ಹಸ್ತ‘ಕ್ಷೇಪ’ವಾದರೆ ಬಿಜೆಪಿಗೆ ವರ, ಜೆಡಿಎಸ್‌ಗೆ ಶಾಪ| ‘ಇಂದಿರಾ ಕ್ಷೇತ್ರ’ದಲ್ಲಿ ಶೋಭಾ, ಪ್ರಮೋದ್ ನೇರ ಹಣಾಹಣಿ| ಜೆಡಿಎಸ್‌ಗೆ ವಲಸೆ ಬಂದು ಸ್ಪರ್ಧಿಸಿದ ಕಾಂಗ್ರೆಸ್‌ನ ಮಧ್ವರಾಜ್| ಇಬ್ಬರೂ ಅಭ್ಯರ್ಥಿಗಳ ಬಗ್ಗೆ ಪಕ್ಷಗಳಲ್ಲಿ ಒಳಗೊಳಗೇ ಅಸಮಾಧಾನ| ನೆಲೆ ಇಲ್ಲದ ಜೆಡಿಎಸ್ ಹೇಗೆ ಗೆಲ್ಲುತ್ತೆ ಎಂಬುದೇ ಪ್ರಶ್ನೆ| ಆದರೆ ಬಿಜೆಪಿ ಅಭ್ಯರ್ಥಿಗೆ ಚಿಹ್ನೆಯೇ ಶ್ರೀರಕ್ಷೆ
-ಸುಭಾಶ್ಚಂದ್ರ ಎಸ್.ವಾಗ್ಳೆ /ಆರ್. ತಾರಾನಾಥ್. ಕನ್ನಡಪ್ರಭ
ಕ್ಷೇತ್ರ ಸಮೀಕ್ಷೆ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
ಉಡುಪಿ/ಚಿಕ್ಕಮಗಳೂರು[ಏ.05]: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಸಿ ಹೆಚ್ಚಾಗಿಯೇ ಇದ್ದು, ಬಹಿರಂಗವಾಗಿ ಕಾಣುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಲೆ ಎಷ್ಟರಮಟ್ಟಿಗೆ ಮತಗಳನ್ನಾಗಿ ಪರಿವರ್ತಿಸುತ್ತದೆ ಎಂಬುದರ ಮೇಲೆ ಫಲಿತಾಂಶ ಅವಲಂಬಿತವಾಗಿದೆ.
ಅರೆ ಮನಸ್ಸಿನಿಂದಲೇ ಎರಡನೇ ಬಾರಿ ಲೋಕಸಭೆ ಪ್ರವೇಶಿಸಲು ಸಜ್ಜಾಗಿರುವ ಬಿಜೆಪಿಯ ಶೋಭಾ ಕರಂದ್ಲಾಜೆ ಅವರಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅಡ್ಡಿಯುಂಟು ಮಾಡುತ್ತಾರಾ ಎಂಬುದು ಇದೀಗ ಕ್ಷೇತ್ರದಾದ್ಯಂತ ಸಂಚರಿಸಿದಾಗ ಕಂಡು ಬರುವ ದೃಶ್ಯ.
ಒಂದೆಡೆ ಸ್ಥಾನ ಉಳಿಸಿಕೊಳ್ಳುವ ಬಿಜೆಪಿಯ ಹೋರಾಟ, ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿಯನ್ನು ತನ್ನ ಚಿಹ್ನೆಯಡಿ ಕಣಕ್ಕಿಳಿಸಿದ ಜೆಡಿಎಸ್‌ನ ಪ್ರಯೋಗ, ಮತ್ತೊಂದೆಡೆ ಸ್ಪರ್ಧಿಸುವುದಕ್ಕೆ ಅವಕಾಶವೇ ಇಲ್ಲದ ಕಾಂಗ್ರೆಸ್‌ನ ಅಸಹಾಯಕತೆ-ಇವು ಕಣವನ್ನು ರಂಗೇರಿಸಿಬಿಟ್ಟಿವೆ. ನೇರ ಹಣಾಹಣಿಯಿರುವ ಈ ಕ್ಷೇತ್ರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ವಲಸೆ ಬಂದ ಪ್ರಮೋದ್ ಮಧ್ವರಾಜ್ ಇಬ್ಬರ ಮೇಲೂ ತಂತಮ್ಮ ಪಕ್ಷಗಳ ತಳಮಟ್ಟದ ಕಾರ್ಯಕರ್ತರ ತೀವ್ರ ಅಸಮಾಧಾನ ಇದೆ. ಇಬ್ಬರ ಪೈಕಿ ಒಬ್ಬರು ಆರಂಭದಲ್ಲಿ ರಾಷ್ಟ್ರ ರಾಜಕಾರಣ ಸಾಕು ಎಂದವರು. ಮತ್ತೊಬ್ಬರು ಅನಿರೀಕ್ಷಿತವಾಗಿ ಅಭ್ಯರ್ಥಿ ಸ್ಥಾನ ಹುಡುಕಿಕೊಂಡು ಬಂದದ್ದನ್ನು ಸ್ವೀಕರಿಸಿದವರು.
ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಅವರ ಬದಲು ಜಯಪ್ರಕಾಶ್ ಹೆಗ್ಡೆ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ, ಯಾವಾಗ ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಅವರನ್ನೇ ಕಣಕ್ಕಿಳಿಸುವುದು ಪಕ್ಕಾ ಆಯಿತæೂೕ ಆಗ ಜಯಪ್ರಕಾಶ್ ಹೆಗ್ಡೆ ಅವರನ್ನು ತಮ್ಮ ಪಕ್ಷಕ್ಕೆ ಕರೆತಂದು ಅಭ್ಯರ್ಥಿಯನ್ನಾಗಿಸಬೇಕು ಎಂಬ ಹವಣಿಕೆಯೊಂದಿಗೆ ಜೆಡಿಎಸ್ ನಾಯಕರು ಈ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಕೇಳಿ ಪಡೆದುಕೊಂಡರು. ಆದರೆ, ಜಯಪ್ರಕಾಶ್ ಹೆಗ್ಡೆ ಅವರನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾದಾಗ ಜೆಡಿಎಸ್ ಕಕ್ಕಾಬಿಕ್ಕಿಯಾಯಿತು. ತಮ್ಮ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳು ಇಲ್ಲದಿರುವುರಿಂದ ಅನಿವಾರ್ಯವಾಗಿ ಕಾಂಗ್ರೆಸ್ಸಿನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಕರೆದು ಟಿಕೆಟ್ ಕೊಡಬೇಕಾಯಿತು.
ಮೋದಿ ಮತ್ತೊಮ್ಮೆ ಎಂಬ ಕೂಗು
ಶೋಭಾ ಕರಂದ್ಲಾಜೆ ಅವರ ಕಾರ್ಯವೈಖರಿ ಬಗ್ಗೆ ಅನೇಕರಿಗೆ ಸಮಾಧಾನ ಇರದಿದ್ದರೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಮಾತು ಕ್ಷೇತ್ರದಲ್ಲಿ ಬಲವಾಗಿದæ. ಇವು ಮತಗಳಾಗಿ ಪರಿವರ್ತನೆಯಾದಲ್ಲಿ ಶೋಭಾ ಅವರಿಗೆ ಗೆಲುವು ಸುಲಭ. ಇಲ್ಲದಿದ್ದರೆ ಪ್ರಮೋದ್ ಮಧ್ವರಾಜ್ ಅವರಿಗೆ ಅನುಕೂಲವಾಗಬಹುದು. ಕಾಂಗ್ರೆಸ್‌ನಲ್ಲಿ ಬಂಡಾಯದ ಬಾವುಟವೂ ಹಾರಿದೆ. ಎಐಸಿಸಿ ಸದಸ್ಯ ಅಮೃತ್ ಶೆಣೈ ಅವರು ಪಕ್ಷದ ಹೈಕಮಾಂಡ್ ವಿರುದ್ಧ ಸಿಡಿದು ನಿಂತು, ಬಂಡಾಯವಾಗಿ ಕಣದಲ್ಲಿದ್ದಾರೆ. ಅಮೃತ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಆದ ಮತಗಳಿವೆ. ಜೊತೆಗೆ ಪ್ರಗತಿಪರರ ಅಲ್ಪಸಂಖ್ಯಾತರ ಬೆಂಬಲವೂ ಇದೆ. ಇದು ಕಾಂಗ್ರೆಸ್ ಬೆಂಬಲದಲ್ಲಿಯೇ ಗೆಲ್ಲಬೇಕಾದ ಅನಿವಾರ್ಯತೆ ಇರುವ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಅವರಿಗೆ ಮಗ್ಗುಲ ಮುಳ್ಳಾದರೆ, ಮೋದಿ ಅಲೆಯಲ್ಲಿ ದಡ ಸೇರಲು ಪ್ರಯತ್ನಿಸುತ್ತಿರುವ ಶೋಭಾರಿಗೆ ಲಾಭ ತರಬಹುದು.
