ತೇಜಸ್ವಿನಿ ಬಗ್ಗೆ BL ಸಂತೋಷ್ ಹೇಳಿಕೆಗೆ ಬಿಜೆಪಿಗರಿಂದಲೇ ಅಸಮಾಧಾನ

By Web DeskFirst Published Apr 15, 2019, 7:43 AM IST
Highlights

ಲೋಕಸಭಾ ಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್‌ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಬಗೆಗಿನ ಬಿ.ಎಲ್.ಸಂತೋಷ್ ಕುಮಾರ್ ಹೇಳಿಕೆಗೆ ಅರವಿಂದ್ ಲಿಂಬಾವಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು :  ಲೋಕಸಭಾ ಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್‌ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್‌ ನಿರಾಕರಿಸಿದ ಸಂಬಂಧ ಪಕ್ಷದ ರಾಷ್ಟ್ರೀಯ ಸಹಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ತುಂಬಾ ಕಠಿಣವಾಗಿ ನೀಡಿರುವ ಹೇಳಿಕೆ ಕುರಿತು ಆಂತರಿಕ ವಲಯದಲ್ಲಿ ಚರ್ಚೆ ನಡೆದಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್‌ ಲಿಂಬಾವಳಿ ತಿಳಿಸಿದ್ದಾರೆ.

ಭಾನುವಾರ ಬೆಂಗಳೂರು ಪ್ರೆಸ್‌ಕ್ಲಬ್‌ ಮತ್ತು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಂತೋಷ್‌ ಅವರ ಹೇಳಿಕೆಯು ಪಕ್ಷದ ವರಿಷ್ಠರ ಗಮನಕ್ಕೆ ಬಂದಿದೆ ಎಂದರು.

ಬಿಜೆಪಿಯು ಕಾರ್ಯಕರ್ತರ ತಳಹದಿ ಮೇಲೆ ಸ್ಥಾಪಿತವಾಗಿರುವ ಪಕ್ಷವಾಗಿದೆ. ವಂಶಾಡಳಿತವನ್ನು ಪಕ್ಷ ಪ್ರಬಲವಾಗಿ ವಿರೋಧಿಸುತ್ತದೆ. ಹೀಗಾಗಿ ಲೋಕಸಭಾ ಚುನಾವಣೆಗೆ ತಮ್ಮ ಪುತ್ರಿಯನ್ನು ಕಣಕ್ಕಿಳಿಸುವಂತೆ ಕೇಳಿಕೊಂಡರೂ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ನಯವಾಗಿ ನಿರಾಕರಿಸಿದರು. ಹಾಗೆಯೇ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಕೊಡದಂತೆ ಅಡ್ವಾಣಿ ಸಲಹೆ ನೀಡಿದ್ದರು. ಸಂಘಟನೆಗೆ ದುಡಿದ ಕಾರ್ಯಕರ್ತರಿಗೆ ಅವಕಾಶ ಕೊಡಬೇಕು ಎಂಬುದು ಪಕ್ಷದ ನಿಲುವಾಗಿದೆ ಎಂದು ತಿಳಿಸಿದರು.

ಇದೇ ನಿಲುವನ್ನು ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ನಿರಾಕರಿಸಿದ ವಿಚಾರದಲ್ಲಿ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಹೇಳುವಾಗ ಬಳಸಿದ ಪದ ಬಹಳ ಹಾರ್ಶ್ ಆಗಿದೆ. ಅವರು ವ್ಯಕ್ತಪಡಿಸಿದ ನಿಲುವು ಸರಿಯಾಗಿದೆ. ಆದರೆ ಪದ ಬಳಕೆ ತಪ್ಪಿದೆ. ಈ ಹೇಳಿಕೆಯು ಪಕ್ಷದ ಆಂತರಿಕ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಬುದ್ಧ ಸಂವಾದ ಕಾರ್ಯಕ್ರಮಗಳಿಗೆ ಮಾಧ್ಯಮಗಳಿಗೆ ಪ್ರವೇಶ ಇರುವುದಿಲ್ಲ. ಹಾಗಾಗಿ ಆ ಸಂವಾದದಲ್ಲಿ ಪಾಲ್ಗೊಂಡಿದ್ದ ಕೆಲವರು ಸಂತೋಷ್‌ ಅವರ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಹೇಳಿದರು.

