ರಾಜ್ಯ ಸಮರ: ಬಿಜೆಪಿಗೆ ಪೌರತ್ವ ಮಸೂದೆ, NRC ಭೀತಿ

By Web DeskFirst Published Mar 24, 2019, 4:55 PM IST
Highlights

3 ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಇಲ್ಲ | ಟಿಕೆಟ್ ಸಿಗದಿದ್ದಕ್ಕೆ ನಿರಾಶರಾದರಾ ಬಿಜೆಪಿ ಆಪದ್ಬಾಂಧವ ಹಿಮಂತ|ವಿರೋಧಿ ಅಲೆಯ ಲಾಭಕ್ಕೆ ಕಾಂಗ್ರೆಸ್ ತಂತ್ರ | ಆದರೆ ಅಜ್ಮಲ್ ಜತೆ ಮೈತ್ರಿ ಕೈಗೂಡದ್ದು ಕಾಂಗ್ರೆಸ್‌ಗೆ ಹಿನ್ನಡೆ

ಮಹಾಭಾರತ ಸಂಗ್ರಾಮ: ಅಸ್ಸಾಂ

ಗುವಾಹಟಿ[ಮಾ.24]: ದೇಶದ ಈಶಾನ್ಯ ಭಾಗದ ಪ್ರಮುಖ ರಾಜ್ಯವಾದ ಹಾಗೂ ಬಾಂಗ್ಲಾದೇಶ ಗಡಿಭಾಗಕ್ಕೆ ಹೊಂದಿಕೊಂಡಿರುವ ಅಸ್ಸಾಂನಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಭಾರಿ ಪ್ರಮಾಣದ ತುರುಸಿನ ಹಣಾಹಣಿ ಬಿಜೆಪಿ ಮೈತ್ರಿಕೂಟ, ಕಾಂಗ್ರೆಸ್ ಹಾಗೂ ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ನಡುವೆ ಏರ್ಪಡುವ ಸಾಧ್ಯತೆ ಇದೆ

2014ರ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ 14ರ ಪೈಕಿ 7 ಲೋಕಸಭಾ ಸ್ಥಾನಗಳಲ್ಲಿ ಜಯಿಸಿತ್ತು. ಇನ್ನುಳಿದ 7 ಸ್ಥಾನಗಳಲ್ಲಿ ಕಾಂಗ್ರೆಸ್ 4 ಹಾಗೂ ಅಜ್ಮಲ್ ಅವರ ಎಐಯುಡಿಎಫ್ 3 ಸ್ಥಾನಗಳಲ್ಲಿ ಗೆದ್ದಿದ್ದವು. ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ತನ್ನ ಸ್ಥಿತಿಯನ್ನು ಇನ್ನಷ್ಟು ಸುಧಾರಿಸಿಕೊಂಡಿದ್ದ ಬಿಜೆಪಿ, ಏಕಾಂಗಿಯಾಗಿ ರಾಜ್ಯದಲ್ಲಿ ಬಹುಮತ ಪಡೆದಿತ್ತು.

ಆದರೆ ಆಡಳಿತ ವಿರೋಧಿ ಅಲೆ, ನಾಗರಿಕತ್ವ ಮಸೂದೆ ಹಾಗೂ ರಾಷ್ಟ್ರೀಯ ನಾಗರಿಕತ್ವ ನೋಂದಣಿ ವಿವಾದಗಳು ಬಿಜೆಪಿಗೆ ಈ ಚುನಾವಣೆಯಲ್ಲಿ ಕಬ್ಬಿಣದ ಕಡಲೆಯಾಗಿ ಮಾರ್ಪಡಬಹುದು ಎಂದು ಹೇಳಲಾಗಿದೆ.

ಹಾಲಿ ಸಂಸದರಿಗಿಲ್ಲ ಟಿಕೆಟ್: ಬಿಜೆಪಿ ಗುರುವಾರ ಸಂಜೆ ಅಸ್ಸಾಂನ ೮ ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಿದ್ದು, ಮೂವರು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದೆ. ಈ ಸಂಸದರು ಸಾಧನೆ ಮಾಡುವುದರಲ್ಲಿ ವಿಫಲವಾಗಿದ್ದಕ್ಕೇ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂಬುದು ಮೂಲಗಳ ಹೇಳಿಕೆ.

