ಮೋದಿಗೆ ಮಮತಾ 100 ಬಸ್ಕಿ ಚಾಲೆಂಜ್‌!

By Web DeskFirst Published May 10, 2019, 7:44 AM IST
Highlights

ಮೋದಿಗೆ ಮಮತಾ 100 ಬಸ್ಕಿ ಚಾಲೆಂಜ್‌!| ಕಲ್ಲಿದ್ದಲು ಗಣಿಗಳಲ್ಲಿ ತೃಣಮೂಲ ಕಾಂಗ್ರೆಸ್‌ ಮಾಫಿಯಾ: ಮೋದಿ| ಸುಳ್ಳಾದರೆ, ಕಿವಿ ಹಿಡಿದು 100 ಬಸ್ಕಿ ಹೊಡೀತೀರಾ?: ಬ್ಯಾನರ್ಜಿ| ಸತ್ಯವಾದರೆ ಎಲ್ಲ ಅಭ್ಯರ್ಥಿಗಳನ್ನು ವಾಪಸ್‌ ಪಡೆಯಲು ಸಿದ್ಧ

ಬಂಕುರ[ಮೇ.10]: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ವಾಗ್ಯುದ್ಧ ಮುಂದುವರಿದಿದೆ. ಬಂಗಾಳದ ಕಲ್ಲಿದ್ದಲು ಗಣಿಗಳಲ್ಲಿ ಮಮತಾ ಬ್ಯಾನರ್ಜಿ ಮಾಫಿಯಾ ಸ್ಥಾಪಿಸಿದ್ದಾರೆ ಎಂದು ಮೋದಿ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಮಮತಾ, ಆರೋಪ ಸಾಬೀತಾದರೆ ಲೋಕಸಭೆ ಅಖಾಡದಲ್ಲಿರುವ ಎಲ್ಲ 42 ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಹಿಂದಕ್ಕೆ ಪಡೆಯುತ್ತೇನೆ. ಇಲ್ಲವಾದರೆ, ಕಿವಿ ಹಿಡಿದು 100 ಬಸ್ಕಿ ಹೊಡೆಯುತ್ತೀರಾ ಎಂದು ನೇರ ಸವಾಲು ಹಾಕಿದ್ದಾರೆ.

ಅಲ್ಲದೆ ತಮ್ಮ ಬಳಿ ಒಂದು ಪೆನ್‌ಡ್ರೈವ್‌ ಇದ್ದು, ಅದರಲ್ಲಿರುವ ಮಾಹಿತಿ ಬಹಿರಂಗಪಡಿಸಿದರೆ ಕಲ್ಲಿದ್ದಲು, ಗೋ ಸಾಗಣೆ ಮಾಫಿಯಾದ ವಿವರಗಳು ಬಹಿರಂಗವಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ ಬಂಕುರದಲ್ಲಿ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಕಲ್ಲಿದ್ದಲು ಗಣಿಗಳಲ್ಲಿ ಮಮತಾ ಮಾಫಿಯಾ ಇದೆ. ಗಣಿಗಳ ಕಾರ್ಮಿಕರಿಗೆ ಸಂಬಳ ಸಿಗದಂತೆ ಅವರು ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್‌ ನಾಯಕರು ಹಣ ಮಾಡಿಕೊಳ್ಳುತ್ತಿದ್ದಾರೆ. ಆದರೆ ಗಣಿ ಕಾರ್ಮಿಕರಿಗೆ ಅವರ ವೇತನವೇ ಸಿಗುತ್ತಿಲ್ಲ ಎಂದು ದೂರಿದರು.

ಇದಕ್ಕೆ ತಿರುಗೇಟು ನೀಡಿದ ಮಮತಾ, ನಮ್ಮ ಯಾವುದೇ ಒಬ್ಬ ಅಭ್ಯರ್ಥಿ ವಿರುದ್ಧ ಈ ಆರೋಪವನ್ನು ಸಾಬೀತುಪಡಿಸಿದರೆ, ಎಲ್ಲ ಅಭ್ಯರ್ಥಿಗಳನ್ನು ಚುನಾವಣಾ ಅಖಾಡದಿಂದ ಹಿಂಪಡೆಯುತ್ತೇನೆ. ಇದು ನನ್ನ ಸವಾಲ್‌. ಆದರೆ ಸುಳ್ಳು ಹೇಳಿದ್ದು ಸಾಬೀತಾದರೆ, ಮೋದಿ ಅವರು ಕಿವಿ ಹಿಡಿದು 100 ಬಸ್ಕಿ ಹೊಡೆಯಬೇಕು ಎಂದು ಅಬ್ಬರಿಸಿದರು.

ಕಲ್ಲಿದ್ದಲು ಇಲಾಖೆ ಕೇಂದ್ರ ಸರ್ಕಾರದ ಅಧೀನದಡಿ ಬರುತ್ತದೆ. ಕಲ್ಲಿದ್ದಲು ವ್ಯವಹಾರಗಳಲ್ಲಿ ಬಿಜೆಪಿ ನಾಯಕರು ಏಜೆಂಟ್‌ಗಳಾಗಿದ್ದಾರೆ. ನನ್ನ ಬಳಿ ಒಂದು ಪೆನ್‌ಡ್ರೈವ್‌ ಇದೆ. ಅದನ್ನು ಬಹಿರಂಗಪಡಿಸಿದರೆ, ಕಲ್ಲಿದ್ದಲು ಮಾಫಿಯಾದ ದಾಖಲೆಗಳು ಹಾಗೂ ಗೋವುಗಳ ಕಳ್ಳ ಸಾಗಣೆ ವಿಷಯ ಬಯಲಾಗಲಿದೆ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.

click me!