ಬಾಲಾಕೋಟ್ ವಿಷಯ ಬೇಡ, ಚುನಾವಣೆ ಗೆಲ್ಲಲು ಬಿಜೆಪಿಗೆ ಆರ್‌ಎಸ್‌ಎಸ್‌ ಹೊಸ ಸೂತ್ರ!

By Web DeskFirst Published Apr 22, 2019, 9:34 AM IST
Highlights

ಚುನಾವಣೆ ಗೆಲ್ಲಲು ಬಿಜೆಪಿಗೆ ಆರ್‌ಎಸ್‌ಎಸ್‌ ಹೊಸ ಸೂತ್ರ!| ಬಾಲಾಕೋಟ್‌ ದಾಳಿಯಂತಹ ವಿಷಯಗಳಿಗೆ ತಳಮಟ್ಟದಲ್ಲಿ ಹೆಚ್ಚು ಪ್ರಭಾವ ಇಲ್ಲ| ಸ್ಥಳೀಯ ವಿಷಯಗಳ ಬಗ್ಗೆ ಪ್ರಚಾರ ಮಾಡಲು ಬಿಜೆಪಿಗೆ ಸಂಘ ಸೂಚನೆ?

ನವದೆಹಲಿ[ಏ.22]: ಬಾಲಾಕೋಟ್‌ ಏರ್‌ಸ್ಟೆ್ರೖಕ್‌ ಹಾಗೂ ಮೋದಿ ಸರ್ಕಾರದ ಜನಪ್ರಿಯತೆಯಂತಹ ವಿಷಯಗಳಿಗೆ ತಳಮಟ್ಟದಲ್ಲಿ ಹೆಚ್ಚು ಜನರನ್ನು ಆಕರ್ಷಿಸುವ ಶಕ್ತಿಯಿಲ್ಲ. ಹೀಗಾಗಿ ಚುನಾವಣಾ ಪ್ರಚಾರದಲ್ಲಿ ಸ್ಥಳೀಯ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಿ ಎಂದು ಬಿಜೆಪಿ ಅಭ್ಯರ್ಥಿಗಳಿಗೆ ಆರ್‌ಎಸ್‌ಎಸ್‌ ಸೂಚನೆ ನೀಡಿದೆಯೆಂದು ಹೇಳಲಾಗಿದೆ.

ಜನರಿಗೆ ಅವರ ಸಮಸ್ಯೆಗಳು ಹಾಗೂ ಸ್ಥಳೀಯ ವಿಷಯಗಳು ಹೆಚ್ಚು ಮುಖ್ಯವೆನಿಸುತ್ತವೆ. ಹೀಗಾಗಿ ಕೇವಲ ರಾಷ್ಟ್ರೀಯ ವಿಷಯಗಳಿಗೆ ಒತ್ತು ನೀಡುವುದಕ್ಕಿಂತ ಸ್ಥಳೀಯ ವಿಷಯಗಳಿಗೆ ಆದ್ಯತೆ ನೀಡಬೇಕು. ಬಿಜೆಪಿಯಲ್ಲಿ ಮೋದಿ ಹಾಗೂ ಅಮಿತ್‌ ಶಾ ಅವರನ್ನು ಬಿಟ್ಟರೆ ಶಕ್ತಿಶಾಲಿ ಮಾತುಗಾರರಿಲ್ಲ. ಹೀಗಾಗಿ ಅಭ್ಯರ್ಥಿಗಳು ತಮ್ಮ ಮಾತುಗಾರಿಕೆಯನ್ನು ಸುಧಾರಿಸಿಕೊಳ್ಳಬೇಕು. ಜೊತೆಗೆ ಜನರನ್ನು ಸೆಳೆಯುವ ಶಕ್ತಿಯುಳ್ಳ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತಹ ನಾಯಕರನ್ನು ಕರೆಸಿ ಪ್ರಚಾರ ಮಾಡಿಸಬೇಕು. ತನ್ಮೂಲಕ ಪ್ರಚಾರದ ರಾರ‍ಯಲಿಗಳಿಗೆ ಇನ್ನಷ್ಟುಶಕ್ತಿ ತುಂಬಬೇಕು ಎಂದು ಬಿಜೆಪಿ ಅಭ್ಯರ್ಥಿಗಳಿಗೆ ಆರ್‌ಎಸ್‌ಎಸ್‌ ಹೇಳಿದೆ ಎಂದು ಮೂಲಗಳು ತಿಳಿಸಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಇದೇ ವೇಳೆ, ಇಷ್ಟುದಿನ ಮತದಾನದ ಪ್ರಮಾಣ ಹೆಚ್ಚಿಸುವುದಕ್ಕೆ ಆದ್ಯತೆ ನೀಡಿ ‘ಮೂರನೇ ವ್ಯಕ್ತಿಯಂತೆ’ ಬಿಜೆಪಿ ಪರ ಪರೋಕ್ಷ ಪ್ರಚಾರ ಮಾಡುತ್ತಿದ್ದ ಆರ್‌ಎಸ್‌ಎಸ್‌ ಈಗ ಆ ನಿಲುವು ಬದಲಿಸಿಕೊಂಡು ಬಿಜೆಪಿಗೆ ನೇರವಾಗಿ ಬೆಂಬಲ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಚಾರ ನಡೆಸುತ್ತಿದೆ ಎಂದೂ ಮೂಲಗಳು ತಿಳಿಸಿವೆ.

