ಬಿಜೆಪಿ ಬೆಂಬಲದಿಂದ ನನಗೆ ದೊಡ್ಡ ಶಕ್ತಿ ಬಂದಿದೆ : ಸುಮಲತಾ

By Web DeskFirst Published Mar 25, 2019, 9:58 AM IST
Highlights

ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು, ಬಿಜೆಪಿ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೇ ಸುಮಲತಾಗೆ ಬೆಂಬಲ ನೀಡಿದೆ. ಈ ನಿಟ್ಟಿನಲ್ಲಿ ಬಿಜೆಪಿ ಬೆಂಬಲ ತಮಗೆ ಹೆಚ್ಚಿ ಶಕ್ತಿ ತುಂಬಿದೆ ಎಂದು ಹೇಳಿದ್ದಾರೆ. 

ಬೆಂಗಳೂರು: ಬಿಜೆಪಿ ಬೆಂಬಲ ಸೂಚಿಸಿರುವುದ ರಿಂದ ನನಗೆ ದೊಡ್ಡ ಶಕ್ತಿ ಬಂದಂತಾಗಿದೆ. ಜೊತೆಗೆ ಮಂಡ್ಯ ಜಿಲ್ಲೆಯ ಅನೇಕ ಸ್ಥಳೀಯ ಮುಖಂಡರು ನನ್ನ ಪರವಾಗಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದಲ್ಲಿ ಬಿಜೆಪಿಗೆ ಬೆಂಬಲ ಸೂಚಿಸುವ ಕುರಿತು ಮತದಾರರ ಅಭಿಪ್ರಾಯ ಪಡೆದು ನಿರ್ಧರಿಸಲಾಗು ವುದು ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ನಡೆದ ದಿವಂಗತ ನಟ ಅಂಬರೀಶ್ ಅವರ ನಾಲ್ಕನೇ ತಿಂಗಳ ಪೂಜಾ ಕಾರ್ಯ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಬಿಜೆಪಿ ಬೆಂಬಲ ಸೂಚಿಸಲಿದೆ ಎಂಬ ನಿರೀಕ್ಷೆ ಇತ್ತು.

ಇದೀಗ ಬೆಂಬಲ ಸೂಚಿಸಿರುವುದರಿಂದ ಅತಿ ಹೆಚ್ಚು ಬಹುಮತದಿಂದ ಗೆಲುವು ಸಾಧಿಸಲು ಸಾಧ್ಯವಾಗಲಿದೆ. ಬೆಂಬಲ ಸೂಚಿಸಿರುವುದರಿಂದ ಶೀಘ್ರದಲ್ಲಿಯೇ ಬಿಜೆಪಿ ನಾಯಕರನ್ನು ಭೇಟಿ ಯಾಗಿ ಕೃತಜ್ಞತೆಗಳನ್ನು ಸಲ್ಲಿಸಲಿದ್ದೇನೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ದೊಡ್ಡ ಹೋರಾಟ ನಡೆಸಿದಂತೆ. ಇದು ನನ್ನ ಜೀವನದ ಹೊಸ ಅಧ್ಯಾಯವಾಗಿದೆ. ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಈಗಾಗಲೇ ರೈತ ಸಂಘ ಪ್ರಕಟಿಸಿದೆ. ಕಾವೇರಿ ಹೋರಾಟ ಸಮಿತಿಯ ಜಿ. ಮಾದೇಗೌಡರ ಆಶೀರ್ವಾದ ಪಡೆದಿದ್ದೇನೆ. ಜೊತೆಗೆ, ಇಡೀ ಜಿಲ್ಲೆಯಾದ್ಯಂತ ಮಹಿಳಾ ಅಭಿಮಾನಿಗಳ ಬೆಂಬಲ ನನಗಿದೆ ಎಂದರು.

ಕಾಂಗ್ರೆಸ್ಸಿಗರು ನನ್ನ ಪರ: ಮಂಡ್ಯ ಜಿಲ್ಲೆಯ ಸ್ಥಳೀಯ ಕಾಂಗ್ರೆಸ್ ಮುಖಂಡರು ನನ್ನ ಪರವಾಗಿದ್ದಾರೆ. ಚುನಾವಣೆಯಲ್ಲಿ ಅವರ ಬೆಂಬಲವೂ ಸಿಗಲಿದೆ. ನನಗೆ ಬೆಂಬಲ ಸೂಚಿಸಲಿದ್ದಾರೆ ಎಂಬ ಕಾರಣದಿಂದ ಕೆಲ ಸ್ಥಳೀಯ ನಾಯಕರನ್ನು ಕಾಂಗ್ರೆಸ್ ಪಕ್ಷ ಉಚ್ಚಾಟಿಸಲು ಮುಂದಾಗಿದೆ. ಆದರೆ ಇದಕ್ಕೆ ಜಗ್ಗದ ನಾಯಕರು ಯಾವುದೇ ಕ್ರಮ ಕೈಗೊಂಡರೂ ನನ್ನ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶೀಘ್ರದಲ್ಲಿ ಚಿಹ್ನೆ: ಯಾವ ಚಿಹ್ನೆ ಎಂಬುದು ಇನ್ನೂ ಗೊತ್ತಾಗಿಲ್ಲ. ಚುನಾವಣಾ ಆಯೋಗದಿಂದ ಚಿಹ್ನೆ ಸಿಕ್ಕ ಬಳಿಕ ಪ್ರಚಾರ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು. ಇಡೀ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಮತದಾರರನ್ನು ತಲುಪಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

click me!