ಇಂದಿರಾ ಗೆದ್ದ ಕ್ಷೇತ್ರ
ಭೌಗೋಳಿಕವಾಗಿ ಕರಾವಳಿ, ಮಲೆನಾಡು, ಅರೆಮಲೆನಾಡು ಪ್ರದೇಶಗಳನ್ನೊಳಗೊಂಡ ಈ ಕ್ಷೇತ್ರ ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಇಂದಿರಾ ಗಾಂಧಿಯನ್ನು ಗೆಲ್ಲಿಸಿದ ಖ್ಯಾತಿ ಚಿಕ್ಕಮಗಳೂರಿಗಿದ್ದರೆ, ನೆಹರು-ಗಾಂಧಿ ಕುಟುಂಬದ ಆಪ್ತ ಆಸ್ಕರ್ ಫರ್ನಾಂಡೀಸ್ ಅವರು ಸತತ ಐದು ಬಾರಿ ಲೋಕಸಭೆ ಪ್ರವæೕಶಿಸಿದ್ದರು. ಇಂದಿರಾಗಾಂಧಿ ಅವರು ತಾನೇ ಜಾರಿಗೊಳಿಸಿದ್ದ ತುರ್ತುಪರಿಸ್ಥಿತಿಯ ನಂತರ 1978ರಲ್ಲಿ ಗೆಲ್ಲುವುದಕ್ಕೆ ಆರಿಸಿಕೊಂಡ ಕ್ಷೇತ್ರ ಇದು. ಆಗ ಸಂಸದರಾಗಿದ್ದ ಡಿ.ಬಿ.ಚಂದ್ರೇಗೌಡರ ರಾಜಿನಾಮೆ ಕೊಡಿಸಿ, ಉಪಚುನಾವಣೆಯಲ್ಲಿ ಇಂದಿರಾ ಗಾಂಧಿ ಸ್ಪರ್ಧಿಸಿ ಗೆದ್ದಿದ್ದರು. ಉಡುಪಿ ಕ್ಷೇತ್ರದಲ್ಲಿ 1980ರಿಂದ 98ರವರೆಗೆ ಸತತವಾಗಿ 5 ಬಾರಿ ಗೆದ್ದವರು ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಆಸ್ಕರ್ ಅವರು. ಈಗ ಅವೆರಡೂ ಕ್ಷೇತ್ರಗಳು ಸೇರಿ ಒಂದು ಕ್ಷೇತ್ರವಾಗಿದ್ದರೂ ಅಂದಿನ ಸಂಟಿಮೆಂಟ್‌ಗಳು ಇಂದು ಕಾಂಗ್ರೆಸ್ ಪಕ್ಷಕ್ಕೆ ಮತಗಳನ್ನು ತಂದುಕೊಡದು.
ಬಿಜೆಪಿ ಅಭ್ಯರ್ಥಿಗೆ ಚಿಹ್ನೆಯ ಶ್ರೀರಕ್ಷೆ
ಬಿಜೆಪಿಯಲ್ಲಿ ಅಭ್ಯರ್ಥಿ ಘೋಷಣೆಯಾಗುವ ಮೊದಲು ಇರುವ ಅಸಮಾಧಾನ, ಘೋಷಣೆಯಾದ ನಂತರ ಇರುವುದಿಲ್ಲ. ಇದ್ದರೂ ಪಕ್ಷದ ಚಿಹ್ನೆಗಾದರೂ ಮತ ಹಾಕುತ್ತಾರೆ. ಅದೇ ಕಾರಣಕ್ಕೆ ಶೋಭಾ ಅವರು ತಮ್ಮ ಹೆಸರಿಗಿಂತಲೂ ಹೆಚ್ಚಾಗಿ ಪಕ್ಷದ ಹೆಸರು ಅದಕ್ಕಿಂತಲೂ ಹೆಚ್ಚು ಪ್ರಧಾನಿ ನರೇಂದ್ರ ಮೋದಿ ಹೆಸರನ್ನೇ ಜಪಿಸುತ್ತಿದ್ದಾರೆ. ಅಲ್ಲಿಗೆ ತಮ್ಮ ಪಕ್ಷದ ಅಸಮಾಧಾನಿಗಳ ಮತಗಳೂ ಮೋದಿಯ ಹೆಸರಿನಲ್ಲಿ ಶೋಭಾ ಅವರ ಬುಟ್ಟಿಯಲ್ಲಿ ಜಮೆ ಆಗುತ್ತವೆ. ಇದು ಬಿಜೆಪಿಗೆ ಬಹಳ ದೊಡ್ಡ ಪ್ಲಸ್ ಪಾಯಿಂಟ್.
