ಮೈತ್ರಿ ರಾಜಕೀಯ - ಮಗನ ಗೆಲುವಿನ ಭರವಸೆ : ಸಿಎಂ ಹೇಳಿದ್ದೇನು?

By Web DeskFirst Published Apr 12, 2019, 10:51 AM IST
Highlights

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಇನ್ನು ಕೆಲ ದಿನವಷ್ಟೇ ಬಾಕಿ ಇದೆ. ಇತ್ತ ಸಿಎಂ ಕುಮಾರಸ್ವಾಮಿ ಮಗನನ್ನು ಮಂಡ್ಯ ಅಭ್ಯರ್ಥಿಯನ್ನಾಗಿಸಿ ರಾಜಕೀಯಕ್ಕೆ ಕರೆತಂದಿದ್ದಾರೆ. ಮಗನ ಗೆಲುವಿಗೆ ಶ್ರಮಿಸುತ್ತಿರುವ ಅವರು ಹಲವು ವಿಚಾರ ಹಂಚಿಕೊಂಡಿದ್ದಾರೆ. 

ಮಂಡ್ಯ :  ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಪುತ್ರ ನಿಖಿಲ್‌ ಕುಮಾರಸ್ವಾಮಿ ಗೆಲ್ಲಿಸಲು ಪಣ ತೊಟ್ಟಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಂಡ್ಯದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಅವರು ಸಂದರ್ಶನ ನೀಡಿ ಪುತ್ರನ ಪರ ಪ್ರಚಾರ, ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.

ಮಂಡ್ಯದಲ್ಲಿ ಕೆಲ ‘ಕೈ’ ನಾಯಕರು ಸುಮಲತಾಗೆ ಬೆಂಬಲ ನೀಡುತ್ತಿರುವುದು ಮೈತ್ರಿಗೆ ಮಳುವಾಗಲಿದೆಯಾ?

ಖಂಡಿತಾ ಇಲ್ಲ, ನಮಗೆ ಸಿಗುತ್ತಿರುವ ಜನ ಬೆಂಬಲ ನೋಡಿದರೆ ಮಂಡ್ಯದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಈಗಂತೂ ನಮ್ಮ ವಿಶ್ವಾಸ ಇಮ್ಮಡಿಯಾಗಿದೆ. ಕಾಂಗ್ರೆಸ್‌ನಲ್ಲಿ ಕೆಲವೇ ಕೆಲವು ನಾಯಕರು ಪಕ್ಷೇತರ ಅಭ್ಯರ್ಥಿ ಜೊತೆ ಸೇರಿ ಕೆಲಸ ಮಾಡುತ್ತಾರೆ ಎಂಬ ಸಂಗತಿ ನಮಗೆ ಗೊತ್ತಿದೆ. ಕಾಂಗ್ರೆಸ್‌ ಹೈಕಮಾಂಡ್‌ ಈಗಾಗಲೇ ಕೆಲವರ ವಿರುದ್ಧ ಕ್ರಮ ಕೈಗೊಂಡಿದೆ. ಇದು ಕಾಂಗ್ರೆಸ್‌ ಮೈತ್ರಿ ಧರ್ಮ ಪಾಲಿಸುತ್ತದೆ ಎಂಬುದರ ಸಂಕೇತವೂ ಆಗಿದೆ. ನಮ್ಮ ವಿರುದ್ಧ ಕೆಲಸ ಮಾಡಿದವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ನಾಯಕರು ಮುಂದೆ ನಿರ್ಧರಿಸುತ್ತಾರೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿಂದಾಗಿ ಇರುಸು ಮುರುಸು ಸನ್ನಿವೇಶಗಳೇ ಹೆಚ್ಚಾಗುತ್ತಿವೆ ಎಂದು ಅನಿಸುತ್ತಿಲ್ಲವೇ?

ಕೋಮುವಾದಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಅತ್ಯಂತ ಸೂಕ್ತ ನಿರ್ಧಾರ. ನಮಗೆ ಜೆಡಿಎಸ್‌ ಅಥವಾ ಕಾಂಗ್ರೆಸ್‌ ಬೇರೆಯಾಗಿ ಕಂಡಿಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡುವುದು ಹೇಗೆಂಬುದು ಅರಿವಾಗಿದೆ. ಕೋಮುವಾದವನ್ನು ಹಿಮ್ಮೆಟ್ಟಿಸುವ ತಂತ್ರಗಳ ಬಗ್ಗೆ ನಾವು ಅರಿತಿದ್ದೇವೆ. ಕಾಂಗ್ರೆಸ್‌ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಾ.ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌, ಡಿ.ಕೆ.ಶಿವಕುಮಾರ್‌ ಸೇರಿ ಹಲವು ನಾಯಕರು ಮಾಜಿ ಪ್ರಧಾನಿ ದೇವೇಗೌಡರ ಜೊತೆ ಸೇರಿಕೊಂಡು ಮೈತ್ರಿ ಭದ್ರಪಡಿಸಿದ್ದಾರೆ. ಕೆಲ ಸನ್ನಿವೇಶಗಳು ಈ ಚುನಾವಣೆ ಆರಂಭದಲ್ಲಿ ಇರುಸು ಮುರುಸಿನ ಸನ್ನಿವೇಶ ಹುಟ್ಟು ಹಾಕಿದ್ದವು. ಈಗ ಎಲ್ಲವೂ ಸರಿಯಾಗಿದೆ. ಮೈತ್ರಿ ಗಟ್ಟಿಯಾಗಿದೆ, ಸರಿಯಾದ ದಾರಿಯಲ್ಲಿ ಸಾಗಿದೆ. ನಾವು ಗುರಿ ಮುಟ್ಟೇ ತೀರುತ್ತೇವೆ.

ಮೈತ್ರಿಯಲ್ಲಿ ಸಾಕಷ್ಟುತೊಡಕಿತ್ತು. ಜೆಡಿಎಸ್‌ ಅಭ್ಯರ್ಥಿಗಳಿಗೆ ಒಳೇಟಿನ ಭೀತಿ ಇದೆ ಎಂಬ ಭಾವನೆ ಇದೆಯಲ್ವಾ?

ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಆರಂಭದಲ್ಲಿ ಕಾಂಗ್ರೆಸ್‌ನ ಕೆವಲ ನಾಯಕರು ಮುನಿಸಿಕೊಂಡಿದ್ದರು. ಆ ಪಕ್ಷದ ಹಿರಿಯ ನಾಯಕರ ಪ್ರಯತ್ನದ ಫಲವಾಗಿ ಆ ಎಲ್ಲವೂ ಈಗ ಉಪಶಮನವಾಗಿದೆ. ಈಗ ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಅಭೂತಪೂರ್ವ ಗೆಲುವು ಸಾಧಿಸುವ ವಿಶ್ವಾಸವಿದೆ. ಸಂಸದ ಮುದ್ದಹನುಮೇಗೌಡ, ಕೆ.ಎನ್‌.ರಾಜಣ್ಣ ಸೇರಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್‌ ನಾಯಕರು ಪರಮೇಶ್ವರ್‌ ಜೊತೆಗೂಡಿ ಮಾಜಿ ಪ್ರಧಾನಿ ಗೆಲ್ಲಿಸಲು ಪಣ ತೊಟ್ಟು ಒಂದೇ ವೇದಿಕೆಯಲ್ಲಿ ಪ್ರಚಾರ ಮಾಡುತ್ತಿರುವುದು ಮೈತ್ರಿಗೆ ಸಂದ ಜಯವಲ್ಲವೇ? ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆಯಿದಾಗಿ ಕನಿಷ್ಠ 20 ರಿಂದ 22 ಸ್ಥಾನಗಳನ್ನು ಗೆಲ್ಲುವ ಅದಮ್ಯ ನಂಬಿಕೆ ನಮಗಿದೆ.

