ಚುನಾವಣೆ ಫಲಿತಾಂಶ ಈ ಬಾರಿ ವಿಳಂಬ!

By Web DeskFirst Published May 17, 2019, 7:40 AM IST
Highlights

ಸಂಜೆ ವೇಳೆಗೆ ಲೋಕಸಭೆ ಫಲಿತಾಂಶ| ವಿವಿಪ್ಯಾಟ್‌ ಮತ ಎಣಿಕೆಗೆ ಕನಿಷ್ಠ 3 ತಾಸು, 5000 ಸಿಬ್ಬಂದಿ| ಪ್ರತಿ ಅಸೆಂಬ್ಲಿ ಕ್ಷೇತ್ರದ 5 ಬೂತ್‌ಗಳ ವಿವಿಪ್ಯಾಟ್‌ ಮತ ಎಣಿಕೆ| ಲಾಟರಿ ಮೂಲಕ ವಿವಿಪ್ಯಾಟ್‌ಗಳ ಆಯ್ಕೆ: ಆಯೋಗ| ಅಂಚೆ ಮತಗಳ ಎಣಿಕೆಯ ಬಳಿಕ ಇವಿಎಂಗಳ ಮತ ಎಣಿಕೆ ಆರಂಭ

ಬೆಂಗಳೂರು[ಮೇ.17]: ಪ್ರತಿ ವಿಧಾನಸಭಾ ಕ್ಷೇತ್ರದ ಕನಿಷ್ಠ ಐದು ಮತಗಟ್ಟೆಗಳ ವಿವಿಪ್ಯಾಟ್‌ ಮತಗಳ ಎಣಿಕೆ ಮಾಡಿ, ಮತಯಂತ್ರಗಳಲ್ಲಿನ ಮತಗಳ ಜತೆ ತಾಳೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯ ಅಧಿಕೃತ ಫಲಿತಾಂಶವು ಸುಮಾರು ಮೂರು ತಾಸುಗಳಿಗಿಂತ ಹೆಚ್ಚು ವಿಳಂಬವಾಗಿ ಪ್ರಕಟವಾಗಲಿದೆ.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ಮೊದಲು ಪ್ರತಿ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ವಿವಿಪ್ಯಾಟ್‌ ಮತಗಳನ್ನು ತಾಳೆ ಹಾಕಲಾಗುತ್ತಿತ್ತು. ಈಗ ಸುಪ್ರೀಂಕೋರ್ಟ್‌ ಐದು ಮತಗಟ್ಟೆಗಳ ವಿವಿಪ್ಯಾಟ್‌ ಮತ ತಾಳೆ ಮಾಡಬೇಕು ಎಂದು ತಿಳಿಸಿದೆ. ಇದರಿಂದ ಮೂರು ತಾಸುಗಿಂತ ಹೆಚ್ಚುವರಿ ಸಮಯ ತಡವಾಗಿ ಸಂಜೆ ವೇಳೆಗೆ ನಿಚ್ಚಳ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಅಲ್ಲದೇ, ಐದು ಸಾವಿರಕ್ಕೂ ಅಧಿಕ ಹೆಚ್ಚುವರಿ ಸಿಬ್ಬಂದಿಯ ಅಗತ್ಯ ಇದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌, ಸುಪ್ರೀಂ ಕೋರ್ಟ್‌ನ ನಿರ್ದೇಶನದ ಹಿನ್ನೆಲೆಯಲ್ಲಿ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್‌ನಲ್ಲಿನ ಮತಗಳನ್ನು ಎಣಿಕೆ ನಡೆಸಬೇಕು. ಅವುಗಳನ್ನು ಇವಿಎಂ ಮತಗಳ ಜತೆ ತಾಳೆ ಹಾಕಬೇಕಿದೆ. ಹೀಗಾಗಿ ಅಧಿಕೃತ ಫಲಿತಾಂಶವು ತಡವಾಗಿ ಪ್ರಕಟವಾಗಲಿದೆ. ಯಾವ ಮತಗಟ್ಟೆಯ ವಿವಿಪ್ಯಾಟ್‌ ಮತ್ತು ಇವಿಎಂ ಮತಗಳನ್ನು ತಾಳೆ ಹಾಕಬೇಕು ಎಂಬುದನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ವಿವಿಪ್ಯಾಟ್‌ ತೆರೆದು ಮತ ಎಣಿಕೆ ಮಾಡಿ ಮುಗಿಸಿದ ಬಳಿಕ ಮತ್ತೆ ಅದನ್ನು ಸೀಲ್‌ ಮಾಡಬೇಕು. ತದನಂತರವೇ ಮತ್ತೊಂದು ವಿವಿಪ್ಯಾಟ್‌ ತೆರೆದು ಮತ ಎಣಿಕೆ ಮಾಡಲಾಗುತ್ತದೆ. ಮತ ಎಣಿಕೆ ಪ್ರಾರಂಭದಲ್ಲಿ ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದ್ದು, ನಂತರ ಇವಿಎಂ ಮತಗಳ ಎಣಿಕೆ ನಡೆಸಲಾಗುತ್ತದೆ. ಈ ಎರಡೂ ಮತಗಳ ಎಣಿಕೆ ಮುಕ್ತಾಯಗೊಂಡ ನಂತರವೇ ವಿವಿಪ್ಯಾಟ್‌ಗಳ ಮತವನ್ನು ಇವಿಎಂ ಮತಗಳೊಂದಿಗೆ ತಾಳೆ ಹಾಕಿ ನೋಡಲಾಗುತ್ತದೆ ಎಂದು ತಿಳಿಸಿದರು.

ಮತಗಟ್ಟೆಗಳ ಸಂಖ್ಯೆ, ಮತದಾನದ ಪ್ರಮಾಣ ಹೆಚ್ಚಾಗಿರುವ ಕಡೆಗಳಲ್ಲಿ ಮತ್ತಷ್ಟುಸಮಯದ ಅವಕಾಶ ಬೇಕಾಗಲಿದೆ. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ತರಬೇತಿಯನ್ನು ಸಹ ನೀಡಲಾಗುತ್ತಿದೆ. ತರಬೇತಿಯು ಅಂತಿಮ ಹಂತದಲ್ಲಿದೆ ಎಂದರು.

click me!