ಈ ಬಾರಿ ತಡವಾಗಲಿದೆ ಚುನಾವಣಾ ಫಲಿತಾಂಶ !

By Web DeskFirst Published May 22, 2019, 8:11 AM IST
Highlights

ಲೋಕಸಭಾ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಈ ಬಾರಿ ಚುನಾವಣೆ ಫಲಿತಾಂಶ ಪ್ರಕಟದಲ್ಲಿ ತಡವಾಗಲಿದೆ. ಕಾರಣವೇನು ? 

ಬೆಂಗಳೂರು :  ತೀವ್ರ ಕುತೂಹಲ ಕೆರಳಿಸಿರುವ ಹಾಗೂ ಕಳೆದೊಂದುತಿಂಗಳಿನಿಂದ ಜನರು ಕಾಯುತ್ತಿರುವ ಲೋಕಸಭೆ ಚುನಾವಣೆ ಫಲಿತಾಂಶ ಗುರುವಾರ ಹೊರಬೀಳಲಿದೆ. ಮತಯಂತ್ರದಲ್ಲಿ ಭದ್ರವಾಗಿರುವ ರಾಜ್ಯದ 461 ಹುರಿಯಾಳುಗಳ ಹಣೆಬರಹ ಬಹಿರಂಗವಾಗಲಿದೆ. 

ಮತ ಎಣಿಕೆ ಕಾರ್ಯಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ವಿವಿಪ್ಯಾಟ್ ಮತ್ತು ಮತಯಂತ್ರಗಳ ಮತಗಳನ್ನು ತಾಳೆ ಹಾಕಬೇಕಿರುವ ಕಾರಣ ಅಧಿಕೃತವಾಗಿ ಫಲಿತಾಂಶ ಹೊರಬೀಳಲು ಸುಮಾರು 4 ತಾಸು ತಡವಾಗಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. 

ಚುನಾವಣಾ ಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮತ ಎಣಿಕೆಯ ಸಿದ್ಧತೆ ಕುರಿತು ವಿವರ ನೀಡಿದ ಅವರು, ಎಣಿಕೆ ಕಾರ್ಯಕ್ಕಾಗಿ 28 ಕ್ಷೇತ್ರದಲ್ಲಿ 28 ಚುನಾವಣಾಧಿಕಾರಿಗಳು, 258 ಸಹಾಯಕ ಚುನಾವಣಾ ಧಿಕಾರಿಗಳು, 180 ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳು, 80 ವೀಕ್ಷಕರನ್ನು ನಿಯೋಜಿಸಲಾಗಿದೆ. ಇದಲ್ಲದೇ  3,682 ಮೇಲುಸ್ತುವಾರಿ, 3707 ಸಹಾಯಕರು,  3,738 ಸೂಕ್ಷ್ಮ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. 3,224  ಟೇಬಲ್‌ಗಳವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

8 ಗಂಟೆಗೆ ಪ್ರಾರಂಭ: ಮತ ಎಣಿಕೆ ಕಾರ್ಯವು ಗುರುವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಪ್ರಾರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ಅರ್ಧಗಂಟೆಯ ಬಳಿಕ ಮತಯಂತ್ರಗಳ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ.  98,606 ಅಂಚೆ ಮತ ಸ್ವೀಕೃತಿಯಾಗಿವೆ. ಈ ಪೈಕಿ 25,768 ಮಂದಿ ಸೇವಾ ಮತದಾರರಾಗಿದ್ದಾರೆ. 14 ಟೇಬಲ್‌ಗಳ ಮತ ಎಣಿಕೆ ಮತ್ತು ಚುನಾವಣಾಧಿಕಾರಿಯ ಪರಿಶೀಲನೆ ಮುಗಿದ ಬಳಿಕ ಒಂದು ಸುತ್ತು ಎಂದು ಪರಿಗಣಿಸ ಲಾಗುತ್ತದೆ. 

ಮತ ಎಣಿಕೆ ಕೇಂದ್ರದೊಳಗೆ ಮತ ಎಣಿಕೆಯ ಮೇಲುಸ್ತುವಾರಿ, ಎಣಿಕೆಯ ಸಹಾಯಕರು ಮತ್ತು ಸೂಕ್ಷ್ಮ ವೀಕ್ಷಕರು ಮತ್ತು ಚುನಾವಣಾ ಆಯೋಗದಿಂದ ಮಾನ್ಯತೆ ಪತ್ರ ಪಡೆದುಕೊಂಡ ಸಿಬ್ಬಂದಿ, ಅಭ್ಯರ್ಥಿಗಳು, ಅವರ ಏಜೆಂಟ್‌ಗಳ ಪ್ರವೇಶಕ್ಕೆ ಅವಕಾಶ ಇದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ನಿಷಿದ್ಧ ಎಂದು ವಿವರಿಸಿದರು. 

ಎಣಿಕೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಾಲ್ಕು ಸ್ತರದ ಭದ್ರತೆ ಮಾಡಲಾಗಿದೆ. ಕೇಂದ್ರ ಕ್ಷಿಪ್ರ ಕಾರ್ಯ ಪಡೆ, ಸಶಸ್ತ್ರ ಮೀಸಲು ಪಡೆ,  ಸಿವಿಲ್ ಪೊಲೀಸ್, ಕೆಎಸ್‌ಆರ್‌ಪಿ ಪೊಲೀಸರನ್ನು ವಿವಿಧ ಹಂತದಲ್ಲಿ ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರಿಗೆ ಮತ ಎಣಿಕೆ ಕೇಂದ್ರದಿಂದ 50 ಮೀಟರ್‌ನಿಂದ 100 ಮೀಟರ್ ದೂರದವರೆಗೆ ನಿಷೇಧ ಇದೆ. ಫಲಿತಾಂಶ ವೀಕ್ಷಣೆಗಾಗಿ ಎಲ್‌ಇಡಿ ವ್ಯವಸ್ಥೆ ಮಾಡಲಾಗಿರುತ್ತದೆ ಎಂದರು.

ಲೋಕಸಭಾ ಚುನಾವಣೆಯ ಅಧಿಕೃತ ಫಲಿತಾಂಶವು ಈ ಬಾರಿ ನಿಗದಿತ ಸಮಯಕ್ಕಿಂತ 4 ತಾಸುಗಳ ಕಾಲ ತಡವಾಗಲಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಯಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್‌ಗಳ ಮತಗಳನ್ನು ತಾಳೆ ಹಾಕಬೇಕಿದೆ. ಹೀಗಾಗಿ ತಡವಾಗಿ ಅಧಿಕೃತ ಫಲಿತಾಂಶ ತಡವಾಗಲಿದೆ. ಪೋಸ್ಟಲ್ ಬ್ಯಾಲೆಟ್, ಇವಿಎಂ ಮತ ಎಣಿಕೆ ಬಳಿಕ ಹೋಲಿಕೆ ಮಾಡಲಾಗುವುದು. ಕಂಟ್ರೋಲ್ ಯೂನಿಟ್‌ನಲ್ಲಿ ಡಿಸ್‌ಪ್ಲೆ ಆಗದಿದ್ದಲ್ಲಿ    ವಿವಿ ಪ್ಯಾಟ್ ಮೂಲಕ ಎಣಿಕೆ ಮಾಡಲಾಗುತ್ತದೆ. ಪ್ರತಿ ಇವಿಎಂಗಳ ಎಣಿಕೆ ಕಾರ್ಯವು 20 ನಿಮಿಷದಲ್ಲಿ ಮುಗಿಯಲಿದೆ ಎಂದು ಮಾಹಿತಿ ನೀಡಿದರು.

click me!