ಮೋದಿ ಹಿಂದುತ್ವ ಜಾತ್ಯತೀತ ಪಕ್ಷಗಳಿಗೆ ಕಗ್ಗಂಟಾಗುವ ಸಾಧ್ಯತೆ ಇದೆಯೇ?

ದೇಶದ ಪ್ರತಿ ಕ್ಷೇತ್ರದಲ್ಲೂ ಹಿಂದುತ್ವ ಪ್ರತಿಪಾದಿಸಿ, ಹಿಂದುತ್ವದ ಬೀಜ ಬಿತ್ತಿ ಲಾಭ ಪಡೆಯುವ ಪ್ರಯತ್ನ ಮಾಡುತ್ತಾರೆ ಮೋದಿ. ಈ ತಂತ್ರಕ್ಕೆ ಪ್ರತಿಬಾರಿಯೂ ಯಶಸ್ಸು ಸಿಗುವುದಿಲ್ಲ. ಉದಾಹರಣೆಗೆ ನಮ್ಮ ರಾಜ್ಯದ ಎಲ್ಲಾ ಪಕ್ಷಗಳ ನಾಯಕರು ಬಹುತೇಕ ಹಿಂದುಗಳೇ ಆಗಿದ್ದಾರೆ. ಆದರೂ ಅಲ್ಪಸಂಖ್ಯಾತರು, ಹಿಂದುಳಿದವರು, ಬಡವರು ಎಲ್ಲರನ್ನೂ ನಾವು ಜೊತೆಯಾಗಿ ಕರೆದುಕೊಂಡು ಹೋಗುತ್ತೇವೆ. ಹಿಂದುತ್ವ ಎಂದರೆ ಅದು ಜಾತಿಯಲ್ಲ, ಧರ್ಮವೂ ಅಲ್ಲ. ಬದಲಾಗಿ ಅದೊಂದು ಮಾನವೀಯ ಮತ್ತು ವಿಶ್ವಮಾನವತ್ವದ ನೆಲೆಗಟ್ಟು. ಅದನ್ನು ಅರಿತು ನಾವು ರಾಜಕಾರಣ ಮಾಡಬೇಕಿದೆ. ಅದು ಬಿಟ್ಟು ಮೋದಿ ಹಿಂದುತ್ವದ ಬೀಜ ಬಿತ್ತುತ್ತಾ ಹೋದರೆ ದೇಶದ ಭವಿಷ್ಯಕ್ಕೆ ಗಂಡಾಂತರ ಕಾಡಲಿದೆ.

ದೇಶದಲ್ಲಿ ಮೊದಲ ಹಂತದ ಮತದಾನ ಪೂರ್ಣಗೊಂಡಿದೆ, ಸಮೀಕ್ಷೆಗಳು ನಿಜವಾಗಬಹುದಾ?

ಚುನಾವಣೆಗಳಲ್ಲಿ ಸಮೀಕ್ಷೆಗಳ ಲೆಕ್ಕಾಚಾರವೇ ಬೇರೆ. ಜನರ ತೀರ್ಪು ಮತ್ತು ಅಭಿಪ್ರಾಯಗಳೇ ಬೇರೆæ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ನಾವು ಜಾತ್ಯತೀತ ತತ್ವದ ಮೇಲೆ ಬಲಿಷ್ಠ ರಾಷ್ಟ್ರ ನಿರ್ಮಿಸಬೇಕು. ಸಮನ್ವಯ, ಸಹಬಾಳ್ವೆ ಜೊತೆಗೆ ಶಾಂತಿ ಸೌಹಾರ್ದಯುತವಾಗಿ ಬದುಕುವ ಅವಕಾಶವನ್ನು ದೇಶದ ಎಲ್ಲರಿಗೂ ಕಲ್ಪಿಸಿಕೊಡಬೇಕು ಎಂಬ ಆಶಯ ನಮ್ಮದು. ಈ ಕಾರಣಕ್ಕಾಗಿ ಜಾತ್ಯತೀತ ಶಕ್ತಿಗಳು ಒಂದಾಗಿ ಕೆಲಸ ಮಾಡಬೇಕೆಂದು ಹೋರಾಟ ಮಾಡುತ್ತಿದ್ದೇವೆ. ನಮ್ಮ ದೇಶಕ್ಕೆ ಕೋಮುವಾದಿ ಬಿಜೆಪಿ ಅಥವಾ ಪ್ರಧಾನಿ ಮೋದಿ ಅನಿವಾರ್ಯವಲ್ಲ. ಪರ್ಯಾಯವಾಗಿ ಜಾತ್ಯತೀತ ಶಕ್ತಿಗಳು ದೇಶವನ್ನು ಮುನ್ನೆಡೆಸುವ ಜವಾಬ್ದಾರಿ ಹೊರಲು ಸಿದ್ಧವಾಗಿದ್ದೇವೆ ಎಂಬುದನ್ನು ತೋರಿಸಿ ಕೊಡುತ್ತೇವೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಬೆಂಬಲಿಗರು ಕಲ್ಲು ತೂರಿ ಗಲಾಟೆ ಮಾಡುತ್ತಾರೆಂದು ಹೇಗೆ ಹೇಳುತ್ತೀರಿ?

