ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿಯೊಳಗೆ ಕೂಗು ಶುರು

By Web DeskFirst Published May 24, 2019, 10:02 AM IST
Highlights

ಲೋಕಸಭಾ ಚುನಾವಣೆ ಮುಕ್ತಾಯವಾಗಿ ಫಲಿತಾಂಶ ಕುತೂಹಲಕ್ಕೆ ತೆರೆ ಬಿದ್ದಿದೆ. ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದ್ದು ಪಕ್ಷದೊಳಗೆ ಸರ್ಕಾರ ರಚನೆಯ ಕೂಗು ಕೇಳಿ ಬರುತ್ತಿದೆ. 

ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯ ಬಿಜೆಪಿಯಲ್ಲಿ ಸಂಭ್ರಮದ ಹೊಳೆಯನ್ನೇ ಹರಿಯುವಂತೆ ಮಾಡಿದೆ. ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ 22 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂಬ ಮಾತನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹಲವು ಬಾರಿ ಹೇಳಿಕೊಂಡು ಬಂದಿದ್ದರೂ ಅವರ ಪಕ್ಷದ ಅನೇಕ ಮುಖಂಡರೇ ನಂಬಿರಲಿಲ್ಲ. ಆದರೆ, ಕಳೆದ ಬಾರಿಗಿಂತ ಹೆಚ್ಚು
ಸ್ಥಾನ ಗಳಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದರು.

ಗುರುವಾರ ಫಲಿತಾಂಶ ಹೊರಬಿದ್ದ ಬಳಿಕ ಬಿಜೆಪಿ ಪಾಳೆಯದಲ್ಲಿ ಸಂಭ್ರಮದ ಜೊತೆಗೆ ಅಚ್ಚರಿಯೂ ಉಂಟಾಗಿದ್ದು, ಈ ಮಟ್ಟದ ಸ್ಥಾನಗಳನ್ನು ಗಳಿಸಿದ ಮೇಲೆ ರಾಜ್ಯದಲ್ಲಿ ಪರ್ಯಾಯ ಸರ್ಕಾರವನ್ನೂ ರಚಿಸಬೇಕು ಎಂಬ ಕೂಗು ಪಕ್ಷದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ರಾಜ್ಯದ ಜನರು ಕೇವಲ ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಪರವಾಗಿ ಮತ ಹಾಕಿಲ್ಲ. 

ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸರ್ಕಾರದ ಬಗ್ಗೆ ಅಸಮಾಧಾನಗೊಂಡು ಅದರ ವಿರುದ್ಧವೂ ಮತ ಚಲಾಯಿಸಿದ್ದಾರೆ. ಕೇಂದ್ರ  ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ ಇದ್ದಲ್ಲಿ ರಾಜ್ಯದ ಅಭಿವೃದ್ಧಿ ನೆರವಾಗುತ್ತದೆ. ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಬಹುದು. ಹೀಗಾಗಿ, ಶತಾಯಗತಾಯ ಪರ್ಯಾಯ ಸರ್ಕಾರ ರಚನೆಗೆ ತೀವ್ರ ಪ್ರಯತ್ನ ನಡೆಸಬೇಕು ಎಂಬ ಪಕ್ಷದ ಮುಖಂಡರ 
ಒತ್ತಾಸೆಗೆ ಈ ಫಲಿತಾಂಶ ನೆರವಾಗುವ ಸಾಧ್ಯತೆ ಹೆಚ್ಚಿದೆ. 

ಈಗ ಎದುರಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಫಲಿತಾಂಶ ಮುಂದಿಟ್ಟುಕೊಂಡು ಹೋಗುವ ಮೂಲಕ ಅಲ್ಲಿಯೂ ಜಯ ಮುಂದುವರೆಸಲು ಅನುಕೂಲವಾಗಲಿದೆ ಎಂಬ ಚರ್ಚೆ ನಡೆದಿದೆ. 

click me!