ಒಟ್ಟಾರೆ ಮತದಾನದ ಪ್ರಮಾಣ ಹೆಚ್ಚಿದರೆ ಅದರಿಂದ ಬಿಜೆಪಿಗೆ ಲಾಭ ಎಂಬ ದೃಷ್ಟಿಯಿಂದ ಆರ್‌ಎಸ್‌ಎಸ್‌ ಕಾರ್ಯಕರ್ತರು ಜನರ ಬಳಿಗೆ ತೆರಳಿ ಹೆಚ್ಚೆಚ್ಚು ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಆದರೆ, ಅದರಿಂದ ಈ ಬಾರಿಯ ಮೊದಲೆರಡು ಹಂತದ ಮತದಾನದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ. 2014ರ ಚುನಾವಣೆಯಲ್ಲಿ ಆದಷ್ಟೇ ಮತದಾನ ಸ್ವಲ್ಪ ಹೆಚ್ಚುಕಮ್ಮಿ ಈ ಬಾರಿಯೂ ಆಗಿದೆ. ಹೀಗಾಗಿ, ಸಂಘದ ಸ್ವಯಂಸೇವಕರು ಈಗ ವೈದ್ಯರು, ಶಿಕ್ಷಣ ತಜ್ಞರು ಹಾಗೂ ವಕೀಲರಂತಹ ಪ್ರಮುಖ ವ್ಯಕ್ತಿಗಳ ಬಳಿಗೆ ನೇರವಾಗಿ ಹೋಗಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಏನೇನು ಮಾಡಬೇಕು?

- ರಾಷ್ಟ್ರೀಯ ವಿಚಾರಗಳ ಬಗ್ಗೆ ಹೆಚ್ಚು ಪ್ರಸ್ತಾಪ ಬೇಡ

- ಪ್ರಚಾರದ ವೇಳೆ ಸ್ಥಳೀಯ ವಿಷಯಕ್ಕೆ ಆದ್ಯತೆ ನೀಡಿ

- ಅಭ್ಯರ್ಥಿಗಳು ಆಕರ್ಷಕವಾಗಿ ಮಾತನಾಡಬೇಕು

- ಯೋಗಿ ರೀತಿ ನಾಯಕರ ಕರೆಸಿ ಭಾಷಣ ಮಾಡಿಸಬೇಕು

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

click me!