ಮೋದಿಗೆ ಜೈ ಎಂದ ಜೆಡಿಎಸ್ ಮುಖಂಡರು

Published : Apr 06, 2019, 09:58 AM IST
ಮೋದಿಗೆ ಜೈ ಎಂದ ಜೆಡಿಎಸ್ ಮುಖಂಡರು

ಸಾರಾಂಶ

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ ಪಕ್ಷಗಳ ಪ್ರಚಾರ ಭರ್ಜರಿಯಾಗಿದೆ. ಮೈಸೂರಲ್ಲಿ ಜೆಡಿಎಸ್ ಸಭೆ ನಡೆಯುತ್ತಿದ್ದ ವೇಳೆ ಮುಖಂಡರು ಮೋದಿಗೆ ಜೈಕಾರ ಕೂಗಿದ್ದಾರೆ. 

ಮೈಸೂರು: ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಪಕ್ಷಗಳ ನಡುವಿನ ಹೊಂದಾಣಿಕೆ ಸರಿದಾರಿಗೆ ಬರಲು ತಿಣುಕಾಡುವ ಸ್ಥಿತಿ ನಿರ್ಮಾಣವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಜತೆಗಿನ ಸಂಧಾನದ ಬಳಿಕವೂ ಸಮಸ್ಯೆ ಬಗೆಹರಿದಂತಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನೀಡುವ ಸಂಬಂಧ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಶುಕ್ರವಾರ ಕರೆದಿದ್ದ ಜೆಡಿಎಸ್ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಮೋದಿಗೆ ಜೈಕಾರ ಕೂಗಿದ ಪ್ರಸಂಗಕ್ಕೂ ಸಾಕ್ಷಿಯಾಯಿತು. 

ಹುಣಸೂರು ರಸ್ತೆಯಲ್ಲಿರುವ ಹೋಟೆಲೊಂದರಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಶಾಸಕರು, ತಾಲೂಕು ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಸಚಿವ ಜಿ.ಟಿ.ದೇವೇಗೌಡ, ಸಚಿವ ಸಾ.ರಾ. ಮಹೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸೇರಿ ಪ್ರಮುಖರು ಭಾಗವಹಿಸಿದ್ದರು.

ಆರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಸಚಿವ ಸಾ.ರಾ. ಮಹೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿ ಮೈತ್ರಿ ಧರ್ಮ ಪರಿಪಾಲನೆಗೆ ಕರೆ ನೀಡಿದರು. ನಂತರ ಸಚಿವ ಜಿಟಿಡಿ ಮಾತನಾಡಲು ಮುಂದಾದಾಗ ಸಭೆಯಲ್ಲಿ ಹಿಂದೆ ಕುಳಿತವರು ಮೈತ್ರಿ ಧರ್ಮದ ವಿರುದ್ಧ ಅಪಸ್ವರ ಎತ್ತಿದರು. ‘ನಾವು ಕಾಂಗ್ರೆಸ್ ಗೆ ಮತ ಹಾಕಲ್ಲ. ನರೇಂದ್ರ ಮೋದಿಗೆ ಜೈ, ಬಿಜೆಪಿಗೆ ಜೈ’ ಎಂದು ಕೂಗಿದರು. 

ತಕ್ಷಣ ವೇದಿಕೆ ಇಳಿದು ಮುಖಂಡರ ಬಳಿಗೆ ಹೋದ ಸಚಿವ ಜಿಟಿಡಿ ಮುಖಂಡರನ್ನು ಸಮಾಧಾನಪಡಿಸಿ ಮಾತು ಮುಂದುವರಿಸಿದರು. ಮೈತ್ರಿ ಪಕ್ಷದ ಪರ ಕೆಲಸ ಮಾಡುವುದಾಗಿ ವಾಗ್ದಾನ ಪಡೆದು ಸಭೆ ಅಂತ್ಯಗೊಳಿಸಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!