ಕೆಲ ದಿನಗಳ ಹಿಂದೆ ಚಾಮರಾಜನಗರದಲ್ಲಿ ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡಿದ್ದ ಬಿ.ಎಲ್‌.ಸಂತೋಷ್‌, ವಂಶವಾಹಿ ಹಾಗೂ ಡಿಎನ್‌ಎ ಆಧಾರದಲ್ಲಿ ಟಿಕೆಟ್‌ ಕೊಡುತ್ತಾ ಹೋದರೆ ಪಾರ್ಟಿ ಮೆಂಬರ್‌ಶಿಪ್‌ಗೆ ಬೆಲೆ ಎಲ್ಲಿರುತ್ತದೆ? ಅನಂತಕುಮಾರ್‌ ಅವರಿಗೆ ಏನು ಕ್ರೆಡಿಟ್‌ ಕೊಡಬೇಕೋ ಅದನ್ನು ಕೊಡುತ್ತೇವೆ. ಆದರೆ, ಅದನ್ನೇ ಅವರ ಪತ್ನಿಗೂ ಕೊಡಬೇಕು ಅಂದರೆ ಹೇಗೆ ಎಂದು ಹೇಳಿದ್ದರು.

ಬಿಎಸ್‌ವೈ ಮುಂದಿನ ಸಿಎಂ:

ಲೋಕಸಭಾ ಚುನಾವಣೆ ಮುಗಿದ ಬಳಿಕ ಕರ್ನಾಟಕವೂ ಸೇರಿದಂತೆ ದೇಶದ ಇತರೆ ರಾಜ್ಯ ಘಟಕಗಳ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಡೆಯಬಹುದು. ಮೂರು ವರ್ಷ ಅವಧಿ ಪೂರೈಸಿದ ಬಳಿಕ ಅಧ್ಯಕ್ಷರ ಬದಲಾವಣೆ ಸಹಜವಾಗಿದೆ. ಈ ವಿಚಾರದಲ್ಲಿ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಇದೇ ವೇಳೆ ಅರವಿಂದ್‌ ಲಿಂಬಾವಳಿ ಮಾಹಿತಿ ನೀಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಡಿಯೂರಪ್ಪನವರು ಮುಂದೆ ಮುಖ್ಯಮಂತ್ರಿ ಪದವಿಗೇರಿದ ಬಳಿಕ ರಾಜ್ಯಾಧ್ಯಕ್ಷರ ವಿಚಾರ ಪ್ರಸ್ತಾಪವಾಗಲಿದೆ. ಆಗ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸದ್ಯ ನಾನು ಚುನಾವಣಾ ರೇಸ್‌ನಲ್ಲಿದ್ದೇನೆ. ನಮ್ಮ ಮುಂದೆ ಅಧ್ಯಕ್ಷರ ರೇಸ್‌ ಇಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.

ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರವಾಗಿ ಅಲೆ ಸೃಷ್ಟಿಯಾಗಿದೆ. ಅವರು ನಮ್ಮ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ಆಗಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಅವರ ಮುಖ ತೋರಿಸಿ ಮತ ಕೇಳುವುದರಲ್ಲಿ ತಪ್ಪೇನಿದೆ? ಹಾಲಿ ಸಂಸದರು ಕ್ಷೇತ್ರದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಸಹ ಮತ ಕೇಳುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲ. ರಾಜ್ಯದಲ್ಲಿ ಬಿಜೆಪಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ತಾನಾಗಿಯೇ ಪತನವಾಗಲಿದೆ. ಯಡಿಯೂರಪ್ಪ ಮುಂದೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಅರವಿಂದ ಲಿಂಬಾವಳಿ ಭವಿಷ್ಯ ನುಡಿದರು.

ಈಶ್ವರಪ್ಪ ಮಾತಿಗೂ ಬ್ರೇಕ್‌

ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಮಾತುಗಳಿಗೂ ಬ್ರೇಕ್‌ ಬೀಳಲಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್‌ ಲಿಂಬಾವಳಿ ತಿಳಿಸಿದರು. ಪ್ರಸಕ್ತ ಚುನಾವಣಾ ಪ್ರಚಾರದಲ್ಲಿ ಈಶ್ವರಪ್ಪ ಅವರ ಮಾತುಗಳನ್ನು ಪಕ್ಷದ ವರಿಷ್ಠರು ಗಮನಿಸಿದ್ದಾರೆ. ಈ ರೀತಿ ಮಾತನಾಡದಂತೆ ಅವರಿಗೆ ಪಕ್ಷದ ವರಿಷ್ಠರು ಸೂಚನೆ ನೀಡಲಿದ್ದಾರೆ ಎಂದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!