ಮಂಡ್ಯದಲ್ಲಿ ಜೆಡಿಎಸ್‌ ಕಾರ್ಯಕರ್ತರಿಗೆ ಕೆಟ್ಟಹೆಸರು ತರುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಏ.16 ರಂದು ನಡೆಯುವ ಸಭೆಗಳಲ್ಲಿ ಕಲ್ಲು ಹೊಡೆಸುವ ತಂತ್ರವನ್ನು ವಿರೋಧಿಗಳು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇಂಥ ಕೃತ್ಯಗಳನ್ನು ಮಾಡಿ ಜೆಡಿಎಸ್‌ ಕಾರ್ಯಕರ್ತರನ್ನು ಕೆಣಕಿ ಗಲಾಟೆ ಮಾಡುವ ಹುನ್ನಾರ ನಡೆದಿದೆ. ಈ ಕೃತ್ಯಗಳಿಗೆ ನಾವು ಹೆದರಲ್ಲ. ನಾವು ಶಾಂತಿ ಪ್ರಿಯರು. ಚುನಾವಣಾ ನೀತಿ ಸಂಹಿತೆ ಚಾಚೂ ತಪ್ಪದೆ ಪಾಲಿಸುತ್ತೇವೆ. ದುಷ್ಕೃತ್ಯಗಳನ್ನು ನಡೆಸಿದರೆ ಖಂಡಿತ ಕಾನೂನು ಕ್ರಮ ಕೈಗೊಳ್ಳುತ್ತೇವೆ.

ಮಂಡ್ಯದಲ್ಲಿ ನಿಮ್ಮ ಬಿರುಸಿನ ಪ್ರಚಾರಕ್ಕೆ ಪ್ರತಿಕ್ರಿಯೆ ಹೇಗಿತ್ತು?

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾನು ಸತತ 2 ದಿನ ಪ್ರವಾಸ ಮಾಡಿದ್ದೇನೆ. ಇಲ್ಲಿನ ಜನರಿಗೆ ದೇವೇಗೌಡರು, ಕುಮಾರಸ್ವಾಮಿ ಎಂದರೆ ವಿಪರೀತ ಅಭಿಮಾನ, ಪ್ರೀತಿ ಇದೆ. ನಮ್ಮನ್ನು ಮನೆ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅದಕ್ಕಾಗಿ ಎಷ್ಟುಕೃತಜ್ಞತೆ ಹೇಳಿದರೂ ಸಾಲದು. ಪ್ರಚಾರದ ವೇಳೆ ಜನ ತೋರಿಸುವ ಅಭಿಮಾನಕ್ಕೆ ನಾನು ಹೇಗೆ ಪ್ರತಿ ಉಪಕಾರ ಮಾಡಲಿ ಎಂದು ಹೇಳಲೂ ಸಾಧ್ಯವಾಗದ ಸ್ಥಿತಿ ಇದೆ.

ವರದಿ :  ಕೆ.ಎನ್‌.ರವಿ

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!