ನಗರದ ನೀರಿನ ಸಮಸ್ಯೆಗೆ ಮೇಕೇದಾಟು ಅಣೆಕಟ್ಟು ಪರಿಹಾರ

By Web DeskFirst Published Apr 15, 2019, 8:42 AM IST
Highlights

ಲೋಕಮಹಾ ಸಮರಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ ಉಳಿದಿದೆ. ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಇದೆ ವೇಳೆ ಬೆಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಬಿಕೆ ಹರಿಪ್ರಸಾದ್ ಮಾತುಗಳು ಇಲ್ಲಿವೆ. 

ಬೆಂಗಳೂರು :  ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪರಿಪೂರ್ಣ ಬಹುಮತ ಗಳಿಸಿದರೆ ಆಗ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಮಂತ್ರಿಯಾಗುತ್ತಾರೆ. ಮಹಾಘಟಬಂಧನ್‌ ಅಧಿಕಾರಕ್ಕೆ ಬಂದರೆ, ಘಟಬಂಧನ್‌ನ ಎಲ್ಲಾ ಸದಸ್ಯರು ಸೇರಿ ಪ್ರಧಾನಮಂತ್ರಿ ಯಾರಾಗಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌ ಹೇಳಿದರು.

ಭಾನುವಾರ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್‌ನ ಪ್ರಧಾನ ಮಂತ್ರಿ ಅಭ್ಯರ್ಥಿ ರಾಹುಲ್‌ಗಾಂಧಿ. ಬೇರೆ ಬೇರೆ ಪಕ್ಷಗಳಲ್ಲಿ ಅವರವರ ನಾಯಕರು ಇರಬಹುದು. ಅದರ ಬಗ್ಗೆ ನಾನು ಟಿಪ್ಪಣಿ ಮಾಡಲು ಹೋಗುವುದಿಲ್ಲ. ಮಹಾಘಟ ಬಂಧನ್‌ ಅಧಿಕಾರಕ್ಕೆ ಬಂದರೆ ಅಲ್ಲಿನ ಸದಸ್ಯರೆಲ್ಲ ಸೇರಿ ಪ್ರಧಾನ ಮಂತ್ರಿ ಯಾರಾಗಬೇಕು ಎಂದು ತೀರ್ಮಾನ ಕೈಗೊಳ್ಳುತ್ತಾರೆ. ಯಾರಿಗೆ ಹೆಚ್ಚು ಬೆಂಬಲ ಸಿಗುತ್ತದೆಯೋ ಅವರು ಪ್ರಧಾನಿ ಆಗಲಿದ್ದು, ಅದು ರಾಹುಲ್‌ಗಾಂಧಿ ಇರಬಹುದು, ಮಮತಾ ಬ್ಯಾನರ್ಜಿ, ಮಾಯಾವತಿ ಅಥವಾ ಚಂದ್ರಬಾಬು ನಾಯ್ಡು ಇರಬಹುದು. ಮತ್ತೊಮ್ಮೆ ದೇವೇಗೌಡರು ಕೂಡ ಪ್ರಧಾನಿಯಾಗಬಹುದು. ಅದು ನಾಯಕರ ತೀರ್ಮಾನಕ್ಕೆ ಬಿಟ್ಟವಿಚಾರ ಎಂದು ತಿಳಿಸಿದರು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದರ ಪರಿಹಾರಕ್ಕಾಗಿ ಮೇಕೇದಾಟು ಬಳಿ ನಿರ್ಮಿಸಲು ಚಿಂತಿಸಲಾಗಿರುವ ಅಣೆಕಟ್ಟಿನಿಂದ ನೀರು ತರುವುದು ಸೂಕ್ತ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಅಲ್ಲದೆ, ದಿನೇ ದಿನೇ ಬೆಳೆಯತ್ತಿರುವ ಬೆಂಗಳೂರು ನಗರದ ಕಸದ ನಿರ್ವಹಣೆಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಬೆಂಗಳೂರು ನಗರ ಈಗ ಅವಕಾಶಗಳ ನಗರವಾಗಿದೆ. ಇದರ ಸೌಂದರ್ಯಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ. ಜಿಎಸ್‌ಟಿ ಹಾಗೂ ನೋಟು ಅಮಾನ್ಯೀಕರಣದಿಂದಾಗಿ ಹೆಚ್ಚು ತೊಂದರೆ ಆಗಿರುವದು ದಕ್ಷಿಣ ಕ್ಷೇತ್ರಕ್ಕೆ. ಅದರ ಸುಧಾರಣೆಗೂ ಒತ್ತು ನೀಡಲಿದ್ದೇನೆ ಎಂದರು.

