಿಸುವ ಗೋಕಾಕ್ ವಿಧಾನಸಭಾ ಕ್ಷೇತ್ರಕ್ಕೆ ಲಖನ್ ಜಾರಕಿಹೊಳಿ ಅವರನ್ನು ತಯಾರು ಮಾಡಿದೆ ಎಂದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ವಯಲದಿಂದ ಕೇಳಿಂದಿದೆ.

ಲಖನ್ ಜಾರಕಿಹೊಳಿ ಅವರೂ ಸಹ ಸತೀಶ್ ಜಾರಕಿಹೊಳಿ ಜತೆ ಸೇರಿ ಮೈತ್ರಿ ಅಭ್ಯರ್ಥಿ ಸಾಧುನವರ್ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ಮತ್ತಷ್ಟು ಇದಕ್ಕೆ ಪುಷ್ಠಿ ನೀಡಿದೆ. ಒಟ್ಟಿನಲ್ಲಿ ಲೋಕಸಭಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣ ಗರಿಗೆದರಲಿದೆ.

click me!