ಜೆಡಿಎಸ್-ಕಾಂಗ್ರೆಸ್ ತೊಳಲಾಟ
ಆದರೆ ಇಲ್ಲಿನ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ್ದು ಹೇಳಲಾಗದ, ತಾಳಲಾಗದ ಸ್ಥಿತಿ. ಮೈತ್ರಿ ಒಪ್ಪಂದದಂತೆ ಈ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಆದರೆ ಸಮರ್ಥ ಅಭ್ಯರ್ಥಿಯೂ ಇಲ್ಲ-ನೆಲೆಯೂ ಇಲ್ಲ. ಕಾಂಗ್ರೆಸ್‌ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ದುಂಬಾಲು ಬಿದ್ದು ಜೆಡಿಎಸ್‌ನಿಂದ ಅಭ್ಯರ್ಥಿಯಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇದು ಮೂಲ ಮತ್ತು ಕಟ್ಟಾಕಾಂಗ್ರೆಸ್ ಕಾರ್ಯಕರ್ತರಿಗೆ ತೀವ್ರ ಮುಜುಗರಕ್ಕೆ ಕಾರಣವಾಗಿದ್ದು, ಅವರ ನಿಷ್ಕಿ್ರಯತೆಗೂ ಕಾರಣವಾಗಿದೆ. ಕಾಂಗ್ರೆಸ್‌ನ ಈ ‘ಹಸ್ತ’ಕ್ಷೇಪವೇ ಜೆಡಿಎಸ್‌ಗೆ ಬಹಳ ದೊಡ್ಡ ಮೈನಸ್ ಪಾಯಿಂಟ್.
8 ಕ್ಷೇತ್ರಗಳಲ್ಲಿ 7ರಲ್ಲಿ ಬಿಜೆಪಿ:
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಉಡುಪಿಯ 4 ಮತ್ತು ಚಿಕ್ಕಮಗಳೂರಿನ 4 ವಿಧಾನಸಭಾ ಕ್ಷೇತ್ರಗಳಿವೆ. ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯ ನಾಲ್ಕೂ ಕ್ಷೇತ್ರಗಳು ಬಿಜೆಪಿಯ ಪಾಲಾಗಿದ್ದರೆ, ಚಿಕ್ಕಮಗಳೂರಿನಲ್ಲಿ 3 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು 1ರಲ್ಲಿ ಕಾಂಗ್ರೆಸ್ ಗೆದ್ದಿದೆ. ಇದು ಬಿಜೆಪಿಗೆ ಧೈರ್ಯ ತುಂಬುತ್ತಿದೆ.
ಮೋದಿ ಅಲೆ v/s ರಾಹುಲ್ ಅಲೆ:
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ಅವರು ಉಡುಪಿ ಬಂದು ಭಾಷಣ ಮಾಡಿದ್ದರಿಂದ ಬೀಸಿದ್ದ ಭಾರೀ ಮೋದಿ ಅಲೆಗೆ ಕಾಂಗ್ರೆಸ್ ತರಗೆಲೆಯಾಗಿತ್ತು. ಈಗ ಮೋದಿ ಅಲೆ ಅಷ್ಟೇನೂ ಪ್ರಬಲವಾಗಿ ಬೀಸುತ್ತಿಲ್ಲ. ಆದರೆ ಮುಂದಿನ ವಾರ ಮೋದಿ ಅವರು ಪುನಃ ಕರಾವಳಿಗೆ ಬರುತ್ತಿದ್ದಾರೆ. ಇದು ಮತ್ತೊಮ್ಮೆ ಮೋದಿ ಅಲೆಯನ್ನು ಹುಟ್ಟುಹಾಕಲಿದೆ. ಅದಕ್ಕೆ ಪ್ರತಿಅಲೆ ಸೃಷ್ಟಿಸುವುದಕ್ಕೆ ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಕರೆಸುವುದಾಗಿ ಹೇಳಿದೆ.
