'ಜನ ಏನನ್ನು ನೋಡಿದರು ಎಂಬುದೇ ಗೊತ್ತಾಗುತ್ತಿಲ್ಲ, ಒಬ್ಬ ಪ್ರಜೆಯಾಗಿ ಆತಂಕವಿದೆ'

By Web DeskFirst Published May 24, 2019, 8:56 AM IST
Highlights

ಒಬ್ಬ ಪ್ರಜೆಯಾಗಿ ಆತಂಕವಿದೆ: ಪ್ರಕಾಶ್‌ರಾಜ್‌| ಜನ ಏನನ್ನು ನೋಡಿದರು ಎಂಬುದೇ ಗೊತ್ತಾಗುತ್ತಿಲ್ಲ: ಕೇಂದ್ರ ಕ್ಷೇತ್ರದ ಪರಾಜಿತ ಅಭ್ಯರ್ಥಿ

ಬೆಂಗಳೂರು[ಮೇ.24]: ನಾಲ್ಕು ಲಕ್ಷಕ್ಕಿಂತ ಹೆಚ್ಚು ಮತ ಪಡೆದು ಅನಂತಕುಮಾರ್‌ ಹೆಗಡೆ ಅಂಥವರು ಗೆಲ್ಲುತ್ತಾರೆ ಎಂದರೆ ಒಬ್ಬ ಪ್ರಜೆಯಾಗಿ ನನಗೆ ಆತಂಕವಿದೆ ಎಂದು ಕೇಂದ್ರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ನಟ ಪ್ರಕಾಶ್‌ ರಾಜ್‌ ಹೇಳಿದ್ದಾರೆ.

ಗುರುವಾರ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಚುನಾವಣೆ ವೇಳೆ ಏನನ್ನು ನೋಡಿದರು ಎಂಬುದೇ ಗೊತ್ತಾಗುತ್ತಿಲ್ಲ. ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸೋಲಿನಿಂದ ಜವಾಬ್ದಾರಿ ಹೆಚ್ಚಾಗಿದೆ. ಇನ್ನು ಮುಂದೆ ಪರ್ಯಾಯ ರಾಜಕಾರಣ ಪ್ರಾರಂಭಿಸಬೇಕಿದೆ. ಸಮಾನ ಮಾನಸ್ಕರೆಲ್ಲಾ ಒಟ್ಟಾಗಿ ಸೇರಿ ದೇಶದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ಕೇವಲ ಒಂದು ಚುನಾವಣೆ ಮಾತ್ರವಲ್ಲ, ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಜನರ ಮಧ್ಯೆ ಹೋದಾಗ ಸಮಸ್ಯೆಗಳು ಕಾಣಿಸಿದವು. ಜನ ಕಷ್ಟಗಳನ್ನು ನೋಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಬಾಲಕೋಟ್‌ ದಾಳಿ, ದೇಶದ ಸುರಕ್ಷತಾದಂತಹ ರಾಷ್ಟ್ರೀಯ ವಿಚಾರಗಳು ಚುನಾವಣೆಯಲ್ಲಿ ಕೆಲಸ ಮಾಡಿವೆ. ದೇಶಕ್ಕೆ ಪರ್ಯಾಯ ಪ್ರಧಾನಿ ಅಭ್ಯರ್ಥಿ ಯಾರು ಎಂಬ ವಿಚಾರ ಪರಿಣಾಮ ಬೀರಿದೆ. ನಾವು ನಮ್ಮ ಅಭ್ಯರ್ಥಿಯನ್ನು ನೋಡಿ ಆಯ್ಕೆ ಮಾಡಬೇಕು. ಕೆಲಸಕ್ಕಿಂತ ಜನ ಬೇರೆ ಏನೋ ನೋಡುತ್ತಿದ್ದಾರೆ. 10 ವರ್ಷ ಯಾವುದೇ ಕೆಲಸ ಮಾಡದ ಪಿ.ಸಿ.ಮೋಹನ್‌ ಅಂತಹ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆಂದರೆ ಜನ ಏನನ್ನು ನೋಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ತೀಕ್ಷ$್ಣವಾಗಿ ಹೇಳಿದರು.

ಇದು ನನಗಾಗಿರುವ ದೊಡ್ಡ ಕಪಾಳಮೋಕ್ಷ. ನನ್ನ ದಾರಿಯುದ್ದಕ್ಕೂ ಬಹಳ ನಿಂದನೆ, ಅಪಮಾನ ಹಾಗೂ ನನ್ನ ವಿರುದ್ಧ ಹೆಚ್ಚು ಟ್ರೋಲ್‌ಗಳಾಗಿದ್ದವು. ಆದರೂ ನಾನು ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ಜ್ಯಾತ್ಯೀತ ಭಾರತಕ್ಕಾಗಿ ನನ್ನ ಹೋರಾಟ ಮುಂದುವರೆಯಲಿದ್ದು, ಕಷ್ಟಕರವಾದ ಹಾದಿ ಈಗ ಆರಂಭವಾಗಿದೆ. ಲೋಕಸಭಾ ಚುನಾವಣೆಯ ಪ್ರಯಾಣದಲ್ಲಿ ನನ್ನ ಜತೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

-ಪ್ರಕಾಶ್‌ ರಾಜ್‌, ಬೆಂ.ಕೇಂದ್ರದ ಪರಾಜಿತ ಅಭ್ಯರ್ಥಿ.

click me!