ಇದು ಆಡಳಿತ ವಿರೋಧಿ ಅಲೆಯು ರಾಜ್ಯದಲ್ಲಿ ಆವರಿಸಿರಬಹುದು ಎಂಬುದರ ದ್ಯೋತಕವಾಗಿದ್ದು, ಇದರಿಂದ ಹೊರಬರಲು ಹಳಬರ ಬದಲಾಗಿ ಹೊಸಬರಿಗೆ ಮಣೆ ಹಾಕಿ ರಾಜ್ಯವನ್ನು ಪುನಃ ಕೈವಶ ಮಾಡಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಇನ್ನು ಈಶಾನ್ಯ ಎನ್‌ಡಿಎ ಸಂಚಾಲಕ ಹಾಗೂ ಅಸ್ಸಾಂ ಸರ್ಕಾರದ ನಂ.೨ ಸಚಿವ ಹಿಮಂತ ಬಿಸ್ವ ಶರ್ಮಾ ಅವರು ಲೋಕಸಭೆ ಚುನಾವಣೆಗೆ ತೇಜ್‌ಪುರದಿಂದ ಸ್ಪರ್ಧಿಸಲು ಇಚ್ಛಿಸಿದ್ದರು. ‘ನಾನು ಗುವಾಹಟಿಗಿಂತ ದಿಲ್ಲಿ ರಾಜಕಾರಣದಲ್ಲಿ ಇರಲು ಬಯಸುತ್ತೇನೆ’ ಎಂದು ಹೇಳಿದ್ದರು. ಆದರೆ ಅಚ್ಚರಿಯ ಸಂಗತಿಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಹಿಮಂತ ಅವರಿಗೆ ಟಿಕೆಟ್ ನಿರಾಕರಣೆಯಾಗಿವುದು ತಪ್ಪು ಸಂದೇಶ ರವಾನಿಸಬಹುದು ಎಂದು ಅರಿತ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಈ ಸಂಬಂಧ ಸರಣಿ ಟ್ವೀಟ್‌ಗಳನ್ನು ಮಾಡಿ, ‘ಈಶಾನ್ಯ ರಾಜ್ಯಗಳ ಸಂಪೂರ್ಣ ಜವಾಬ್ದಾರಿಯನ್ನು ಶರ್ಮ ಅವರ ಮೇಲೆ ಹೊರಿಸಲಾಗಿದೆ. ಹೀಗಾಗಿ ಅವರು ‘ಸದ್ಯದ ಮಟ್ಟಿಗೆ’ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ’ ಎಂದು ಸ್ಪಷ್ಟಪಡಿಸಿದ್ದಾ

ಇನ್ನು ನಾಗರಿಕತ್ವ ಮಸೂದೆ ವಿವಾದದ ಕಾರಣ ಬಿಜೆಪಿ ಸಂಗ ತೊರೆದಿದ್ದ ಪ್ರಫುಲ್ಲ ಕುಮಾರ್ ಮಹಂತ ಅವರ ಅಸೋಂ ಗಣ ಪರಿಷತ್ (ಎಜಿಪಿ) ಕೊನೆಯ ಕ್ಷಣದಲ್ಲಿ ಎನ್ ಡಿಎಗೆ ಮರಳಿದ್ದು, ಬಿಜೆಪಿಯಲ್ಲಿ ಸಮಾಧಾನ ಉಂಟು ಮಾಡಿದೆ.