ಮೂರು ಬಾರಿ ವಿಂಗಡಣೆಯಾದ ಕ್ಷೇತ್ರ
2004ರಲ್ಲಿ ಅಸ್ತಿತ್ವಕ್ಕೆ ಬಂದ ಮಲೆನಾಡು, ಅರೆ ಮಲೆನಾಡು, ಕರಾವಳಿಯನ್ನೊಳಗೊಂಡ ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಹಿಂದೆ ಉಡುಪಿ ಮತ್ತು ಚಿಕ್ಕಮಗಳೂರುಗಳೆಂಬ ಪ್ರತ್ಯೇಕ ಕ್ಷೇತ್ರಗಳಾಗಿದ್ದವು. ಚಿಕ್ಕಮಗಳೂರು ಕ್ಷೇತ್ರವು 1951ರಲ್ಲಿ ಹಾಸನ- ಚಿಕ್ಕಮಗಳೂರು ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. 67ರಲ್ಲಿ ಚಿಕ್ಕಮಗಳೂರು ಕ್ಷೇತ್ರವಾಯಿತು. ಈ ಕ್ಷೇತ್ರದಲ್ಲಿ ಒಟ್ಟು 11 ಬಾರಿ ಚುನಾವಣೆಗಳು ನಡೆದು, 6 ಬಾರಿ ಕಾಂಗ್ರೆಸ್, 3 ಬಾರಿ ಬಿಜೆಪಿ, 1 ಬಾರಿ ಪ್ರಜಾ ಸೋಶಿಯಲಿಸ್ವ್ ಪಕ್ಷ ಮತ್ತು 1 ಬಾರಿ ಜನತಾದಳಗಳೂ ಗೆದ್ದಿವೆ.
ಉಡುಪಿ ಕ್ಷೇತ್ರವು 1951ರಲ್ಲಿ ಸೌತ್ ಕೆನರಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. 57ರ ಪುನರ್ವಿಂಡಗಣೆಯಲ್ಲಿ ಉಡುಪಿ ಕ್ಷೇತ್ರವಾಯಿತು. ಇಲ್ಲಿ ಒಟ್ಟು 14 ಚುನಾವಣೆಗಳು ನಡೆದಿವೆ. ಅವುಗಳಲ್ಲಿ 11 ಬಾರಿ ಕಾಂಗ್ರೆಸ್ ಪಕ್ಷ, 2 ಬಾರಿ ಬಿಜೆಪಿ, 1 ಬಾರಿ ಸ್ವತಂತ್ರ ಪಾರ್ಟಿಗಳು ಗೆದ್ದು ಬಂದಿವೆ. 2004ರ ಪುನರ್ವಿಂಗಡಣೆಯ ನಂತರ ಚಿಕ್ಕಮಗಳೂರಿನ 4 ಮತ್ತು ಉಡುಪಿಯ 4 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರವನ್ನು ಸೃಷ್ಟಿಸಲಾಯಿತು. ನಂತರ 1 ಉಪಚುನಾವಣೆಯೂ ಸೇರಿ 3 ಚುನಾವಣೆಗಳು ನಡೆದಿವೆ. 2 ಬಾರಿ ಬಿಜೆಪಿ ಮತ್ತು 1 ಬಾರಿ ಕಾಂಗ್ರೆಸ್ ಗೆದ್ದಿವೆ.
2014ರ ಫಲಿತಾಂಶ
ಶೋಭಾ ಕರಂದ್ಲಾಜೆ (ಬಿಜೆಪಿ) - 5,81,168
ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್) - 3,99,525
ಅಂತರ - 1,81,643
12 ಮಂದಿ ಕಣದಲ್ಲಿ
ಶೋಭಾ ಕರಂದ್ಲಾಜೆ (ಬಿಜೆಪಿ), ಪ್ರಮೋದ್ ಮಧ್ವರಾಜ್ (ಜೆಡಿಎಸ್), ಪಿ.ಪರಮೇಶ್ವರ (ಬಹುಜನ ಸಮಾಜ ಪಕ್ಷ), ಪಿ.ಗೌತಮ್ ಪ್ರಭು (ಶಿವಸೇನೆ), ಎಂ.ಕೆ.ದಯಾನಂದ (ಪ್ರೌಟಿಸ್ವ್ ಸರ್ವ ಸಮಾಜ ಪಕ್ಷ,) ವಿಜಯಕುಮಾರ್ (ಸಿಪಿಐಎಂಎಲ್ ರೆಡ್ ಸ್ಟಾರ್), ಸುರೇಶ್ ಕುಂದರ್ (ಉತ್ತಮ ಪ್ರಜಾಕೀಯ ಪಾರ್ಟಿ) ಶೇಖರ ಹಾವಂಜೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ), ಪಕ್ಷೇತರ ಅಭ್ಯರ್ಥಿಗಳು- ಅಮೃತ್ ಶೆಣೈ ಪಿ., ಅಬ್ದುಲ್ ರೆಹಮಾನ್, ಎಂ.ಕೆ. ಗಣೇಶ್, ಕೆ.ಸಿ.ಪ್ರಕಾಶ್.
ಒಟ್ಟು ಮತದರಾರು - 14,98,016| ಮಹಿಳೆಯರು - 7,65,823| ಪುರುಷರು - 7,32,193
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...