ಹೋರಾಟಕ್ಕೆ ಸದಾಸಿದ್ಧ

ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಬಿಜೆಪಿ ಟಿಕೆಟ್‌ ಕೊಡದಿರುವುದು ಬಿಜೆಪಿ ಆಂತರಿಕ ರಾಜಕಾರಣ. ಅದರ ಬಗ್ಗೆ ಟಿಪ್ಪಣಿ ಮಾಡಲು ಹೋಗುವುದಿಲ್ಲ. ನನ್ನನ್ನು ಕಾಂಗ್ರೆಸ್‌ ಪಕ್ಷ ಚುನಾವಣೆ ಕಣಕ್ಕೆ ಇಳಿಸಿದ್ದು, ನರೇಂದ್ರ ಮೋದಿಯವರು ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ. ನಾನು ಸ್ಪರ್ಧಿಸುತ್ತಿರುವುದು ಬಿಜೆಪಿ ವಿರುದ್ಧವೇ ಹೊರತು ತೇಜಸ್ವಿ ವಿರುದ್ಧವಲ್ಲ. ತೇಜಸ್ವಿನಿ ಅನಂತಕುಮಾರ್‌ ಸ್ಪರ್ಧಿಸದಿರುವುದು ನನಗೆ ಅನುಕೂಲವೂ ಅಲ್ಲ, ಅನಾನುಕೂಲವು ಅಲ್ಲ. ನನ್ನ ಜೀವನದುದ್ದಕ್ಕೂ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇನೆ. ಹಿಂದೆಯೂ ಮಾಡಿದ್ದೆ, ಮುಂದೆಯೂ ಹೋರಾಟ ಮಾಡುತ್ತೇನೆ. ಈಗಲು ಮಾಡುತ್ತಿದ್ದೇನೆ ಎಂದು ಹೇಳಿದರು.

ಹಿಂದು ಧರ್ಮ ಪಾಲನೆ

ಹಿಂದುತ್ವಕ್ಕೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದುತ್ವ ಎನ್ನುವುದು ನಾಥೋರಾಮ್‌ ಗೋಡ್ಸೆ, ಗೋಲ್ವಕರ್‌, ಸಾವರ್ಕರ್‌ ಅವರ ರಾಜಕೀಯ ಘೋಷಣೆ. ಹಿಂದೂ ಧರ್ಮ ಮಹಾತ್ಮಗಾಂಧಿ, ವಿವೇಕಾನಂದರು ಹೇಳುವ ಧರ್ಮ. ಅದರ ಪಾಲನೆ ನಾವು ಮಾಡುತ್ತೇವೆ. ಬಿಜೆಪಿಯ ಹಿಂದುತ್ವಕ್ಕೂ ಮತ್ತು ನಮ್ಮ ಹಿಂದೂ ಧರ್ಮ ಪಾಲನೆಗೂ ತುಂಬಾ ವ್ಯತ್ಯಾಸವಿದೆ ಎಂದು ತಿಳಿಸಿದರು.

ಭಿನ್ನಾಭಿಪ್ರಾಯವಿಲ್ಲ:

ನನಗು ಮತ್ತು ಜೆಡಿಎಸ್‌ ಸರ್ವೋಚ್ಛ ನಾಯಕ ದೇವೇಗೌಡರಿಗೂ ಒಳ್ಳೆಯ ಸಂಬಂಧವಿದೆ. ಈ ಹಿಂದೆ ರಾಜ್ಯಸಭೆ ಸದಸ್ಯನಾಗುವಾಗಲು ಅವರ ಆಶೀರ್ವಾದ ಪಡೆದಿದ್ದೆ. ಈಗಲು ಹಿರಿಯರಾದ ದೇವೇಗೌಡರ ಆಶೀರ್ವಾದ ಪಡೆದಿದ್ದೇನೆ. ಜೆಡಿಎಸ್‌ನ ಎಲ್ಲ ಮುಖಂಡರು ಮತ್ತು ಸದಸ್ಯರ ಬೆಂಬಲ ಪಡೆದಿದ್ದು, ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅವರು ಬೆಂಬಲಿಸಲಿದ್ದು, ಬೆಂಗಳೂರಿನ ಅಭಿವೃದ್ಧಿ ಸಹಕಾರ ನೀಡಲಿದ್ದಾರೆ ಎಂದರು.


ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧದ ಮೀಟೂ ಪ್ರಕರಣ ಅವರ ವೈಯಕ್ತಿಕ ವಿಚಾರ. ಅವರು ನನ್ನ ವಿರುದ್ಧ ಎಲ್ಲೂ ಏನೂ ಮಾತನಾಡಿಲ್ಲ. ನಾನು ಕೂಡ ಪ್ರಚಾರಕ್ಕೆ ಹೋದ ಜಾಗಗಳಲ್ಲಿ ತೇಜಸ್ವಿ ಕುರಿತು ಮಾತನಾಡಲು ಹೋಗಿಲ್ಲ. ಅಂತಹ ಆರೋಪ ಬಂದಿದ್ದರೆ ಕಾನೂನು ರೀತಿಯಲ್ಲಿ ಅದರ ಬಗ್ಗೆ ಯೋಚನೆ ಮಾಡಬೇಕು. ಅದಕ್ಕೆ ಉತ್ತರ ಕೊಡಬೇಕಾದದ್ದು ಭಾರತೀಯ ಜನತಾ ಪಾರ್ಟಿ, ಉತ್ತರ ತೆಗೆದುಕೊಳ್ಳಬೇಕಾದದ್ದು ಕಾಂಗ್ರೆಸ್‌ ಪಕ್ಷ.

-ಬಿ.ಕೆ. ಹರಿಪ್ರಸಾದ್‌, ಬೆಂ.ದ. ಲೋಕಸಭಾಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!