ಈ ನಡುವೆ, ಕೇಂದ್ರ ಹಾಗೂ ರಾಜ್ಯಗಳೆರಡರಲ್ಲೂ ಬಿಜೆಪಿ ಸರ್ಕಾರ ಇದ್ದರೂ ಅಂದುಕೊಂಡಷ್ಟು ಬಿಜೆಪಿ ಸಾಧನೆ ಮಾಡಿಲ್ಲ ಎಂಬುದು ಕೆಲವು ಮತದಾರರ ಅನಿಸಿಕೆ

ಕಾಂಗ್ರೆಸ್-ಅಜ್ಮಲ್ ಮಹಾಮೈತ್ರಿ ಇಲ್ಲ:

ಈ ನಡುವೆ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಏಕಾಂಗಿ ಹೋರಾಟ ನಡೆಸುವುದು ಖಚಿತವಾಗಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಪ್ರಮುಖ ನಾಯಕರಾದ ಸುಷ್ಮಿತಾ ದೇವ್ ಸಿಲ್ಚಾರ್‌ನಿಂದ ಹಾಗೂ ಗೌರವ್ ಗೊಗೋಯ್ ಕಾಲಿಬೋರ್‌ನಿಂದ ಸ್ಪರ್ಧಿಸಲಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಸ್ಪರ್ಧಿಸುತ್ತಿಲ್ಲ.

ಇನ್ನು ಕಳೆದ ಸಲ 3 ಸಂಸದರ ಹೊಂದಿದ್ದ ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ಜತೆ ಈ ಸಲ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಬಹುದು ಎನ್ನಲಾಗುತ್ತಿತ್ತಾದರೂ ಅದು ಸುಳ್ಳಾಗಿದೆ. ಅಂಥ ಯಾವುದೇ ಸಾಧ್ಯತೆ ಇಲ್ಲ ಎಂದು ತರುಣ್ ಗೊಗೋಯ್ ಹೇಳಿದ್ದಾರೆ.

ಆದರೆ ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ನಾಗರಿಕತ್ವ ಮಸೂದೆಗೆ ಅಸ್ಸಾಂನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ಜತೆಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ತಮ್ಮ ಪೌರತ್ವ ಸಾಬೀತುಪಡಿಸಲು ೪೦ ಲಕ್ಷ ಮಂದಿ ವಿಫಲರಾಗಿದ್ದಾರೆ. ಇನ್ನು ರಾಜ್ಯದಲ್ಲಿನ ಬಂಡುಕೋರರ ಹಾವಳಿ. ಈ ಮೂರೂ ವಿಷಯಗಳು ಪ್ರಮುಖವಾಗಿ ಚುನಾವಣೆಯಲ್ಲಿ ಪ್ರಸ್ತಾಪವಾಗಲಿದ್ದು, ಇವನ್ನೇ ಬಳಸಿಕೊಂಡು ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್ ಹವಣಿಸಿದೆ.

ಪ್ರಮುಖ ಅಭ್ಯರ್ಥಿಗಳು

ಮಾಜಿ ಸಿಎಂ ತರುಣ್ ಗೊಗೋಯ್ ಅವರ ಪುತ್ರ ಗೌರವ್ ಗೊಗೋಯ್ (ಕಾಂಗ್ರೆಸ್)

ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್ (ಕಾಂಗ್ರೆಸ್)

ಮುಸ್ಲಿಂ ಮುಖಂಡ ಬದ್ರುದ್ದೀನ್ ಅಜ್ಮಲ್ (ಎಐಯುಡಿಎಫ್)

ಪ್ರಮುಖ ಅಭ್ಯರ್ಥಿಗಳು

*ಕಾಲಿಬೋರ್ *ಸಿಲ್ಚಾರ್ *ಧುಬ್ರಿ *ಮಂಗಳದೋಯಿ *ಗುವಾಹಟಿ ಪ್ರಮುಖ ಕ್ಷೇತ್ರ

ಚುನಾವಣಾ ವಿಷಯಗಳು

ಭಯೋತ್ಪಾದನೆ, ಅಕ್ರಮ ಒಳನುಸುಳುವಿಕೆ, ನಾಗರಿಕತ್ವ ಮಸೂದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ, ೬ ಸಮುದಾಯಗಳಿಗೆ ಎಸ್‌ಟಿ ಸ್ಥಾನಮಾನ ನೀಡಿಕೆ ವಿವಾ

click me!