ಸಂಚಲನ ಸೃಷ್ಟಿಸಿದ ಜಿ.ಟಿ. ದೇವೇಗೌಡ ಹೇಳಿಕೆ

By Web DeskFirst Published Apr 6, 2019, 9:36 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಸಚಿವ ಜಿ.ಟಿ. ದೇವೇಗೌಡ ಹೇಳಿಕೆಯೊಂದು ಸಂಚಲನ ಮೂಡಿಸಿದೆ. 

ಮೈಸೂರು :  ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಸೋತರೆ ನಾವು ಹೊಣೆಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. ತಮ್ಮ ಹೇಳಿಕೆ ಮೈತ್ರಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸಂದೇಶ ರವಾನಿಸುತ್ತಿದ್ದಂತೆ ಆ ರೀತಿ ಹೇಳಿಯೇ ಇಲ್ಲ ಎಂದು ಸಚಿವ ಸ್ಪಷ್ಟನೆ ನೀಡಿದ್ದಾರೆ.

ಮೈತ್ರಿಕೂಟ ಅಭ್ಯರ್ಥಿ ಪರ ಪ್ರಚಾರ ನಡೆಸುವ ಸಂಬಂಧ ಉಂಟಾಗಿದ್ದ ಗೊಂದಲ ಬಗೆಹರಿಸಲು ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ ಅವರನ್ನು, ವಿಜಯಶಂಕರ್‌ ಸೋತರೆ ನೈತಿಕ ಹೊಣೆ ಹೊರುವಿರಾ? ಎಂದು ಕೇಳಿದಾಗ ಈ ಪ್ರತಿಕ್ರಿಯೆ ನೀಡಿದರು.

‘‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಎಚ್‌.ವಿಶ್ವನಾಥ್‌(2014ರ ಚುನಾವಣೆ) ಸೋತರು. ಅವರು ಹೊಣೆಗಾರರಾದರೆ? ಚುನಾವಣೆಯಲ್ಲಿ ಸೋಲು-ಗೆಲುವಿಗೆ ಯಾರೂ ಹೊಣೆಯಾಗುವುದಿಲ್ಲ. ಅದು ಮತದಾರರ ಕೈಯಲ್ಲಿದೆ. ಹೀಗಾಗಿ ನಾನಾಗಲಿ, ಸಚಿವ ಸಾ.ರಾ.ಮಹೇಶ್‌ ಆಗಲಿ ಸೋಲಿಗೆ ಹೊಣೆಯಲ್ಲ’’ ಎಂದರು.

ಆ ರೀತಿ ಹೇಳಿಯೇ ಇಲ್ಲ: ‘ವಿಜಯಶಂಕರ್‌ ಸೋತರೆ ನಾನು ಹೊಣೆಯಲ್ಲ’ ಎಂಬ ತಮ್ಮ ಹೇಳಿಕೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿದ ಜಿಟಿಡಿ, ನಾನು ಆ ರೀತಿ ಹೇಳಿಯೇ ಇಲ್ಲ. ಎಲ್ಲೂ ಹೇಳುವುದಿಲ್ಲ. ಮೈತ್ರಿ ಧರ್ಮ ಪಾಲಿಸಿ ಮೈಸೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಗೊಂದಲ ನಿವಾರಿಸಿಕೊಂಡು ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಕ್ಕಾಗಿಯೇ ಈ ಸಭೆ ನಡೆಸಲಾಗಿದೆ. ಆದರೂ ಗೊಂದಲ ಮೂಡಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

click me!